ಕುರುಗೋಡು(ಅ.5): ಪಟ್ಟಣದ ಬಾದನಹಟ್ಟಿ, ಮುಷ್ಟಗಟ್ಟೆ, ಎಚ್‌. ವೀರಾಪುರ, ಚಿಟಿಗಿನಹಾಳ್‌, ಎಮ್ಮಿಗನೂರು ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮತ್ತು ಜಿಪಂ ಸಿಇಒ ಕೆ.ನಿತೀಶ್ ಅವರು ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಮುಷ್ಟಗಟ್ಟೆ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಗರ್ಭಿಣಿಯರ ಮತ್ತು ಬಾಣತಿಯರ ಸಮಸ್ಯೆಗಳನ್ನು ಅರಿತರು. ಮಕ್ಕಳ ಶಿಕ್ಷಣದ ಬಗ್ಗೆ ಮತ್ತು ಮಕ್ಕಳಿಗೆ ನಿತ್ಯ ಊಟಕ್ಕೆ ಬಳಸುವ ಧವಸ ದಾನ್ಯಗಳು ಅದೇ ರೀತಿ ಬಾಣತಿಯರ ಹಾಗೂ ಗರ್ಭಿಣಿಯರಿಗೆ ನೀಡಿದ ಧವಸ ದಾನ್ಯಗಳ ತಿಂಗಳ ಮತ್ತು ನಿತ್ಯ ಪಟ್ಟಿಯ ಕಡತಗಳನ್ನು ಪರಿಶೀಲಿಸಿದರು.

ಗರ್ಭಿಣಿಯರಿಗೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಬರುವ ಸೌಲಭ್ಯಗಳನ್ನು ಯಾವುದೇ ರೀತಿ ನಿರ್ಲಕ್ಷ್ಯ ವಹಿಸದೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದು ಅಂಗನವಾಡಿ ಕಾರ್ಯಕರ್ತರಿಗೆ ಸೂಚಿಸಿದರು. ಅಂಗನವಾಡಿಗೆ ಬರುವ ಒಟ್ಟು ಮಕ್ಕಳ ಸಂಖ್ಯೆಯ ಪಟ್ಟಿಯನ್ನು ಪಡೆದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾತೃಪೂರ್ಣ ಯೋಜನೆ ಅಡಿಯಲ್ಲಿ ಬಾಣಂತಿಯರಿಗೆ ಪ್ರೋತ್ಸಾಹ ಧನ 6000 ಒದಗಿಸಲು ಅದಕ್ಕೆ ಬೇಕಾದ ದಾಖಲಾತಿಗಳನ್ನು ಪಡೆದು ಅವರಿಗೆ ಸಿಗುವಂತ ಕಾರ್ಯ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗರ್ಭಿಣಿಯರಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ ಅಡಿಯಲ್ಲಿ . 3000 ಪ್ರೋತ್ಸಾಹ ಧನ ಬರುತ್ತಿದ್ದು, ಇದರ ಬಗ್ಗೆ ಅಂಗನವಾಡಿ ಕೇಂದ್ರದ ಶಿಕ್ಷಕರಿಗೆ ಮತ್ತು ಸೂಪರ್‌ ವೈಜರ್‌ಗಳ ಗಮನಕ್ಕೆ ಇಲ್ಲದ ಕಾರಣ ಅರ್ಹ ಅಭ್ಯರ್ಥಿಗಳಿಂದ ಇಂದಿನಿಂದಲೇ ಅರ್ಜಿ ಪಡೆದುಕೊಂಡು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಿ ಎಂದು ಸಲಹೆ ಸೂಚಿಸಿದರು.

ಕೇಂದ್ರಕ್ಕೆ ತಡೆಗೋಡೆ ಮತ್ತು ಶೌಚಾಲಯಗಳ ಕೊರತೆ ಇರುವುದರಿಂದ ಅವುಗಳನ್ನು ನಿರ್ಮಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳೊಡನೆ ಚರ್ಚಿಸಿದರು.

ನಂತರ ಗರ್ಭಿಣಿಯರ ಮನೆಗಳಿಗೆ ಭೇಟಿ ನೀಡಿ ಅವರೊಂದಿಗೆ ಕೇಂದ್ರದಿಂದ ಬಿಸಿ ಊಟ, ಕಾಳು, ಪ್ರೋತ್ಸಾಹ ಧನ ಸೇರಿದಂತೆ ಇತರೆ ಸೌಲಭ್ಯಗಳು ದೊರೆಯುತ್ತಿವೆಯೇ ಎಂದು ವಿಚರಿಸಿದರು. ಅಲ್ಲದೆ ಮುಷ್ಟಗಟ್ಟೆಪ್ರದೇಶದ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಕ್ವಾರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕುರುಗೋಡಿನಿಂದ ಮುಷ್ಟಗಟ್ಟೆಗ್ರಾಮಕ್ಕೆ ಬರುವ ರಸ್ತೆ ಹದೆಗೆಟ್ಟು ಹೋಗಿದ್ದು ಅದನ್ನು ದುರಸ್ತಿ ಮಾಡಿಸುವಂತೆ ನಾಗರಿಕರು ಜಿಲ್ಲಾಧಿಕಾರಿಗೆ ಕೋರಿದರು. ಇದಕ್ಕೆ ಸ್ಪಂದಿಸಿದ ಅವರು ಎಸ್‌ಇಪಿ ಅಥವಾ ಟಿಎಸ್‌ಪಿ ಯೋಜನೆ ಅಡಿಯಲ್ಲಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.