ಬೆಂಗಳೂರು [ಫೆ.09]:  ರಾಜಧಾನಿಯ ಬಹುಬೇಡಿಕೆಯ ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲು ಕನಿಷ್ಠ  1400 ಕೋಟಿ ರು. ಅನುದಾನ ಅಗತ್ಯವಿದೆ.

ಈಗಾಗಲೇ ಕೇಂದ್ರ ಸರ್ಕಾರ ಈ ಯೋಜನೆಗೆ .1 ಕೋಟಿ ಅನುದಾನ ಮೀಸಲಿಟ್ಟಿದೆ. ಈ ವರ್ಷವೇ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲು ಕನಿಷ್ಠ 1400 ಕೋಟಿ ರು. ಬೇಕಾಗಬಹುದು. ಬಳಿಕ ವಿವಿಧ ಹಂತಗಳಲ್ಲಿ ಯೋಜನೆಗೆ ಹಣ ತೊಡಗಿಸಬೇಕಾಗುತ್ತದೆ ಎಂದು ಕೆ-ರೈಡ್‌ ಸಂಸ್ಥೆಯ ಅಧಿಕಾರಿಗಳು ಹೇಳುತ್ತಾರೆ.

ಉಪನಗರ ರೈಲು ಯೋಜನೆಗೆ ಸುಮಾರು 600 ಎಕರೆ ಭೂಸ್ವಾಧೀನ ಮಾಡಬೇಕು. ಈ ಪೈಕಿ 327 ಎಕರೆ ರೈಲ್ವೆ ಭೂಮಿ ಹಾಗೂ 153 ಎಕರೆ ರಾಜ್ಯ ಸರ್ಕಾರದ ಭೂಮಿ ಇರುವುದರಿಂದ ಸ್ವಾಧೀನ ಸುಲಭವಾಗಲಿದೆ. ಉಳಿದ 103 ಎಕರೆ ಖಾಸಗಿ ಭೂಮಿ ಸ್ವಾಧೀನಕ್ಕೆ ಆದ್ಯತೆ ನೀಡಬೇಕು.

ಸಾಲ ಪಡೆಯಲು ಮಾತುಕತೆ : ಉಪನಗರ ರೈಲು ಯೋಜನೆಗೆ ತಗುಲುವ ಒಟ್ಟು ವೆಚ್ಚದ ಪೈಕಿ ಶೇ.60ರಷ್ಟುಅನುದಾನವನ್ನು ಕೆ-ರೈಡ್‌ ಸಂಸ್ಥೆಯು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬೇಕು. ಹೀಗಾಗಿ ಕೆ-ರೈಡ್‌ ಸಂಸ್ಥೆಯು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳೊಂದಿಗೆ ಮಾತುಕತೆಗೆ ಮುಂದಾಗಿದೆ. ಜೈಕಾ, ಕೊರಿಯಾ ಎಕ್ಸಿಮ್‌ ಬ್ಯಾಂಕ್‌, ಏಷ್ಯನ್‌ ಇನ್‌ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌, ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ವಿಶ್ವ ಬ್ಯಾಂಕ್‌ ಈ ಉಪನಗರ ರೈಲು ಯೋಜನೆಗೆ ಸಾಲ ನೀಡಲು ಆಸಕ್ತಿ ತೋರಿದೆ. ಆದರೆ, ಮಾತುಕತೆ ಅಂತಿಮವಾಗಿಲ್ಲ ಎಂದು ಕೆ-ರೈಡ್‌ ವ್ಯವಸ್ಥಾಪಕ ನಿರ್ದೇಶಕ ಅಮಿತ್‌ ಗರ್ಗ್‌ ಹೇಳಿದರು.

ಮೊಬಿಲಿಟಿ ಕಾರ್ಡ್‌ ಅನುಷ್ಠಾನಕ್ಕೆ ನಮ್ಮ ಮೆಟ್ರೋ ಸಿದ್ಧತೆ...

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ 18,600 ಕೋಟಿ ರು. ವೆಚ್ಚದ 148 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆ ರೂಪಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ತಗುಲುವ ಒಟ್ಟು ವೆಚ್ಚದ ಪೈಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ.20ರಷ್ಟುಅನುದಾನ ನೀಡಲಿವೆ. ಉಳಿದ ಶೇ.60ರಷ್ಟುಮೊತ್ತವನ್ನು ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕೆ-ರೈಡ್‌ ಸಂಸ್ಥೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ವೆಚ್ಚ ಮಾಡಲಿದೆ. 

ಇನ್ನು ಶೀಘ್ರ ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.