ಕರ್ನಾಟಕದಲ್ಲಿ ಯಾವ ಕುರ್ಚಿಗಳೂ ಅಲ್ಲಾಡುತ್ತಿಲ್ಲ. ಎಲ್ಲ ಕುರ್ಚಿಗಳೂ ಗಟ್ಟಿಯಾಗಿವೆ. ಪ್ರಧಾನಿಯವರ ಕಣ್ಣಿಗೆ ಏನು ಕಾಣುತ್ತಿದೆಯೋ ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಮುದಗಲ್‌ (ಮೇ.11): ಕರ್ನಾಟಕದಲ್ಲಿ ಯಾವ ಕುರ್ಚಿಗಳೂ ಅಲ್ಲಾಡುತ್ತಿಲ್ಲ. ಎಲ್ಲ ಕುರ್ಚಿಗಳೂ ಗಟ್ಟಿಯಾಗಿವೆ. ಪ್ರಧಾನಿಯವರ ಕಣ್ಣಿಗೆ ಏನು ಕಾಣುತ್ತಿದೆಯೋ ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. ಕರ್ನಾಟಕದಲ್ಲಿ ಸಿಎಂ ಕುರ್ಚಿ ಅಲುಗಾಡುತ್ತಿದೆ. ಕೇರಳ, ಪಂಜಾಬ್‌ನಲ್ಲೂ ಇದೇ ರೀತಿ ಆಗಿದೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

ಇನ್ನು ಅಗಲಿದ ಸಚಿವ ಡಾ. ಸುಧಾಕರ್‌ ಅವರನ್ನು ನೆನೆದ ಡಿಸಿಎಂ ಡಿ.ಕೆ.ಶಿವಕುಮಾರ್‌, ಭದ್ರಾ ಮೇಲ್ದಂಡೆ ಯೋಜನೆ ಉದ್ಘಾಟನೆಗೆ ಸಚಿವ ಸುಧಾಕರ್ ಇರಬೇಕಿತ್ತು. ಕಳೆದೊಂದು ತಿಂಗಳ ಹಿಂದೆ ಮಂಡಿ ಶಸ್ತ್ರಚಿಕಿತ್ಸೆಗೆಂದು ಆತ್ಮೀಯರಾದ ಸುಧಾಕರ್‌ ಅವರು ಆಸ್ಪತ್ರೆಗೆ ಹೋಗಿದ್ದರು. ನಂತರ ಲಂಗ್ಸ್‌ ಇನ್ಫೆಕ್ಷನ್‌ ಆಗಿ ಸಾಕಷ್ಟು ತೊಂದರೆ ಉಂಟಾಗಿತ್ತು. ಎಲ್ಲ ರೀತಿಯ ಪ್ರಯತ್ನಗಳು ಮಾಡಿದರೂ ಸಹ ಫಲ ದೊರೆಯಲಿಲ್ಲ. ಸಹಕಾರಿ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಬಹಳ ವರ್ಷಗಳ ಕಾಲ ಅಪೆಕ್ಷ್ ಬ್ಯಾಂಕ್‌ನಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅವರು ಭದ್ರಾ ಮೇಲ್ದಂಡೆ ಯೋಜನೆಯ ನೀರಾವರಿ ಮಾಡಲು ಎಲ್ಲ ಶಾಸಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಯಶಸ್ವಿಯಾಗಿದ್ದರು.

ಭದ್ರಾ ಮೇಲ್ದಂಡೆ ಯೋಜನೆ ಉದ್ಘಾಟನೆಗೆ ಅವರು ನಮ್ಮೊಡನೆ ಇರಬೇಕಿತ್ತು. ಅವರ ಅನಾರೋಗ್ಯದ ಕಾರಣಕ್ಕೆ ಇದು ಸಾಧ್ಯವಾಗಲಿಲ್ಲ. ನನ್ನನ್ನು, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದಾಗಲೆಲ್ಲ ಸದಾ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಮನವಿ ಮಾಡುತ್ತಲೇ ಇದ್ದರು. ಜೈನ ಸಮುದಾಯಕ್ಕೆ ಸೇರಿದವರು. ಕಡಿಮೆ ಜನಸಂಖ್ಯೆ ಇದ್ದರು ಸಹ ಎಲ್ಲಾ ಸಮುದಾಯದ ಜನರನ್ನ ಪ್ರೀತಿಯಿಂದ ಕಾಣುತ್ತಿದ್ದರು. ಹೃದಯ ಶ್ರೀಮಂತಿಕೆ ಇದ್ದಂತಹ ಮನುಷ್ಯ. ಇವರ ಸಾವಿನಿಂದ ನಮ್ಮ ಸರ್ಕಾರಕ್ಕೆ, ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ. ನನಗೆ ವೈಯಕ್ತಿಕವಾಗಿ ಬಹಳ ಆಘಾತ ಉಂಟಾಗಿದೆ ಎಂದು ನೋವು ವ್ಯಕ್ತಪಡಿಸಿದರು.

ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ

ಸದನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆಯಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಕುಡಿಯುವ ನೀರು ನೀಡಲು ನಮ್ಮ ಇಲಾಖೆಯಿಂದ ಹೆಚ್ಚಿನ ಆದ್ಯತೆಯಿದೆ. ಈ ಕುರಿತು ಇಲಾಖೆ ಅಧಿಕಾರಿಗಳ ಹತ್ತಿರ ಮಾತನಾಡಿ, ಯಾವ ಯಾವ ರೀತಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಅದನ್ನು ಮಾಡಲಾಗುವುದು ಎಂದು ಡಿಕೆಶಿ ಅವರು ತಿಳಿಸಿದರು.