ನ್ಯಾಯಯುತ ಬೆಲೆ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಬೆಂಗಳೂರು(ಅ.08): ಪ್ರಸಕ್ತ ಸಾಲಿನ ಕಬ್ಬು ದರ ನಿಗದಿಗೆ ಸಂಬಂಧಿಸಿದಂತೆ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಪ್ರತಿನಿಧಿಗಳ ಸಭೆಯನ್ನು ವಾರದಲ್ಲಿ ಕರೆಯಲಾಗುವುದು. ನ್ಯಾಯಯುತ ಬೆಲೆ ಕೊಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಕಬ್ಬು ದರ ನಿಗದಿ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ರೈತ ಮುಖಂಡರ ಜೊತೆ ಚರ್ಚಿಸಿದ ವೇಳೆ ಈ ಭರವಸೆ ನೀಡಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದ್ದಾರೆ. ಕಬ್ಬು ದರ ನಿಗದಿ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಮುಂಭಾಗ ಜಮಾಯಿಸಿದ್ದ ರೈತ ಮುಖಂಡರನ್ನು ಕರೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಪ್ರತಿನಿಧಿಗಳ ಸಭೆಯನ್ನು ವಾರದಲ್ಲಿ ಕರೆಯಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಟನ್‌ ಕಬ್ಬಿಗೆ ಉತ್ತರ ಪ್ರದೇಶದಲ್ಲಿ 3500 ರು., ಪಂಜಾಬ್‌ನಲ್ಲಿ 3800 ಹಾಗೂ ಗುಜರಾತ್‌ನಲ್ಲಿ 4400 ರು. ನೀಡುತ್ತಿದ್ದಾರೆ. ರಾಜ್ಯದಲ್ಲಿ ನ್ಯಾಯಯುತ ದರ ನಿಗದಿಪಡಿಸುವಂತೆ ಮನವಿ ಮಾಡಿದಾಗ, ‘ಕಬ್ಬು ಉತ್ಪಾದನಾ ವೆಚ್ಚ ಅಧಿಕವಾಗಿದೆ. ರೈತರಿಗೆ ನ್ಯಾಯಯುತ ಬೆಲೆ ಕೊಡಿಸಲಾಗುವುದು. ಈ ಬಗ್ಗೆ ಸಭೆ ಕರೆದು ದರ ಅಂತಿಮಗೊಳಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಕುರುಬೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದಿಂದ ಮಹದಾಯಿ ಮೂಲಸ್ವರೂಪವೇ ಬದಲು: ಎನ್‌.ಎಚ್‌. ಕೋನರಡ್ಡಿ

ರೈತರಿಗೆ ಹಂಚಿಕೆಯಾಗದ ಲಾಭ:

ವಿದ್ಯುತ್‌ ಖಾಸಗೀಕರಣ ಮಾಡುವುದನ್ನು ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು, ರಾಜ್ಯದ 35 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಎಥೆನಾಲ್‌ ಉತ್ಪಾದನೆ ಮಾಡುತ್ತಿದ್ದು ಆದರೆ ರೈತರಿಗೆ ಲಾಭ ನೀಡುತ್ತಿಲ್ಲ ಎಂಬುದು ಸೇರಿ ಹಲವು ವಿಷಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು ಎಂದು ಕುರುಬೂರು ಅವರು ವಿವರಿಸಿದ್ದಾರೆ.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕುರುಬೂರು ಶಾಂತಕುಮಾರ್‌ ನೇತೃತ್ವದ ರೈತ ಮುಖಂಡರ ನಿಯೋಗ ಭೇಟಿಯಾಗಿ ಕಬ್ಬು ದರ ನಿಗದಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿತು.