ಮಾಸ್ಕ್ ಧರಿಸುವಂತೆ ತಿಳಿ ಹೇಳಿದ ಪಿಡಿಓಗೆ ಹೊಡೆದು ಯುವಕ ಪರಾರಿ
ಕೊರೋನಾ ಜಾಗೃತಿ ಮೂಡಿಸುತ್ತಿದ್ದ ಪಂಚಾಯತ್ ಅಭಿವೃದ್ದಿ ಅಧಿಕಾರಿಗೆ ಯುವಕನೊಬ್ಬ ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಘಟನೆ ಚನ್ನಗಿರಿ ತಾಲೂಕಿನ ಕರೇಕಟ್ಟೆಯಲ್ಲಿ ನಡೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಮೇ.06):ಮಾಸ್ಕ್ ಧರಿಸುವಂತೆ ತಿಳಿಹೇಳಿದ ಗ್ರಾಪಂ ಪಿಡಿಓ, ಸಿಬ್ಬಂದಿ ಮೇಲೆ ಕಿಡಿಗೇಡಿಯೊಬ್ಬ ಹಲ್ಲೆ ನಡೆಸಿದ್ದು, ಈ ಸಂದರ್ಭ ಪಿಡಿಓ ಗಂಭೀರ ಗಾಯಗೊಂಡ ಘಟನೆ ಚನ್ನಗಿರಿ ತಾಲೂಕಿನ ಕರೇಕಟ್ಟೆಯಲ್ಲಿ ಮಂಗಳವಾರ ನಡೆದಿದೆ. ಆರೋಪಿ ಪರಾರಿಯಾಗಿದ್ದಾನೆ.
ಪಿಡಿಓ ರಂಗಸ್ವಾಮಿ ಹಾಗೂ ಸಿಬ್ಬಂದಿ ಗ್ರಾಮಸ್ಥರಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಈ ವೇಳೆ ಮಾಸ್ಕ್ ಧರಿಸದ 20 ವರ್ಷದ ಯುವಕನೊಬ್ಬ ಅಲ್ಲಿಯೇ ಸುತ್ತಾಡುತ್ತಿದ್ದ. ಆಗ ಪಿಡಿಓ ರಂಗಸ್ವಾಮಿ, ಸಿಬ್ಬಂದಿ ಅವನಿಗೆ, ಮೊನ್ನೆಯಷ್ಟೇ ಗ್ರಾಮಸ್ಥರಿಗೆ ಶಾಸಕರು ಮಾಸ್ಕ್ ಹಂಚಿದ್ದಾರೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕು ಎಂದು ತಿಳಿಹೇಳಿದ್ದಾರೆ.
ಮದ್ಯ ಸೇವಿಸಲು ಹಣ ಇರುವವರಿಗೆ ಉಚಿತ ಅಕ್ಕಿ ವಿತರಣೆ ನಿಲ್ಲಿಸಿ: ಪಂಡಿತಾರಾಧ್ಯ ಶ್ರೀ
ಇದರಿಂದ ಕುಪಿತಗೊಂಡ ಯುವಕ ಏಕಾಏಕಿ ರಂಗಸ್ವಾಮಿ ಅವರಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಸಾಲದ್ದಕ್ಕೆ ಬೈಕ್‌ನಲ್ಲಿದ್ದ ಪಿಡಿಓ ಕೊರಳಪಟ್ಟಿಹಿಡಿದು, ನೆಲಕ್ಕೆ ಕೆಡವಿ, ಚರಂಡಿಗೂ ಕೆಡವಿ ಹಲ್ಲೆ ಮಾಡಿದ್ದಾನೆ. ಇದರಿಂದ ಪಿಡಿಓ ತಲೆಗೆ ರಕ್ತಗಾಯವಾಯಿತು. ಕೈ-ಕಾಲು, ಮೈಗೂ ತೀವ್ರ ಪೆಟ್ಟಾಯಿತು. ಈ ಸಂದರ್ಭ ಅಧಿಕಾರಿ ರಕ್ಷಣೆಗೆ ಬಂದ ಸಿಬ್ಬಂದಿ ಮೇಲೂ ಹಲ್ಲೆ ಮಾಡಿದ್ದಾನೆ.
ತಕ್ಷಣವೇ ಗಾಯಾಳು ರಂಗಸ್ವಾಮಿ ಅವರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಯಿತು. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗೆ ಶೋಧ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.