ಸಿರಿಗೆರೆ(ಮೇ.06): ಕೊರೋನಾ ರೋಗಾಣು ಭೀಕರವಾಗಿ ಬದುಕನ್ನೇ ತತ್ತರಿಸಿರುವ ಈ ಸಂದರ್ಭದಲ್ಲಿ ಮದ್ಯಪಾನಕ್ಕಾಗಿಯೇ ಹಾತೊರೆಯುವ ಜನರಿಗೆ ಸರ್ಕಾರದಿಂದ ನೀಡುವ ಅಕ್ಕಿ, ಉಚಿತ ದಿನಸಿ ಮುಂತಾದ ಸೌಕರ‍್ಯಗಳನ್ನು ನಿಲ್ಲಿಸಬೇಕೆಂದು ಸಾಣೆಹಳ್ಳಿಯ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಮದ್ಯಪಾನಕ್ಕೆ ಖರ್ಚು ಮಾಡುವ ಜನರು ಸಂಸಾರ ಸಾಗಿಸಲು ಬೇಕಾದ ಅಕ್ಕಿ ಮುಂತಾದ ದವಸಗಳನ್ನು ಕೊಳ್ಳಲು ಶಕ್ತರಿರಲೇಬೇಕಲ್ಲವೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರಲ್ಲದೆ ಮದ್ಯದ ವಿರುದ್ಧ ಎಲ್ಲಾ ಅಂಗಡಿಗಳ ಮುಂದೆ ಸತ್ಯಾಗ್ರಹಗಳನ್ನು ಆರಂಭಿಸಲು ರಾಜ್ಯದ ಮಹಿಳಾ ಸಂಘಟನೆಗಳಿಗೆ ಕರೆಕೊಟ್ಟಿದ್ದಾರೆ.

ಇವತ್ತು ಜನರಿಗೆ ಬೇಕಾಗಿರುವುದು ಮದ್ಯವಲ್ಲ, ಉದ್ಯೋಗ, ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳು. ಇವುಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕೇ ಹೊರತು ಮನೆತನ ಮುರಿಯುವ ಮದ್ಯ ಮಾರಾಟಕ್ಕಲ್ಲ. ಸರ್ಕಾರ ಈಗಲೂ ಚಿಂತನೆ ಮಾಡಿ ವಿರೋಧ ಪಕ್ಷದವರ ಜೊತೆಗೂ ಚರ್ಚಿಸಿ ಮದ್ಯ ನಿಷೇಧ ಕಾನೂನನ್ನು ಜಾರಿಗೊಳಿಸಬೇಕು ಎಂದಿದ್ದಾರೆ.

900 ಹೊಸ ಮದ್ಯದಂಗಡಿ ತೆರೆಯಲು ನಿರ್ಧಾರ!

ನಿನ್ನೆ ಕೆಲವೆಡೆ ಮಹಿಳೆಯರೇ ಮದ್ಯ ಮಾರಾಟಕ್ಕೆ ತಡೆ ಒಡ್ಡಿರುವುದು ಸ್ವಾಗತಾರ್ಹ. ಸರ್ಕಾರ ನಿಷೇಧ ಮಾಡಲಿ ಎಂದು ಕಾಯುವ ಬದಲು ಮಹಿಳಾ ಸಂಘಟನೆಯವರೇ ಇಡೀ ಕರ್ನಾಟಕದುದ್ದಕ್ಕೂ ಮದ್ಯದಂಗಡಿಗಳ ಮುಂದೆ ಸತ್ಯಾಗ್ರಹ ಕೂತು ಮಾರಾಟವನ್ನು ತಡೆಗಟ್ಟುವ ಪುಣ್ಯದ ಕಾರ್ಯವನ್ನು ಮಾಡಬೇಕು. ಗಾಂಧಿ ನಾಡಿನಲ್ಲಿ ಇನ್ನೂ ಸತ್ಯಾಗ್ರಹಕ್ಕೆ ಗೌರವ ಇದೆ. ಸಾರ್ವಜನಿಕರು, ನಮ್ಮ ತಾಯಂದಿರು ಎಲ್ಲೆಡೆ ಬೀದಿಗೆ ಬಂದು ಮದ್ಯದಂಗಡಿಗಳನ್ನು ಮುಚ್ಚಿಸುವ ಕಾರ್ಯ ಮಾಡಬೇಕು.

ಸೋಮವಾರ ರಾಜ್ಯದಲ್ಲಿ ಒಂದೇ ದಿನ ಸುಮಾರು 45 ಕೋಟಿ ಬೆಲೆಯ ಮದ್ಯ ಮಾರಾಟವಾಗಿದೆ ಎಂಬುದು ಪ್ರಜ್ಞಾವಂತರಿಗೆ ಅಸಹ್ಯದ ವಿಷಯ. ಕಳೆದ 40 ದಿನಗಳಿಂದ ಕೋಟಿ ಕೋಟಿ ಕುಟುಂಬಗಳು ನೆಮ್ಮದಿಯಿಂದ ಇದ್ದವು. ಮದ್ಯದಿಂದ ಮುಕ್ತರಾಗಲು ಮನಸ್ಸು ಮಾಡಿದ್ದರು. ಆದರೆ ಸರ್ಕಾರ ತೆಗೆದುಕೊಂಡ ತೀರ್ಮಾನದಿಂದ ಮದ್ಯವ್ಯಸನಿಗಳಾದ ಹೆಣ್ಣು ಗಂಡು ಮನುಷ್ಯತ್ವವನ್ನೇ ಮಾರಿಕೊಂಡವರಂತೆ ಮದ್ಯದಂಗಡಿಗಳ ಮುಂದೆ ಸಾಲುಸಾಲಾಗಿ ನಿಂತು ಖರೀದಿಸಿರುವುದು ನಾಚಿಗೇಡಿನ ಸಂಗತಿಯಾಗಿದೆ. ಇಷ್ಟಲ್ಲದೆ ಅಂಗಡಿಗಳ ಮುಂದೆ ಉರುಳು ಸೇವೆ, ಪೂಜೆ, ಪಟಾಕಿ, ಹೂಮಾಲೆ ಹಾಕಿದ್ದು, ರಸ್ತೆಗಳಲ್ಲಿ ಬಿದ್ದು ಒದ್ದಾಡಿದ್ದು ಹೇಸಿಗೆ ತರುವಂತಹದ್ದಾಗಿದೆ ಎಂದು ಶ್ರೀಗಳು ನೊಂದು ನುಡಿದಿದ್ದಾರೆ.

ಮದ್ಯ ಮಾರಾಟವನ್ನೇ ಆದಾಯದ ಮೂಲವೆಂದು ಬಡವರಿಗೆ ಮದ್ಯ ಕುಡಿಸಲು ಮುಂದಾಗಿದ್ದು ಪ್ರಜ್ಞಾವಂತರು ತಲೆ ತಗ್ಗಿಸುವಂತೆ ಮಾಡಿದೆ. ಕೊರೊನಾ ಹೆಮ್ಮಾರಿಯನ್ನೇ ಕಾರಣವಾಗಿಸಿಕೊಂಡು ಸರ್ಕಾರ ಸಂಪೂರ್ಣ ಮದ್ಯಪಾನ ನಿಷೇಧಿಸುವ ಮನಸ್ಸು ಮಾಡಬೇಕಿತ್ತು. ನಮ್ಮ ಬಹುತೇಕ ಮುಖಂಡರಿಗೆ ದೂರದೃಷ್ಟಿಯ ಕೊರತೆ ಎದ್ದು ಕಾಣುತ್ತಿದೆ. ತಾತ್ಕಾಲಿಕ ಅಧಿಕಾರ, ಕೀರ್ತಿ, ಗೌರವ, ಸಂಪತ್ತಿನ ದಾಸ್ಯದಿಂದ ಅವರು ‘ಜನಪ್ರಿಯ’ ಕಾರ್ಯಗಳನ್ನು ಮಾಡುವರೇ ಹೊರತು ‘ಜನಪರ’ ಕಾರ್ಯಗಳನ್ನು ಮಾಡುವುದಿಲ್ಲ ಎಂದಿದ್ದಾರೆ.