ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ಶಿರ್ಮಗೊಂಡನಹಳ್ಳಿಯ ಆಕರ್ಷಕ ಸಖಿ ಮತಗಟ್ಟೆ ಎಲ್ಲರ ಗಮನ ಸೆಳೆದಿದೆ. ಯುವಕರು, ಹಿರಿಯರು ಹಾಗೂ ಅಂಗವಿಕಲರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು.

ದಾವಣಗೆರೆ (ಏ.9): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಅಖಾಡದಲ್ಲಿ ಇಂದು ಪ್ರಜಾಪ್ರಭುತ್ವದ ಹಬ್ಬದ ಕಳೆ ಮನೆಮಾಡಿದೆ. ನಗರ ಪ್ರದೇಶದ ಜೊತೆಗೆ ಗ್ರಾಮೀಣ ಭಾಗಗಳಲ್ಲೂ ಮತದಾನ ಪ್ರಕ್ರಿಯೆ ಅತ್ಯಂತ ಚುರುಕಾಗಿ ಸಾಗುತ್ತಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಶಿರ್ಮಗೊಂಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿರುವ ಸಖಿ ಮತಗಟ್ಟೆ (ಸಂಖ್ಯೆ 241) ಇಂದು ಎಲ್ಲರ ಗಮನ ಸೆಳೆಯುತ್ತಿದೆ. ಅತ್ಯಂತ ಆಕರ್ಷಕವಾಗಿ ಅಲಂಕಾರಗೊಂಡಿರುವ ಈ ಮತಗಟ್ಟೆಯಲ್ಲಿ ಮಹಿಳೆಯರು ಮತ್ತು ಯುವ ಸಮೂಹಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

Add Asianetnews Kannada as a Preferred SourcegooglePreferred

ಯುವಶಕ್ತಿ ಹಾಗೂ ಹಿರಿಯರ ಉತ್ಸಾಹ

ಫಸ್ಟ್ ಟೈಮ್ ವೋಟರ್ಸ್: ಕಾಲೇಜು ಆರಂಭವಾಗುವ ಮೊದಲೇ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿನಿ ನೂತನ ಸೇರಿದಂತೆ ಹಲವು ವಿದ್ಯಾರ್ಥಿಗಳು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಮೊದಲ ಬಾರಿ ಮತದಾನ ಮಾಡಿದ ನಯನ ಹಾಗೂ ತಂಡದವರು ಬೆರಳಿನ ನೀಲಿ ಶಾಯಿ ತೋರಿಸಿ ಸಂಭ್ರಮ ವ್ಯಕ್ತಪಡಿಸಿದರು. ಮಧ್ಯಾಹ್ನ ಬಿಸಿಲಿನ ಧಗೆ ಏರುವ ಮೊದಲೇ ಮತದಾನ ಮುಗಿಸಬೇಕೆಂಬ ಉದ್ದೇಶದಿಂದ ಹಿರಿಯ ನಾಗರಿಕರು ಮುಂಜಾನೆಯೇ ಸರತಿ ಸಾಲಿನಲ್ಲಿ ನಿಂತಿದ್ದರು.

ಎಲೆಕ್ಟ್ರಿಕ್ ಮೂರು ಚಕ್ರದ ಸೈಕಲ್ ಏರಿ ಬಂದ ಅಂಗವಿಕಲ ಅಳದಪ್ಪ ಅವರು ಮತದಾನ ಮಾಡಿ ಎಲ್ಲರಿಗೂ ಸ್ಫೂರ್ತಿಯಾದರು. "ಮತದಾನ ನಮ್ಮ ಹಕ್ಕು ಸಾರ್, ಎಲ್ಲರೂ ಬಂದು ಓಟ್ ಹಾಕಬೇಕು" ಎಂದು ಅವರು ಸಂದೇಶ ನೀಡಿದರು.

ಗಣ್ಯರ ಮತದಾನ

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ಶಿರ್ಮಗೊಂಡನಹಳ್ಳಿಯ ಮತಗಟ್ಟೆ ಸಂಖ್ಯೆ 242ಕ್ಕೆ ಆಗಮಿಸಿ ತಮ್ಮ ಮತ ಚಲಾಯಿಸಿದರು. ಘಟಾನುಘಟಿ ನಾಯಕರ ಭೇಟಿಯಿಂದ ಮತಗಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಒಟ್ಟಾರೆಯಾಗಿ, ಗ್ರಾಮೀಣ ಭಾಗದಲ್ಲಿ ಮತದಾನದ ಪ್ರಮಾಣ ಚುರುಕುಗೊಂಡಿದ್ದು, ಯುವ ಸಮೂಹದ ಉತ್ಸಾಹ ಮತ್ತು ಹಿರಿಯರ ಜವಾಬ್ದಾರಿಯುತ ನಡವಳಿಕೆ ಈ ಉಪಚುನಾವಣೆಗೆ ವಿಶೇಷ ಮೆರುಗು ನೀಡಿದೆ.