ಮಂಗಳೂರು(ಫೆ.12): ಸುಮಾರು 13 ವರ್ಷಗಳ ಬೇಡಿಕೆಯಾಗಿದ್ದ ಬೆಂಗಳೂರು-ವಾಸ್ಕೋ(ಗೋವಾ) ಮಧ್ಯೆ ನೇರ ರೈಲು ಸಂಚಾರಕ್ಕೆ ಕೊನೆಗೂ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಇದರೊಂದಿಗೆ ಮಲೆನಾಡು ಹಾಗೂ ಕರಾವಳಿ ಮೂಲಕ ಹೊಸ ರೈಲು ಸಂಚಾರ ಶೀಘ್ರವೇ ಆರಂಭಗೊಳ್ಳಲಿದೆ.

ಸೋಮವಾರ ನಡೆದ ನೈಋುತ್ಯ ರೈಲ್ವೆ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಕುಮಟಾ ಶಾಸಕ ದಿನಕರ ಶೆಟ್ಟಿಹಾಗೂ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಹೊಸ ರೈಲು ಓಡಾಟ ನಿರ್ಧಾರದ ಬಗ್ಗೆ ಮಾಹಿತಿ ನೀಡಲಾಗಿದೆ. ರೈಲ್ವೆ ಯಾತ್ರಿಕರ ಸಂಘಟನೆಗಳು ರೈಲ್ವೆ ಸಹಾಯಕ ಸಚಿವ ಸುರೇಶ್‌ ಅಂಗಡಿ ಹಾಗೂ ವಿವಿಧ ರೈಲ್ವೆ ವಿಭಾಗಗಳಿಗೆ ಪತ್ರ ಮೂಲಕ ಈ ಹೊಸ ರೈಲು ಸಂಚಾರ ಬಗ್ಗೆ ಒತ್ತಡ ಹಾಕಿದ್ದರು.

ಇದು ಹಗಲು ರಾತ್ರಿ ರೈಲು:

ರೈಲ್ವೆ ಇಲಾಖೆ ಪ್ರಕಟಿಸಿರುವ ಬೆಂಗಳೂರು-ವಾಸ್ಕೊ (ವಾಸ್ಕೋಡಗಾಮ)ರೈಲು(ನಂ.06587/06588) ಹಗಲು-ರಾತ್ರಿ ಸಂಚರಿಸಲಿದೆ. ಯಶವಂತಪುರ-ವಾಸ್ಕೊಡಗಾಮ-ಯಶವಂತಪುರ ಡೈಲಿ ವಿಶೇಷ ರೈಲು ವಯಾ ಸುಬ್ರಹ್ಮಣ್ಯ ರೋಡ್‌, ಪಡೀಲು, ಸುರತ್ಕಲ್‌ ಮತ್ತು ಕಾರವಾರ ಮೂಲಕ ಸಂಚರಿಸಲಿದೆ. ಬೆಂಗಳೂರು-ಕಣ್ಣೂರು/ಕಾರವಾರ ರಾತ್ರಿ ಎಕ್ಸ್‌ಪ್ರೆಸ್‌ ರೈಲನ್ನು ಪ್ರತ್ಯೇಕವಾಗಿ ಓಡಿಸುವ ಬಗ್ಗೆ ಬೇಡಿಕೆಗಳು ಕೇಳಿಬರುತ್ತಿರುವ ಹೊತ್ತಿನಲ್ಲಿ ಈ ಹೊಸ ರೈಲಿನ ಘೋಷಣೆಯಾಗಿದೆ.

ಉಪನಗರ ರೈಲು ಅನುಷ್ಠಾನಕ್ಕೆ 1400 ಕೋಟಿ ರು. : ಶೀಘ್ರ ಅನುಮೋದನೆ

ಈ ರೈಲಿಗೆ ಎಲ್ಲ ಕಡೆ ನಿಲುಗಡೆ ಇರುವುದಿಲ್ಲ. ಯಶವಂತಪುರ ಬಳಿಕ ಚಿಕ್ಕಬಾಣಾವರ, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್‌, ಕಬಕ ಪುತ್ತೂರು, ಸುರತ್ಕಲ್‌, ಉಡುಪಿ, ಬಾರ್ಕೂರ್‌, ಕುಂದಾಪುರ, ಬೈಂದೂರು, ಭಟ್ಕಳ್‌, ಮುರ್ಡೇಶ್ವರ, ಕುಮಟಾ, ಗೋಕರ್ಣ ರೋಡ್‌, ಅಂಕೋಲಾ, ಕಾರವಾರ ಮತ್ತು ಮಡ್ಗಾಂವ್‌ನಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ಈ ರೈಲು 2 ಟೈರ್‌ ಕೋಚ್‌, 3 ಟೈರ್‌ ಎಸಿ ಕೋಚ್‌, 7 ಸಾಮಾನ್ಯ ಸೆಕೆಂಡ್‌ ಕ್ಲಾಸ್‌ ಕೋಚ್‌ ಸ್ಲೀಪರ್‌ ಹಾಗೂ 2 ಲಗ್ಗೇಜ್‌ ಕೋಚ್‌ಗಳನ್ನು ಒಳಗೊಂಡಿದೆ.

13 ಗಂಟೆ ಪ್ರಯಾಣ:

ಈ ರೈಲು ವಯಾ ಕುಣಿಗಲ್‌ ಮೂಲಕ ಸಂಚರಿಸಲಿದೆ. ಯಶವಂತಪುರ ಹಾಗೂ ವಾಸ್ಕೋ ಮಧ್ಯೆ 696 ಕಿ.ಮೀ. ದೂರವನ್ನು 13 ಗಂಟೆಗಳಲ್ಲಿ ಕ್ರಮಿಸಲಿದೆ. ಈಗಾಗಲೇ ವಯಾ ಕುಣಿಗಲ್‌ ಮತ್ತು ಮೈಸೂರು ಮೂಲಕ ಸಂಚರಿಸುವ ಬೆಂಗಳೂರು ರಾತ್ರಿ ರೈಲು ಕಾರವಾರ ತಲುಪಲು 17 ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಈ ಹೊಸ ಹಗಲು-ರಾತ್ರಿ ರೈಲು ಸಂಚಾರದಿಂದ ಸಮಯ ಉಳಿತಾಯವಾಗಲಿದೆ.

ಈ ಹೊಸ ರೈಲು ಯಶವಂತಪುರದಿಂದ ಪ್ರತಿದಿನ ಸಂಜೆ 6.45ಕ್ಕೆ ಹೊರಡಲಿದ್ದು, ಕಾರವಾರಕ್ಕೆ ಮರುದಿನ ಬೆಳಗ್ಗೆ 8.25, ವಾಸ್ಕೋಗೆ 10.30ಕ್ಕೆ ತಲುಪಲಿದೆ. ವಾಸ್ಕೋದಿಂದ ಸಂಜೆ 4.40ಕ್ಕೆ ಹೊರಟು ಯಶವಂತಪುರಕ್ಕೆ ಮರುದಿನ ಬೆಳಗ್ಗೆ 8.32ಕ್ಕೆ ತಲುಪಲಿದೆ.

ಪಡೀಲು ಮೂಲಕ ಸಂಚಾರ

ಈ ರೈಲು ಮಂಗಳೂರು ಜಂಕ್ಷನ್‌ ಅಥವಾ ಮಂಗಳೂರು ಸೆಂಟ್ರಲ್‌ಗೆ ಆಗಮಿಸುವುದಿಲ್ಲ. ಅದರ ಬದಲು ಪಡೀಲು ಮೂಲಕ ನೇರವಾಗಿ ಕೊಂಕಣ ಮಾರ್ಗದಲ್ಲಿ ನೇರವಾಗಿ ಸಂಚರಿಸಲಿದೆ. ಇದರಿಂದಾಗಿ ಮಂಗಳೂರು ಹಾಗೂ ಆಸುಪಾಸಿನ ಪ್ರಯಾಣಿಕರು ಸುರತ್ಕಲ್‌ಗೆ ತೆರಳಬೇಕಾಗುತ್ತದೆ.

ಅದೇ ರೀತಿ ಬಂಟ್ವಾಳದಲ್ಲೂ ರೈಲಿಗೆ ನಿಲುಗಡೆ ಇಲ್ಲ. ಇಲ್ಲಿನ ಮಂದಿ ಪುತ್ತೂರನ್ನು ಆಶ್ರಯಿಸಬೇಕಾಗುತ್ತದೆ. ಪುತ್ತೂರನ್ನು ಈ ರೈಲು ನಸುಕಿನ ಜಾವ 2 ಗಂಟೆಗೆ ಆಸುಪಾಸಿಗೆ ಹಾದುಹೋಗುತ್ತದೆ. ಹಾಗಾಗಿ ವಾಸ್ಕೋಗೆ ತೆರಳುವ ಅಥವಾ ಬೆಂಗಳೂರಿಗೆ ತೆರಳಬೇಕಾದರೆ ಬಂಟ್ವಾಳ ಆಸುಪಾಸಿನ ಪ್ರಯಾಣಿಕರಿಗೆ ಇದು ಸುಲಭವಲ್ಲ. ಇದೇ ರೀತಿ ಹೊನ್ನಾವರದಲ್ಲಿ ಈ ರೈಲಿಗೆ ನಿಲುಗಡೆ ಇಲ್ಲ. ಇಲ್ಲಿನ ಪ್ರಯಾಣಿಕರು ಸುಮಾರು 12 ಕಿ.ಮೀ. ದೂರದ ಕುಮಟಾ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಆದ್ದರಿಂದ ಪ್ರಯಾಣಿಕರ ಬೇಡಿಕೆಯನ್ನು ಗಮನಿಸಿ ಬಂಟ್ವಾಳ ಹಾಗೂ ಹೊನ್ನಾವರಗಳಲ್ಲಿ ಈ ರೈಲಿಗೆ ನಿಲುಗಡೆಯ ಅವಶ್ಯಕತೆ ಇದೆ ಎಂದು ರೈಲ್ವೆ ಸಂಘಟನೆಗಳು ಆಗ್ರಹಿಸಿವೆ.

ಬೆಂಗಳೂರಿಗೆ ಒಟ್ಟು 5 ರೈಲು

ಯಶವಂತಪುರ-ವಾಸ್ಕೋ ಹೊಸ ರೈಲು ಸಂಚಾರ ಆರಂಭವಾದರೆ ಬೆಂಗಳೂರು-ಮಂಗಳೂರು ಮಧ್ಯೆ ಒಟ್ಟು ಐದು ರೈಲುಗಳು ಓಡಾಟ ನಡೆಸಿದಂತಾಗುತ್ತದೆ. ಈಗಾಗಲೇ ಬೆಂಗಳೂರಿಗೆ ಎರಡು ರಾತ್ರಿ ರೈಲು ಸಂಚರಿಸುತ್ತಿದೆ. ಹಗಲು ಎರಡು ರೈಲುಗಳು ವಾರಕ್ಕೆ ಮೂರು ಬಾರಿ ಸಂಚರಿಸುತ್ತಿವೆ. ವಾಸ್ಕೋ ರೈಲು ಸೇರಿದರೆ, ಮತ್ತೊಂದು ರೈಲು ಬೆಂಗಳೂರು ಸಂಪರ್ಕಿಸಿದಂತೆ ಆಗುತ್ತದೆ. ವಾಸ್ಕೋ ರೈಲು ಮಂಗಳೂರು ನಿಲ್ದಾಣಕ್ಕೆ ಬಾರದಿದ್ದರೂ ಮಂಗಳೂರು ಮೂಲಕ ಹಾದುಹೋಗುತ್ತದೆ ಎಂಬುದೇ ಸಮಾಧಾನ ಸಂಗತಿ.

ಹೊಸ ರೈಲಿನ ವೇಳಾಪಟ್ಟಿ

ಪ್ರಸ್ತಾವಿತ ಯಶವಂತಪುರ-ವಾಸ್ಕೋ-ಯಶವಂತಪುರ ಡೈಲಿ ಸ್ಪೆಷಲ್‌ ರೈಲಿನ(ನಂ.06587/06588) ವೇಳಾಪಟ್ಟಿಹೀಗಿದೆ.

ಆಗಮನ-ನಿರ್ಗಮನ - ನಿಲ್ದಾಣಗಳು - ಆಗಮನ-ನಿರ್ಗಮನ

ಸಂಜೆ 6.45(ನಿ)------------ಯಶವಂತಪುರ----------ಬೆಳಗ್ಗೆ 9 ಗಂಟೆ(ಆ)

ರಾತ್ರಿ 8.45/8.55-------ಚೆನ್ನರಾಯಣಪಟ್ಟಣ----------ಬೆಳಗ್ಗೆ 6.45/6.46

ರಾತ್ರಿ 9.50/9.55--------ಹಾಸನ------------------ಬೆಳಗ್ಗೆ 5.58/6

ಬೆಳಗ್ಗೆ 1.25/1.35--------ಸುಬ್ರಹ್ಮಣ್ಯ ರೋಡ್‌---------ಬೆಳಗ್ಗೆ 2.10/2.20

ಬೆಳಗ್ಗೆ 2.10------------ಕಬಕ ಪುತ್ತೂರು-------------ಬೆಳಗ್ಗೆ 1.58/1.59

ಬೆಳಗ್ಗೆ 4.10/4.11--------ಸುರತ್ಕಲ್‌----------------ರಾತ್ರಿ 11.54/11.55

ಬೆಳಗ್ಗೆ 4.49/4.50--------ಉಡುಪಿ----------------ರಾತ್ರಿ 11.24/11.25

ಬೆಳಗ್ಗೆ 5.18/ 5.19--------ಕುಂದಾಪುರ--------------ರಾತ್ರಿ 10.54/ 10.55

ಬೆಳಗ್ಗೆ 8.25/8.30---------ಕಾರವಾರ--------------ರಾತ್ರಿ 8.31/ 8.32

ಬೆಳಗ್ಗೆ 9.30/9.35---------ಮಡ್ಗಾಂವ್‌-------------ಸಂಜೆ 5.40/5.45

ಬೆಳಗ್ಗೆ 10.30(ಆ)----------ವಾಸ್ಕೋಡಗಾಮ-------- ಸಂಜೆ 4.40(ನಿ)

ಬಹುಬೇಡಿಕೆಯ ವಾಸ್ಕೋ-ಬೆಂಗಳೂರು ರೈಲು ಘೋಷಣೆಯಾಗಿರುವುದು ಸಮಾಧಾನ ಸಂಗತಿ. ಆದರೆ ಈ ರೈಲು ಮಂಗಳೂರು ನಿಲ್ದಾಣಕ್ಕೆ ಬಾರದೆ, ನೇರವಾಗಿ ಪಡೀಲು ಮೂಲಕ ಸಂಚರಿಸಲಿದೆ. ಇದರಿಂದಾಗಿ ಮಂಗಳೂರಿನ ಪ್ರಯಾಣಿಕರು ಸುರತ್ಕಲ್‌ ನಿಲ್ದಾಣವನ್ನು ಆಶ್ರಯಿಸಬೇಕಾಗುತ್ತದೆ ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಮಿತಿ ಸಂಚಾಲಕ ಹನುಮಂತ ಕಾಮತ್‌ ತಿಳಿಸಿದ್ದಾರೆ.