Bengaluru- ಡಿಸಿಎಂ ಖಡಕ್ ವಾರ್ನಿಂಗ್: ದಿವ್ಯಶ್ರೀ, ಶಿವಕುಮಾರ ಯಾರೇ ಇರ್ಲಿ, ರಾಜಕಾಲುವೆ ಒತ್ತುವರಿ ತೆರವು ಮಾಡ್ಬೇಕಷ್ಟೇ!
ಬೆಂಗಳೂರಿನಲ್ಲಿ ರಾಜಾಲುವೆ ಒತ್ತುವರಿ ಮಾಡಿದವರು ಯಾರೇ ಆಗಿರಲಿ ತಾವೇ ಒತ್ತುವರಿ ತೆರವು ಮಾಡಬೇಕು. ಕೋರ್ಟ್ ಕೇಸ್ ತಾವೇ ಹಿಂಪಡೆದು ಸಹಾಕರ ನೀಡಬೇಕು.
ಬೆಂಗಳೂರು (ಜೂ.08): ಬೆಂಗಳೂರಿನಲ್ಲಿ ಕಳೆದ ವರ್ಷ ಮಳೆನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದೇ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಖಾಸಗಿ ಡೆವಲಪರ್ಸ್‌ಗಳು ನೀರು ಹರಿಯುವ ರಾಜಕಾಲುವೆ ದಾರಿಯನ್ನ ಮುಚ್ಚಿದ್ದಾರೆ. ದಿವ್ಯಶ್ರೀ ಇರ್ಲಿ, ಶಿವಕುಮಾರನ ಅಪಾರ್ಟ್ಮೆಂಟ್ ಇರ್ಲಿ, ರಾಜಕಾಲುವೆ ತೆರವು ಮಾಡ್ಬೇಕಷ್ಟೇ. ಅದನ್ನು ತೆರವುಗೊಳಿಸಲು ಕೋರ್ಟು ಕಚೇರಿಗೆ ಹೋಗುತ್ತಿದ್ದಾರೆ. ಕೋರ್ಟ್ ಕೇಸನ್ನ ತಾವಾಗೇ ಹಿಂಪಡೆದು ಸಹಕಾರ ನೀಡಬೇಕು, ಇಲ್ಲವಾದರೆ ಬೇರೆ ರೀತಿ ಇತ್ಯರ್ಥ ಮಾಡೋದು ನಮಗೆ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಗುರುವಾರ ಬೆಳಗ್ಗೆಯಿಂದ ಬೆಂಗಳೂರಿನ ರಾಜಕಾಲುವೆ, ಕೆರೆಗಳನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಕಳೆದ ವರ್ಷ ನೀರು ಹರಿಯದೆ ಬೆಂಗಳೂರಿಗೆ ಕೆಟ್ಟು ಹೆಸರು ಬಂದಿತ್ತು. ಆ ಸ್ಥಳಗಳನ್ನ ಇವತ್ತು ವೀಕ್ಷಣೆ ಮಾಡಿದ್ದೇನೆ. ರಾಜ್ಯದಲ್ಲಿ ಬೆಂಗಳೂರು ಹೆಚ್ಚು ತೆರಿಗೆ ನೀಡುತ್ತಿರುವ ಜಾಗವಾಗಿದೆ. ಅತೀ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿರುವ ಜಾಗವಾಗಿದೆ. ಕೆರೆ ತುಂಬಿ ರಸ್ತೆಗಳು ಮುಚ್ಚಿ ನಾಗರೀಕರಿಗೆ ತೊಂದರೆ ಆಗಿತ್ತು. ಇವತ್ತು ಎಲ್ಲ ಅಧಿಕಾರಿಗಳ ಜೊತೆ ವೀಕ್ಷಣೆ ಮಾಡಿದ್ದೇನೆ. ಸಮಸ್ಯೆ ತಿಳಿದುಕೊಂಡಿದ್ದೇನೆ ಜೊತೆಗೆ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಕೋಡಿಮಠ ಶ್ರೀಗಳ ಭವಿಷ್ಯ: ದೇಶಕ್ಕೆ ಕಾದಿದೆ ಮತ್ತೊಂದು ಗಂಡಾಂತರ, ಸಮುದ್ರದಲ್ಲಿ 2 ರಾಷ್ಟ್ರ ಮುಳುಗಡೆ
ನೋಟಿಸ್ ಕೊಡೊಲ್ಲ, ಬಾಯಿಮಾತಲ್ಲಿ ಹೇಳೋದನ್ನ ಕೇಳಬೇಕು: ದಿವ್ಯಶ್ರೀ ಇರ್ಲಿ, ಶಿವಕುಮಾರನ ಅಪಾರ್ಟ್ಮೆಂಟ್ ಇರ್ಲಿ ರಾಜಕಾಲುವೆ ಎಷ್ಟಿರಬೇಕು ಅಷ್ಟೇ ಇರಬೇಕು ಅವರೇ ತೆರವು ಮಾಡಿದ್ರೆ ಒಳ್ಳೆದು. ಇಲ್ಲದಿದ್ರೆ ನಾವೇ ಮಾಡ್ತಿವಿ. ನೋಟಿಸ್ ಕೊಟ್ಟರೆ ಅವರು ಕೋರ್ಟ್ ಗೆ ಹೋಗ್ತಾರೆ. ಹೀಗಾಗಿ ಬಾಯಿ ಮಾತಲ್ಲೇ ಹೇಳ್ತಿದಿನಿ. ಬಡವರು, ಶ್ರೀಮಂತರು ಅಂತ ಇಲ್ಲಿ ಬರೊಲ್ಲ, ಎಲ್ಲಿ ಒತ್ತುವರಿ ಮಾಡಿದ್ದಾರೋ ಅಲ್ಲಿ ತೆರವು ಆಗಬೇಕಷ್ಟೇ. ನ್ಯಾಯಾಲಯದಲ್ಲಿರೋ ವಿಚಾರಗಳನ್ನೂ ನಾವು ಬೇರೆ ರೀತಿಯಾಗಿ ಇತ್ಯರ್ಥ ಮಾಡ್ತಿವಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಖಾಸಗಿ ಡೆವಲಪರ್ಸ್‌ಗೆ ಕಡಿವಾಣ ಹಾಕ್ತೇವೆ: ಖಾಸಗಿ ಡೆವಲಪರ್ಸ್ ಕಾಲುವೆಗಳನ್ನ ಮುಚ್ಚಿದ್ದಾರೆ. ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು. ಎಲ್ಲ ಸಮಸ್ಯೆಗಳನ್ನ ಒಂದೇ ದಿನ ಪರಿಹರಿಸುತ್ತೇನೆ ಎಂದು ಹೇಳಲ್ಲ. ನೀರು ಸರಿಯಾಗಿ ಹರಿಯಲು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಬೆಂಗಳೂರಿನಲ್ಲಿ 859 ಕಿ.ಮೀ ಕಾಲುವೆಗಳ ಕೆಲಸ ಆಗಿದೆ. 491 ಕಿ.ಮೀ ಕಾಮಗಾರಿ ಕೆಲಸ ನಡೆಯುತ್ತಿದೆ. ಇನ್ನು 173 ಕಿ.ಮೀ ಕಾಮಗಾರಿ ಇನ್ನು ಬಾಕಿ ಇದೆ. ಮಳೆ ನೀರಿನಿಂದ ತೊಂದರೆಯಾಗುತ್ತಿದೆ. ಮುಂದೆ ಆ ರೀತಿ ತೊಂದರೆ ಆಗದಂತೆ ಬಿಬಿಎಂಪಿ, ಬಿಡಿಎ, ಬೆಸ್ಕಾಂ ಎಲ್ಲ ಸಂಸ್ಥೆಗಳು ಕೆಲಸ ಮಾಡಬೇಕು. ಕಾಮಗಾರಿಯ ಪ್ರಗತಿಯೊಂದಿಗೆ ಬೆಂಗಳೂರಿನ ಅಭಿವೃದ್ಧಿ ಆಗಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ: ಕೆಲವು ಪಾಠಗಳು ಮಾತ್ರ ಬೋಧಿಸಲು ಅನುಮತಿ
ನೀವಾಗೇ ಸ್ಟೇ ವಿಥ್‌ಡ್ರಾ ಮಾಡಿಕೊಳ್ಳಿ: ಖಾಸಗಿಯವರು ಮಾಡಿರುವ ಕೆಲಸಗಳಲ್ಲಿ ನೀರು ಹರಿಯುವ ದಾರಿಯನ್ನ ಮುಚ್ಚಿದ್ದಾರೆ. ಅದನ್ನು ತೆರವುಗೊಳಿಸಲು ಕೋರ್ಟು ಕಚೇರಿಗೆ ಹೋಗುತ್ತಿದ್ದಾರೆ. ನೀವು ಸಹಕಾರ ಕೊಟ್ಟರೆ ಓಕೆ. ಯಾರು ತೆರವುಗೊಳಿಸಬಾರದು ಅಂತ ಕೋರ್ಟ್ ನಲ್ಲಿ ಸ್ಟೇ ತಂದಿದ್ದೀರೋ ಅವರೇ ಹೋಗಿ ಸ್ಟೇ ಆದೇಶವನ್ನು ಕೂಡಲೇ ವಿತ್ ಡ್ರಾ ಮಾಡಿಕೊಳ್ಳಿ. ವಿತ್ ಡ್ರಾ ಮಾಡಿಕೊಳ್ಳಲಿಲ್ಲ ಅಂದ್ರೆ ನಮಗೂ ಅಧಿಕಾರ ಇದೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ವಾರ್ನಿಂಗ್ ನೀಡಿದರು. ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು ಆಫೀಸ್ ನಲ್ಲಿ ಕೂತು ನೋಡಿ ಹೇಳಿದರೆ, ನನಗೆ ಸಮಾಧಾನ ಆಗಲ್ಲ. ಆದ್ದರಿಂದ ಬೆಂಗಳೂರು ವೀಕ್ಷಣೆಗೆ ಬಂದಿದ್ದೇನೆ ಎಂದರು.