ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ 41 ಕಾರ್ಮಿಕರ ಸೈಕಲ್ ಸವಾರಿ: 2000 ಕಿ.ಮೀ. ಜರ್ನಿ
ಉತ್ತರ ಪ್ರದೇಶಕ್ಕೆ ಸೈಕಲ್ ಮೂಲಕ ತೆರಳುತ್ತಿರುವ ಕಾರ್ಮಿಕರು| ಮನೆ ತಲುಪಲು 2000 ಕಿ.ಮೀ.ಗೂ ಅಧಿಕ ದೂರ ಸೈಕಲ್‌ನಲ್ಲಿಯೇ ಪ್ರಯಾಣ| ವಿಜಯಪುರ ಜಿಲ್ಲೆಯ ಆಲಮಟ್ಟಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ-50ರ ಯಲಗೂರ ಚೆಕ್‌ಪೋಸ್ಟ್‌ನಲ್ಲಿ ವೈದ್ಯಕೀಯ ಪರೀಕ್ಷೆಗೊಳಗಾದ ಕಾರ್ಮಿಕರು|
ಆಲಮಟ್ಟಿ(ಏ.24): ಬೆಂಗಳೂರಿನಲ್ಲಿ ನಾನಾ ಕೆಲಸದಲ್ಲಿ ತೊಡಗಿದ್ದ 41 ಜನ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಸೈಕಲ್ ಮೇಲೆ ತೆರಳುತ್ತಿರುವುದು ಬೆಳಕಿಗೆ ಬಂದಿದೆ. ಇವರು ಮನೆ ತಲುಪಲು 2000 ಕಿ.ಮೀ.ಗೂ ಅಧಿಕ ದೂರವನ್ನು ಸೈಕಲ್‌ನಲ್ಲಿಯೇ ಪ್ರಯಾಣಿಸಬೇಕಾಗಿದೆ.
ವಿಜಯಪುರ ಜಿಲ್ಲೆಯ ಆಲಮಟ್ಟಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ-50ರ ಯಲಗೂರ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ಅವರ ವೈದ್ಯಕೀಯ ಪರೀಕ್ಷೆ ಮಾಡಲಾಯಿತು.
ಲಾಕ್‌ಡೌನ್ ಎಫೆಕ್ಟ್: ರೈತರಿಂದ ತರಕಾರಿ ಖರೀದಿಗೆ ಸರ್ಕಾರ ನಿರ್ಧಾರ
ಕಳೆದ ನಾಲ್ಕು ದಿನಗಳ ಹಿಂದೆಯೇ ಬೆಂಗಳೂರು ಬಿಟ್ಟಿರುವ ಈ ಕಾರ್ಮಿಕರು ಉತ್ತರ ಪ್ರದೇಶದ ಹರಿದೊಯ್ ಜಿಲ್ಲೆಯವರು. ಬೆಂಗಳೂರಿನಲ್ಲಿ ಐಸ್‌ಕ್ರಿಂ ಹಾಗೂ ಹಣ್ಣು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದರು. ಆದರೆ, ಕೊರೋನಾ ಲಾಕ್‌ಡೌನ್‌ನಿಂದ ದುಡಿಯಲು ಕೆಲಸವೂ ಇಲ್ಲ. ಹೀಗಾಗಿ ತಮ್ಮ ಸ್ವಗ್ರಾಮಕ್ಕೆ ತೆರಳಲು ಸಾರಿಗೆ ಸಂಪರ್ಕ ಇಲ್ಲದ್ದರಿಂದ ಸೈಕಲ್ ಮೇಲೆಯೇ ಹೊರಟಿರುವುದಾಗಿ ಅವರು ತಿಳಿಸಿದ್ದಾರೆ.