10 ಅಥವಾ 24 ಗಂಟೆಗಳ ಒಳಗಾಗಿ ಪರೀಕ್ಷೆಯ ಫಲಿತಾಂಶ ಕೊಡಬೇಕು| ಕೇವಲ ಶೇ.8ರಷ್ಟು ಜನ ಮಾತ್ರ ಆಸ್ಪತ್ರೆಗಳಲ್ಲಿದ್ದಾರೆ. ಇನ್ನು ಶೇ.92ರಷ್ಟು ಸೋಂಕಿತರು ಮನೆಯಲ್ಲೇ ಪ್ರತ್ಯೇಕ ವಾಸವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ|ಇವರೆಲ್ಲ ಆಸ್ಪತ್ರೆ ಬೇಕೆಂದು ಬಂದರೆ ನಮ್ಮ ಗತಿ ಏನು? ಹೀಗಾಗಿ ಮೊದಲ ಹಂತದಲ್ಲಿಯೇ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದರೆ ಸೋಂಕಿನ ತೀವ್ರತೆ ಹತ್ತಿಕ್ಕಬಹುದು: ಅಶ್ವತ್ಥನಾರಾಯಣ| 

ಬೆಂಗಳೂರು(ಏ.29): ಕೊರೋನಾ ನಿರ್ವಹಣೆಯಲ್ಲಿ ಮಂದಗತಿ, ಜಡತ್ವ ಬಿಡದಿದ್ದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಬಿಬಿಎಂಪಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಿಸುವ ಸಂಬಂಧ ಸಚಿವ ಕೆ.ಗೋಪಾಲಯ್ಯ ಅವರೊಂದಿಗೆ ಬೆಂಗಳೂರು ಪಶ್ಚಿಮ ವಲಯದ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿದ ಅವರು, ವಿವಿಧ ಹಂತದ ಅಧಿಕಾರಿಗಳಿಗೆ ಚಳಿ ಬಿಡಿಸಿದರು.

ಪರೀಕ್ಷೆ ಫಲಿತಾಂಶ, ಚಿಕಿತ್ಸೆಗೆ ಒತ್ತು ಕೊಡಿ:

10 ಅಥವಾ 24 ಗಂಟೆಗಳ ಒಳಗಾಗಿ ಪರೀಕ್ಷೆಯ ಫಲಿತಾಂಶ ಕೊಡಬೇಕು. ಕೇವಲ ಶೇ.8ರಷ್ಟು ಜನ ಮಾತ್ರ ಆಸ್ಪತ್ರೆಗಳಲ್ಲಿದ್ದಾರೆ. ಇನ್ನು ಶೇ.92ರಷ್ಟು ಸೋಂಕಿತರು ಮನೆಯಲ್ಲೇ ಪ್ರತ್ಯೇಕ ವಾಸವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲ ಆಸ್ಪತ್ರೆ ಬೇಕೆಂದು ಬಂದರೆ ನಮ್ಮ ಗತಿ ಏನು? ಹೀಗಾಗಿ ಮೊದಲ ಹಂತದಲ್ಲಿಯೇ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದರೆ ಸೋಂಕಿನ ತೀವ್ರತೆಯನ್ನು ಹತ್ತಿಕ್ಕಬಹುದು. ಆದರೆ, ಈ ಸೂತ್ರವನ್ನು ಅನುಷ್ಠಾನಕ್ಕೆ ತರಲು ಇನ್ನೂ ಮೀನಮೇಷ ಎಣಿಸುತ್ತಿರುವುದನ್ನು ಸಹಿಸಲಾಗದು ಎಂದು ಎಚ್ಚರಿಕೆ ಕೊಟ್ಟರು.

ಕೋವಿಡ್‌ ಆರೈಕೆ ಕೇಂದ್ರ, ವಾರ್‌ ರೂಂಗೆ ಸಚಿವ ಸೋಮಣ್ಣ ಭೇಟಿ

ವಿಳಂಬ ಬೇಡ: ದಿನೇಶ್‌

ಗಾಂಧಿನಗರದ ಶಾಸಕ ದಿನೇಶ್‌ ಗುಂಡೂರಾವ್‌ ಮಾತನಾಡಿ, ಮೆಡಿಕಲ್‌ ಕಿಟ್‌ ಖರೀದಿಯಲ್ಲಿ ವಿಳಂಬ ಮಾಡುವುದು ಬೇಡ. ಸಮಯ ಪೋಲು ಮಾಡಿದಷ್ಟುಜೀವಗಳು ಹೋಗುವುದು ಹೆಚ್ಚಾಗುತ್ತಿದೆ. ಇದನ್ನು ನೋಡುತ್ತಾ ಕೂರಲು ಸಾಧ್ಯವಿಲ್ಲ ಎಂದರು.

ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಮಾತನಾಡಿ, ಜನರು ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಆದರೆ, ಪರೀಕ್ಷೆ ಮಾಡುವ ವ್ಯವಸ್ಥೆ ಆರೋಗ್ಯ ಪ್ರಾಥಮಿಕ ಕೇಂದ್ರಗಳಲ್ಲಿ ಇಲ್ಲ. ವಾರ್ಡುವಾರು ಪರೀಕ್ಷೆ ಮಾಡಬೇಕು, ಅಗ ಹೆಚ್ಚು ಕೇಸುಗಳು ಬರುತ್ತವೆ ಎಂದು ಸಲಹೆ ನೀಡಿದರು.

ಪಿಪಿಇ ಕಿಟ್‌ ವಿತರಣೆ

ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅವರು ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಪಿಪಿಇ ಕಿಟ್‌ ವಿತರಿಸಿ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿದರು.