ಕೋವಿಡ್ ಆರೈಕೆ ಕೇಂದ್ರ, ವಾರ್ ರೂಂಗೆ ಸಚಿವ ಸೋಮಣ್ಣ ಭೇಟಿ
ಹೆಬ್ಬಾಳದಲ್ಲಿ ನಿರ್ಮಿಸಿರುವ ಕೇಂದ್ರ| ಶಾಸಕ ಬೈರತಿ ಸುರೇಶ್ ಹಾಜರ್| ಕೋವಿಡ್ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ವಿ. ಸೋಮಣ್ಣ|
ಬೆಂಗಳೂರು(ಏ.29): ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ಹೆಚ್ಚಾದ ಹಿನ್ನೆಲೆಯಲ್ಲಿ ಶಾಸಕ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ಅಗತ್ಯ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಸತಿ ಸಚಿವ ಹಾಗೂ ಬೆಂಗಳೂರು ಪೂರ್ವ ವಲಯ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಸಕರ ನೇತೃತ್ವದಲ್ಲಿ ಹೆಬ್ಬಾಳದ ರಾಜ್ಯ ಪಶು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ನಿರ್ಮಿಸಿರುವ ‘ಕೊರೋನಾ ಆರೈಕೆ ಕೇಂದ್ರ’ ಮತ್ತು ‘ಕೋವಿಡ್ ವಾರ್ ರೂಂ’ಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಕೋವಿಡ್ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೊರೋನಾ ರಣಕೇಕೆ: ಕರ್ಫ್ಯೂ ಮುಂದುವರಿಕೆಗೆ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಅಶೋಕ್
ನಂತರ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿತರ ಆರೈಕೆಗಾಗಿ ಸುರೇಶ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ಸದಾ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ಮೂಲಕ ಕ್ಷೇತ್ರದಲ್ಲಿ ಕೊರೋನಾ ವಿರುದ್ಧ ಪರಿಣಾಮಕಾರಿ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಜನರ ಕಷ್ಟಕ್ಕೆ ಸ್ಪಂದಿಸುವ ಸುರೇಶ್ ಅವರು ಸ್ವತಃ ಹಣ ಭರಿಸಿ ಕೊರೋನಾ ಆರೈಕೆ ಕೇಂದ್ರ, ವಾರ್ ರೂಂ ಸ್ಥಾಪಿಸಿದ್ದಾರೆ. ಈ ಸೌಲಭ್ಯಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸುವುದಾಗಿ ಕೇಳಿದರೂ ಕೂಡ ಮನವಿ ತಿರಸ್ಕರಿಸಿದ ಸುರೇಶ್, ಇತರ ಅಗತ್ಯ ವೈದ್ಯಕೀಯ ವ್ಯವಸ್ಥೆ ಮಾಡಲು ಸದಾ ಸಿದ್ಧವೆಂದು ತಿಳಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಪೂರ್ವ ವಲಯ ಆಯುಕ್ತ ಮನೋಜ್ ಜೈನ್, ಜಂಟಿ ಆಯುಕ್ತೆ ಪಲ್ಲವಿ, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕ್ಷೇತ್ರದ ಆರೋಗ್ಯಾಧಿಕಾರಿ ವೇದಾವತಿ ಮತ್ತಿತರರು ಉಪಸ್ಥಿತರಿದ್ದರು.