ಮದ್ದೂರು (ಅ.08):  ರಾಜಕಾರಣದಲ್ಲಿ ಸೋಲು, ಗೆಲುವು ಸಹಜ. ಎರಡನ್ನು ಸವಾಲಾಗಿ ಸ್ವೀಕರಿಸಿದವರು ನಿಜವಾದ ರಾಜಕಾರಣಿಯಾಗುತ್ತಾರೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಟಿಎಪಿಎಂಎಸ್‌ ಚುನಾವಣೆಯ ಜೆಡಿಎಸ್‌ ಬೆಂಬಲಿತ ವಿಜೇತ ಅಭ್ಯರ್ಥಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕಿರುಗಾವಲು ಕ್ಷೇತ್ರ ತೊರೆದು ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಬಂದ ನಂತರ ಉಪಚುನಾವಣೆ ಸೇರಿದಂತೆ ಎರಡು ಚುನಾವಣೆಗಳಲ್ಲಿ ನಾನು ಸೋಲಿನ ರುಚಿ ಕಂಡಿದ್ದೇನೆ. ಆದರೆ, ಸೋಲಿನಿಂದ ಧೃತಿಗೆಡದೆ ಎರಡನ್ನು ಸಮಾನವಾಗಿ ಸ್ವೀಕರಿಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಶಿರಾ ಜೆಡಿಎಸ್ ಟಿಕೆಟ್ ಇವರಿಗೆ ಖಚಿತ : ಎಚ್‌ಡಿಕೆ ಸುಳಿವು ..

ಟಿಎಪಿಎಂಎಸ್‌ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳ ಗೆಲುವಿನ ಸಂಖ್ಯೆ ಕ್ಷೀಣಿಸಿರುವುದಕ್ಕೆ ಪಕ್ಷದ ಪ್ರಾಬಲ್ಯ ಕುಸಿದಿದೆ ಎಂಬ ಅರ್ಥವಲ್ಲ. ಚುನಾವಣೆಯಲ್ಲಿ ಜೆಡಿಎಸ್‌ ಪರ ಮತದಾರರನ್ನು ಅನ್ಯ ಕಾರಣದಿಂದ ಅನರ್ಹಗೊಳಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ವಿವಾದ ಬಗೆಹರಿಸಿ ಅರ್ಹ ಮತದಾರರ ಪಟ್ಟಿತರುವಲ್ಲಿ ಚುನಾವಣೆ ಮುಗಿದಿತ್ತು ಎಂದು ಹೇಳಿದರು.

ವಿರೋಧ ಪಕ್ಷಗಳು ನಮ್ಮ ಪಕ್ಷದ ಪರ ಮತದಾರರಿಗೆ ಅಮಿಷವೊಡ್ಡಿ ತಮ್ಮ ಬೆಂಬಲಿತರನ್ನು ಗೆಲ್ಲಿಸಿಕೊಂಡಿದ್ದಾರೆ. ಇಂತಹ ಕುತಂತ್ರಕ್ಕೆ ಸೊಪ್ಪು ಹಾಕುವುದಿಲ್ಲ. ಜೆಡಿಎಸ್‌ನಿಂದ ಅಧಿಕಾರ ಅನುಭವಿಸಿ ಕೆಲ ನಾಯಕರು ಹಣ ಮತ್ತು ಅಧಿಕಾರದ ಆಸೆಗೆ ಅನ್ಯ ಪಕ್ಷಕ್ಕೆ ವಲಸೆ ಮಾಡಿ ಪಕ್ಷದ್ರೋಹ ಮಾಡಿ ಮೆರೆಯುತ್ತಿದ್ದಾರೆ. ಇಂತಹವರ ರಾಜಕೀಯ ಜೀವನದ ಬಗ್ಗೆ ಜನರೇ ತೀರ್ಮಾನಿಸುತ್ತಾರೆ ಎಂದರು.

ಗೆಲುವು ಸಾಧಿಸಿದ ಜೆಡಿಎಸ್‌ ಬೆಂಬಲಿತರಾದ ಕೂಳಗೆರೆ ಶೇಖರ್‌ , ಗೌರಮ್ಮ, ಅಮೂಲ್ಯ, ಹೊನ್ನೇಗೌಡ, ಪರಾಜಿತ ಅಭ್ಯರ್ಥಿ ಮಹೇಶ್‌, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಶ್ರೀಕಂಠಯ್ಯ, ಮಾಜಿ ನಿರ್ದೇಶಕ ಶಿವಶಂಕರ್‌ ಪಟೇಲ್‌ , ಎಪಿಎಂಸಿ ಮಾಜಿ ನಿರ್ದೇಶಕ ಶಿವಣ್ಣ, ಪುರಸಭೆ ಮಾಜಿ ಸದಸ್ಯ ಅದಿಲ್‌ , ಮುಖಂಡರಾದ ಫೈರೋಜ್‌ , ವಿಶ್ವಕರ್ಮ ಸಮಾಜದ ಕದಲೂರು ಬಸವರಾಜು ಇದ್ದರು.