ಬೆಂಗಳೂರು ಜಲಮಂಡಳಿಯು ಸ್ಪೇನ್‌ನಲ್ಲಿ ನಡೆದ 'ಗ್ಲೋಬಲ್ ವಾಟರ್ ಸಮಿಟ್'ನಲ್ಲಿ ಜಾಗತಿಕ ಮನ್ನಣೆ ಗಳಿಸಿದೆ. ನೀರು ಪೂರೈಕೆ, ನೈರ್ಮಲ್ಯ ಮತ್ತು ತಂತ್ರಜ್ಞಾನ ಅಳವಡಿಕೆಯಲ್ಲಿನ ಸಾಧನೆಗಾಗಿ 'ಯುಟಿಲಿಟಿ ಆಫ್ ದಿ ಇಯರ್' ಸೇರಿದಂತೆ ಮೂರು ವಿಭಾಗಗಳಲ್ಲಿ ವಿಶ್ವದ ಟಾಪ್ 5 ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಬೆಂಗಳೂರು: ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿಗೆ ಅತ್ಯುತ್ತಮ ಗುಣಮಟ್ಟದ ಕುಡಿಯುವ ನೀರು ಹಾಗೂ ನೈರ್ಮಲ್ಯವನ್ನು ಒದಗಿಸುವಲ್ಲಿ ಯಶಸ್ವಿಯಾಗಿರುವ ಬೆಂಗಳೂರು ಜಲಮಂಡಳಿಯ ಸಾಧನೆಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ವಿಶ್ವದ 5 ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ಈ ಮೂಲಕ 3 ಪ್ರಮುಖ ವಿಭಾಗಗಳಲ್ಲಿ ಟಾಪ್ 5 ಸ್ಥಾನ ಪಡೆದ ಭಾರತದ ಏಕೈಕ ನೀರು ಸರಬರಾಜು ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಲಮಂಡಳಿ ಪಾತ್ರವಾಗಿದೆ.

Add Asianetnews Kannada as a Preferred SourcegooglePreferred

ಸ್ಪೇನ್ ದೇಶದ ಮ್ಯಾಡ್ರಿಡ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಷ್ಠಿತ ‘ಗ್ಲೋಬಲ್ ವಾಟರ್ ಸಮಿಟ್ 2026’ ಸಮಾವೇಶದಲ್ಲಿ ಬೆಂಗಳೂರು ಜಲಮಂಡಳಿಯು ವಿಶ್ವದ 5 ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು, 3 ಪ್ರಮುಖ ವಿಭಾಗಗಳಲ್ಲಿ ಜಾಗತಿಕ ಟಾಪ್ 5 ಸ್ಥಾನ ಪಡೆದಿದೆ. ಈ ಪ್ರತಿಷ್ಠಿತ ಗ್ಲೋಬಲ್ ವಾಟರ್ ಸಮಿಟ್‌ ಅನ್ನು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಪ್ರತಿನಿಧಿಸಿದ್ದರು.

ಪಂಚಸೂತ್ರಗಳು ವಿಶ್ವಕ್ಕೆ ಮಾದರಿ

ಬೆಂಗಳೂರಿನಲ್ಲಿ ನೀರಿನ ಬಳಕೆ, ಮರುಬಳಕೆ ಹಾಗೂ ಸಮರ್ಥ ನಿರ್ವಹಣೆಗಾಗಿ ಜಲಮಂಡಳಿ ಅಳವಡಿಸಿಕೊಂಡಿರುವ ‘5 ಪಂಚಸೂತ್ರಗಳು’ ವಿಶ್ವಕ್ಕೆ ಮಾದರಿಯಾಗಿವೆ ಎಂದು ಸಮ್ಮೇಳನದಲ್ಲಿ ಬಣ್ಣಿಸಲಾಯಿತು. ಎಲ್ಲರಿಗೂ ಶುದ್ಧ ನೀರು ಮತ್ತು ನೈರ್ಮಲ್ಯ ಒದಗಿಸುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಜಲಮಂಡಳಿಯು ಅತ್ಯುತ್ತಮ ಮಾದರಿಯಾಗಿದೆ. ಈ ವಿಭಾಗದಲ್ಲಿ ಚಿಲಿ ದೇಶದ ಅಗುವಾಸ್‌ ನ್ಯೂವಾಸ್‌, ಮಲೇಷ್ಯಾದ ಇಂಡಾ ವಾಟರ್‌ ಕನ್ಸೋರ್ಷಿಯಮ್, ಬ್ರೆಜಿಲ್‌ನ ಸನಾಸಾ ಮತ್ತು ಪರಾನಾದ ಸನೇಪರ್‌ ಸಂಸ್ಥೆಗಳ ಜೊತೆಗೆ ಬೆಂಗಳೂರು ಜಲಮಂಡಳಿಯು ವಿಶ್ವದ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದು ಮಿಂಚಿದೆ.

ಯುಟಿಲಿಟಿ ಆಫ್ ದಿ ಇಯರ್

ಕಳೆದ 3 ವರ್ಷಗಳಲ್ಲಿ ನೀರು ಪೂರೈಕೆ, ನೈರ್ಮಲ್ಯ ಹಾಗೂ ಹೊಸ ತಂತ್ರಜ್ಞಾನಗಳ ಯಶಸ್ವಿ ಅಳವಡಿಕೆಯನ್ನು ಪರಿಗಣಿಸಿ, ಜಲಮಂಡಳಿಯು ವಿಶ್ವದ ಅತ್ಯಂತ ಪ್ರತಿಷ್ಠಿತ ‘ಯುಟಿಲಿಟಿ ಆಫ್ ದಿ ಇಯರ್’ ಪ್ರಶಸ್ತಿಯ ಅಂತಿಮ 5ರ ಪಟ್ಟಿಯಲ್ಲಿ ಮನ್ನಣೆ ಪಡೆದಿದೆ. ಇದರ ಜತೆಗೆ ಬೆಂಗಳೂರಿನ ನೀರಿನ ಬವಣೆ ನೀಗಿಸಲು ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಹಾಗೂ ಬೃಹತ್ ‘ಕಾವೇರಿ 5ನೇ ಹಂತ’ದ ಕುಡಿಯುವ ನೀರಿನ ಯೋಜನೆಯು ಸಹ ಪ್ರತ್ಯೇಕವಾಗಿ ಜಾಗತಿಕ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಜಲ ನಿರ್ವಹಣಾ ತಜ್ಞರ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ.

ಬೆಂಗಳೂರನ್ನು ಅತ್ಯುತ್ತಮ ಜಾಗತಿಕ ನಗರವನ್ನಾಗಿ ರೂಪಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಜಲಮಂಡಳಿಯು ಸುಸ್ಥಿರ ಜಲನಿರ್ವಹಣಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಇದು ‘ಬ್ರ್ಯಾಂಡ್ ಬೆಂಗಳೂರು’ ಸಂಕಲ್ಪಕ್ಕೆ ಜಾಗತಿಕ ವೇದಿಕೆಯಲ್ಲಿ ಸಿಕ್ಕಿರುವ ಬಹುದೊಡ್ಡ ಮನ್ನಣೆಯಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಹೇಳುತ್ತಾರೆ.