ವಿಜಯಪುರ ಜನ​ರಲ್ಲಿ ಆತುರ ಎಂದಿ​ನಂತೆ ಓಡಾ​ಡುವ ತವ​ಕ| ಬರೋಬ್ಬರಿ ಒಂದು ತಿಂಗಳಿಂದ ಮನೆಯಲ್ಲಿಯೇ ಕುಳಿತ ಜನತೆ|  ಕೇಂದ್ರ ಸರ್ಕಾರ ಶುಕ್ರವಾರ ಮಧ್ಯರಾತ್ರಿಯಷ್ಟೇ ಲಾಕ್‌ಡೌನ್‌ ಪ್ರದೇಶದಲ್ಲಿ ಹಲವಾರು ವಿನಾಯ್ತಿ ನೀಡಿ ಸಡಿಲುಗೊಳಿಸಿದೆ| ಈಗಾಗಲೇ ಕಂಪನಿಗಳು, ಮನೆ ಕಟ್ಟಡ ನಿರ್ಮಾಣ, ಕಾಲ್‌ ಸೆಂಟರ್‌, ಬೇಕರಿ, ಐಸ್‌ಕ್ರೀಂ ಮಾರಾಟ, ಹೋಟೆಲ್‌ಗಳಲ್ಲಿ ಪಾರ್ಸಲ್‌ ವ್ಯವಸ್ಥೆಗೆ ರಿಯಾಯ್ತಿ|

ರುದ್ರಪ್ಪ ಆಸಂಗಿ 

ವಿಜಯಪುರ(ಏ.26): ಕೊರೋನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಹಠಾತ್‌ನೇ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದಾಗಿ ಎಲ್ಲವೂ ಬಂದ್‌ ಆಗಿ ಜನಜೀವನ ಸ್ತಬ್ಧವಾಗಿತ್ತು. ದೇಶಾದ್ಯಂತ ಮೇ. 3ರವರೆಗೆ ಲಾಕ್‌ಡೌನ್‌ ಇದೆ. ಈಗ ಕೇಂದ್ರ ಸರ್ಕಾರ ಲಾಕ್‌ಡೌನ್‌ ಸಡಿಲುಗೊಳಿಸಲು ಕೆಲವೊಂದು ರಿಯಾಯ್ತಿ ಪ್ರಕಟಿಸಿದೆ. ಇದರಿಂದಾಗಿ ಒಂದು ತಿಂಗಳಿಂದ ಮನೆಯಲ್ಲೇ ಕುಳಿತ ಜನರಿಗೆ ಫ್ರೀ ಬರ್ಡ್‌ ಆಗಿ ಓಡಾಡುವ ತವಕ ಹೆಚ್ಚಿದೆ.

ಹೌದು. ಬರೋಬ್ಬರಿ ಒಂದು ತಿಂಗಳಿಂದ ಮನೆಯಲ್ಲಿ ಕುಳಿತ ಜನರಿಗೆ ಮನೆಯಿಂದ ಮಾರುಕಟ್ಟೆಗೆ, ಊರಿಗೆ ಯಾವಾಗ ಹೋಗಲು ಅವಕಾಶ ಸಿಗುತ್ತದೆಯೋ, ಮೊದಲಿನಂತೆ ನಾವು ಸ್ವತಂತ್ರವಾಗಿ ಓಡಾಡುವ ಕಾಲ ಯಾವಾಗ ಬರುತ್ತದೆಯೋ ಏನೋ ಎಂಬ ತವಕ ಹೆಚ್ಚಿದೆ.

ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ 41 ಕಾರ್ಮಿಕರ ಸೈಕಲ್‌ ಸವಾರಿ: 2000 ಕಿ.ಮೀ. ಜರ್ನಿ

ಕೇಂದ್ರ ಸರ್ಕಾರ ಶುಕ್ರವಾರ ಮಧ್ಯರಾತ್ರಿಯಷ್ಟೇ ಲಾಕ್‌ಡೌನ್‌ ಪ್ರದೇಶದಲ್ಲಿ ಹಲವಾರು ವಿನಾಯ್ತಿ ನೀಡಿ ಸಡಿಲುಗೊಳಿಸಿದೆ. ಈಗಾಗಲೇ ಕಂಪನಿಗಳು, ಮನೆ ಕಟ್ಟಡ ನಿರ್ಮಾಣ, ಕಾಲ್‌ ಸೆಂಟರ್‌, ಬೇಕರಿ, ಐಸ್‌ಕ್ರೀಂ ಮಾರಾಟ, ಹೋಟೆಲ್‌ಗಳಲ್ಲಿ ಪಾರ್ಸಲ್‌ ವ್ಯವಸ್ಥೆಗೆ ರಿಯಾಯ್ತಿ ನೀಡಲಾಗಿದೆ. ಕಂಟೈನ್ಮೆಂಟ್‌ ಪ್ರದೇಶವನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಾಕ್‌ಡೌನ್‌ ಸಡಿಲುಗೊಳಿಸಲು ಕೇಂದ್ರ ಸೂಚಿಸಿದೆ.

ಬೆಂಗಳೂರಿನಲ್ಲಿ ಈಗಾಗಲೇ ಲಾಕ್‌ಡೌನ್‌ ಸಡಿಲಿಕೆ ಪ್ರಕ್ರಿಯೆ ಶುರುವಾಗಿದೆ. 100 ಗಡಿ ದಾಟಿದ ಸೋಂಕು ಪ್ರದೇಶದಲ್ಲಿ ಲಾಕ್‌ಡೌನ್‌ ಸಡಿಲಿಕೆಗೆ ಸರ್ಕಾರ ಮುಂದಾಗಿದೆ. ವಿಜಯಪುರದಲ್ಲೂ ಲಾಕ್‌ಡೌನ್‌ ಸಡಿಲಿಕೆ ಅನುಷ್ಠಾನಕ್ಕೆ ಬರುವುದೆ? ಎಂದು ಜನರು ಕಾತರದಿಂದ ನೋಡುತ್ತಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಚಪ್ಪರಬಂದ ಹಾಗೂ ಅದರ ಸುತ್ತ ಮುತ್ತಲಿನ ಕೆಲ ಪ್ರದೇಶದ ಜನರಲ್ಲಿ ಮಾತ್ರ ಕೊರೋನಾ ಸೋಂಕು ಕಂಡುಬಂದಿದೆ. ಈ ಪ್ರದೇಶದಲ್ಲಿನ ಕೇವಲ ಎರಡು ಕುಟುಂಬಗಳಲ್ಲಿ ಮಾತ್ರ ಕೊರೋನಾ ಸೋಂಕು ಕಂಡು ಬಂತು. ಅದು ಕ್ರಮೇಣ ಆರು ಕುಟುಂಬಗಳಲ್ಲಿ ತನ್ನ ಕದಂಬ ಬಾಹು ಚಾಚಿದೆ. ವಿಜಯಪುರ ತಾಲೂಕಿನ ರತ್ನಾಪುರ, ಖಾಸಗಿ ವೈದ್ಯಕೀಯ ಕಾಲೇಜ್‌ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಗೆ ಕೊರೋನಾ ಸೋಂಕು ತಗುಲಿರುವುದನ್ನು ಹೊರತುಪಡಿಸಿದರೆ ಉಳಿದಂತೆ ವಿಜಯಪುರದ ಯಾವುದೇ ಬಡಾವಣೆಗೆ ಕೊರೋನಾ ಸೋಂಕು ವ್ಯಾಪಿಸಿಲ್ಲ. ಇದಕ್ಕೆ ಕಾರಣ ಬಿಗಿಯಾದ ಲಾಕ್‌ಡೌನ್‌ವೇ ಕಾರಣ ಎಂದು ಬೇರೆ ಹೇಳಬೇಕಿಲ್ಲ.

ವಿಜಯಪುರದಲ್ಲಿ ಚಪ್ಪರಬಂದ ಬಡಾವಣೆ ಹೊರತು ಪಡಿಸಿ ಬೇರೆ ಎಲ್ಲಿಯೂ ಸೋಂಕು ಕಂಡು ಬಂದಿಲ್ಲ. ಈಗ ಈ ಪ್ರದೇಶವನ್ನು ಕಂಟೈನ್ಮೆಂಟ್‌ ಎಂದು ಸರ್ಕಾರ ಘೋಷಣೆ ಮಾಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಈ ಪ್ರದೇಶವನ್ನು ಸೀಲ್‌ಡೌನ್‌ ಮಾಡಿದೆ. ಈಗಾಗಲೇ 39 ಮಂದಿ ಸೋಂಕಿತರಾಗಿದ್ದಾರೆ ಎಂಬುವುದು ದೃಢ ಪಟ್ಟಿದೆ. ಈ ಎಲ್ಲ ಸೋಂಕಿತರು ಆರೋಗ್ಯವಾಗಿದ್ದಾರೆ ಎಂಬುವುದು ಸಂತಸದ ಸಂಗತಿಯಾಗಿದೆ. ಬೆಂಗಳೂರಿನಂತಹ ಹಾಟ್‌ಸ್ಪಾಟ್‌ ಪ್ರದೇಶವನ್ನು ಹೊರತು ಪಡಿಸಿ ಉಳಿದ ಕಡೆ ಲಾಕ್‌ಡೌನ್‌ ಬಹಳಷ್ಟು ಪ್ರಮಾಣದಲ್ಲಿ ಸಡಿಲುಗೊಳಿಸಲಾಗುತ್ತಿದೆ. ಅದೇ ರೀತಿ ವಿಜಯಪುರ ನಗರದಲ್ಲಿಯೂ ಕಂಟೈನ್ಮೆಂಟ್‌ ಪ್ರದೇಶ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಲಾಕ್‌ಡೌನ್‌ ಸಡಿಲುಗೊಳಿಸಲು ಜಿಲ್ಲಾಡಳಿತ ಪರಿಣಾಮಕಾರಿ ಕ್ರಮ ಜರುಗಿಸಬೇಕು ಎಂಬುವುದು ಎಲ್ಲರ ಒತ್ತಾಯವಾಗಿದೆ.

ಹಂತ ಹಂತವಾಗಿ ಸಡಿಲಿಕೆ

ಸರ್ಕಾರದ ನಿರ್ದೇಶನದಂತೆ ವಿಜಯಪುರ ನಗರದಲ್ಲಿ ಲಾಕ್‌ಡೌನ್‌ ರಿಯಾಯ್ತಿ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಅಗತ್ಯದ ಷರತ್ತುಗಳೊಂದಿಗೆ ಲಾಕ್‌ಡೌನ್‌ ಸಡಿಲಿಕೆಗೆ ಕ್ರಮ ಜರುಗಿಸಲಾಗುತ್ತದೆ. ಕಂಟೈನ್ಮೆಂಟ್‌ ಪ್ರದೇಶದಲ್ಲಿ ಲಾಕ್‌ಡೌನ್‌ಗೆ ಯಾವುದೇ ರಿಯಾಯಿತಿ ಇಲ್ಲ. ಸದ್ಯಕ್ಕೆ ಆಟೋ, ಬಸ್‌ ಸಂಚಾರ ಪುನಾರಂಭಿಸುವುದಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹೇಳಿದ್ದಾರೆ.