Davanagere: ಶಾಮನೂರು ಶಿವಶಂಕರಪ್ಪ ಶುಗರ್ ಪ್ಯಾಕ್ಟರಿಗೆ ವಿರೋಧ: ಹೊಗೆಯಿಂದ ಜೀವನ ದುಸ್ತರ

ಎಸ್ ಎಸ್ ಗಣೇಶರವರ ಒಡೆತನದ ದಾವಣಗೆರೆ ಸಕ್ಕರೆ ಕಂಪನಿ
ದಾವಣಗೆರೆ  ತಾಲ್ಲೂಕಿನ ಕುಕ್ಕುವಾಡ ಗ್ರಾಮಸ್ಥರ ಆಕ್ರೋಶ
ರೈತರು ಬೆಳೆದಿರುವ ಭತ್ತ ಪೂರ್ಣ ಕಪ್ಪು

Davanagere Opposition to Shamanur Shivshankarappa Sugar Factory Smoke makes life impossible sat

ವರದಿ : ವರದರಾಜ್ ಏಷ್ಯಾನೆಟ್‌ ಸುವರ್ಣ ನ್ಯೂಸ್ 

ದಾವಣಗೆರೆ (ಜ 19):  ದಾವಣಗೆರೆ  ತಾಲ್ಲೂಕಿನ ಕುಕ್ಕುವಾಡ ಗ್ರಾಮದಲ್ಲಿರುವ ಶಾಸಕ ಶಾಮನೂರು ಶಿವಶಂಕರಪ್ಪನವರ ಮಗ ಎಸ್ ಎಸ್ ಗಣೇಶರವರ ಒಡೆತನದ ದಾವಣಗೆರೆ ಸಕ್ಕರೆ ಕಂಪನಿ ಪ್ರತಿ ದಿನ ಹೊರ ಸೂಸುವ ಹೊಗೆಯಿಂದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಜನರು ಬದುಕುವುದು ಕಷ್ಟಕರವಾಗಿದೆ.

ಪ್ರತಿ ನಿತ್ಯ ಈ ಶುಗರ್ ಫ್ಯಾಕ್ಟರಿಯ ಚಿಮಣಿಯಿಂದ ಬೂದಿ ಹೊರಸೂಸುತ್ತಿದೆ. ಇದರಿಂದ ಹಂಚಿನ ಮನೆಗಳ ಮೇಲೆ ಈ ಬೂದಿ ಬಿದ್ದು ಶೇಖರವಾಗಿ ಗಾಳಿಯಲ್ಲಿ ಎಲ್ಲಾ ಕಡೆ ಪ್ರಸರಿಸುತ್ತದೆ. ಊಟ ಮಾಡುವಾಗ ತಟ್ಟೆಯಲ್ಲಿ  ಬೀಳುವುದರಿಂದ ಇದನ್ನೇ ಊಟ ಮಾಡಿದ ಜನರು ರೋಗ ರುಜೀನಗಳಿಂದ ಬಳಲುತ್ತಿದ್ದಾರೆ. ಮನೆ ಅಂಗಳದಲ್ಲಿ ಒಣ ಹಾಕಿದ ಬಟ್ಟೆಗಳ ಮೇಲೆ ಈ ಬೂದಿ ಬೀಳುವುದರಿಂದ ಬಟ್ಟೆ ಬಿಳಿ ಬಣ್ಣದಿಂದ ಬೂದು ಬಣ್ಣಕ್ಕೆ ತಿರುಗಿವೆ. ಬಯಲಿನಲ್ಲಿ ಬೆಳೆದಿರುವ ಹುಲ್ಲು, ಗಿಡ ಗಂಟೆಗಳ ಮೇಲೆ ಈ ಬೂದಿ ಬೀಳುತ್ತದೆ. ಈ ಹುಲ್ಲನ್ನೇ ಧನ ಕರುಗಳು, ಕುರಿ ಮೇಕೆಗಳು ಮೇಯುವುದರಿಂದ ಇವುಗಳು ಸಹ ಸರಿಯಾದ ಬೆಳವಣಿಗೆ ಇಲ್ಲದೆ ರೋಗಗ್ರಸ್ತವಾಗಿವೆ. ಇದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಮಾಡುತ್ತಿರುವ ರೈತರು ನಷ್ಟದ ಸಂಕಷ್ಟಕ್ಕೀಡಾಗಿದ್ದಾರೆ. 

Davanagere: 92ರ ಇಳಿವಯಸ್ಸಿನಲ್ಲೂ ಶಾಮನೂರು ಶಿವಶಂಕರಪ್ಪ ಸ್ಪರ್ಧೆ ಖಚಿತ: ಕಣಕ್ಕಿಳಿದ ಅಪ್ಪ-ಮಗ

ಬಿಳಿ ಬಟ್ಟೆ ಧರಿಸುವಂತಿಲ್ಲ: ನಿತ್ಯ ಜನರು ಸೇರಿದಂತೆ ಪಶುಗಳು ಹೊಗೆಯಿಂದ ಬರುವ ಬೂದಿ ತಿಂದು ಬದುಕಬೇಕಾಗಿದೆ. ಒಂದು ದಿನವೂ ಬಿಳಿ ಅಥವಾ ಸ್ವಚ್ಛ ಬಟ್ಟೆ ಧರಿಸುವಂತಿಲ್ಲ. ಈ ಭಾಗದ ರೈತರು ಬೆಳೆದಿರುವ ಭತ್ತ ಪೂರ್ಣ ಕಪ್ಪು ಆಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕಡಿಮೆಯಾಗುತ್ತದೆ. ಈ ಸಕ್ಕರೆ ಕಾರ್ಖಾನೆಯಿಂದ ಹೊರಸೂಸುವ ವಿಷಯುಕ್ತ ತ್ಯಾಜ್ಯ ನೀರನ್ನು ಸಹ ಹಳ್ಳಕ್ಕೆ ಬಿಡಲಾಗುತ್ತಿದೆ. ಈ ನೀರಿನಲ್ಲಿ ಆಸಿಡ್ ಇದ್ದು, ಬಹಳ ಅಪಾಯಕಾರಿ ಆಗಿದೆ. ಹಳ್ಳದಲ್ಲಿರುವ ಮೀನು ಮತ್ತು ಇತರೆ ಜಲಚರ ಜೀವಿಗಳು ಸತ್ತಿವೆ. ಇದೇ ನೀರನ್ನು ಸುತ್ತ ಮುತ್ತಲ ಗ್ರಾಮಗಳ ರೈತರು ಈ ನೀರನ್ನು ಪಂಪ್ ಸೆಟ್ ಗಳ ಮೂಲಕ ಜಮೀನುಗಳಿಗೆ ನೀರು ಪೂರೈಕೆ ಮಾಡುತ್ತಾರೆ. ಇದರಿಂದ ಎಲ್ಲಾ ರೈತರ ಜಮೀನುಗಳು ವಿಷಯುಕ್ತವಾಗಿವೆ.

ಕೆಂಪು ಮಣ್ಣು ಬೂದಿಮಯವಾಗಿದೆ: ರೈತರ ಹೊಲಗಳೆಲ್ಲಾ ಬೂದಿಮಾಯವಾಗಿ ಮತ್ತು ವಿಷಯುಕ್ತವಾಗಿ ‌ಬೆಳೆಗಳೆಲ್ಲಾ ನಾಶವಾಗುತ್ತಿವೆ. ದನ, ಕರುಗಳು, ಕುರಿ, ಮೇಕೆಗಳು ಇದೆ ನೀರನ್ನೇ ಕುಡಿದು ಬದುಕಬೇಕಾಗಿದೆ. ಈ ಹಳ್ಳಿಗಳ ಜಮೀನು ಕೆಂಗಲು (ಕೆಂಪು) ಜಮೀನು. ಆದರೆ ಈ ಜಮೀನುಗಳ ಮಣ್ಣು ಕೆಂಪಾಗಿ ಕಾಣುತ್ತಿಲ್ಲ. ಎರೆ (ಕಪ್ಪು) ಮಣ್ಣಿನ ರೀತಿ ಕಪ್ಪಾಗಿ ಕಾಣಿಸುತ್ತದೆ. ಜೀವಾಣುಗಳು ನಾಶವಾಗಿದ್ದು, ಯಾರ ಜಮೀನಿನಲ್ಲಿಯೂ ಎರೆ ಹುಳು ಕಾಣಿಸುವುದಿಲ್ಲ. ಈ ಜಮೀನಿನಲ್ಲಿ ಬೆಳೆ ಇಳುವರಿ ಬಹಳ ಕಡಿಮೆ ಆಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಳ್ಳಿಗಳ ಜನರ ಬದುಕು ಬೂದಿಮಯವಾಗಿ ಬರ್ಬಾದಾಗಿದೆ. ವಿಷಯುಕ್ತ ಬೂದಿ ಮಿಶ್ರಿತ ಗಾಳಿ ಮತ್ತು ವಿಷ ಮಿಶ್ರಿತ ನೀರಿನಿಂದ ಜನರ ಪಶುಗಳ ಉಸಿರಾಟ ಕಷ್ಟಕರವಾಗಿದೆ.

Davanagere: ಶಾಮನೂರು ಶಿವಶಂಕರಪ್ಪನವರ ಪುತ್ರನ ಸಕ್ಕರೆ ಕಂಪನಿಯಿಂದ ಸುತ್ತ ಹಳ್ಳಿಗಳ ಜನರ ಆಕ್ರೋಶ

ಗ್ರಾಮಸ್ಥರು  ಬೇಡಿಕೆಗಳು
1.ಸಕ್ಕರೆ ಕಾರ್ಖಾನೆ ಚಿಮಣಿಯಿಂದ ಹೊರಸೂಸುವ ಬೂದಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು.
2.ತ್ಯಾಜ್ಯ ನೀರನ್ನು ಹಳ್ಳಕ್ಕೆ ಬಿಡಬಾರದು. ಕಾರ್ಖಾನೆ ಆವರಣದಲ್ಲಿ ಇದನ್ನು ಸಂಗ್ರಹಿಸಿ, ಸಂಸ್ಕರಿಸಬೇಕು. 
3.ಕಬ್ಬು ಕಟಾವು ಮಾಡಲು ನಿಗಧಿತ ಸಮಯದಲ್ಲಿ ಪರ್ಮಿಟ್ ಕೊಡುತ್ತಿಲ್ಲ. ಇದರಿಂದ ಕಬ್ಬಿನ ತೂಕ ಕಡಿಮೆಯಾಗಿ, ರೈತನಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ 10 ರಿಂದ 11 ತಿಂಗಳೊಳಗೆ ಪರ್ಮಿಟ್ ಕೊಡಬೇಕು.
4.ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುವ ಕಾರ್ಮಿಕರ ಕೂಲಿ ವೆಚ್ಚ ಹೆಚ್ಚಳವಾಗಿದೆ. ಈ ವೆಚ್ಚ ಕಬ್ಬಿನ ಬೆಲೆಯ ಅರ್ಧದಷ್ಟು ಆಗಿದೆ. ಇದರಿಂದ ಕಬ್ಬು ಬೆಳೆದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಯಂತ್ರಗಳ ಮೂಲಕ ಕಬ್ಬು ಕಟಾವು ಮಾಡಿ, ಕಾರ್ಖಾನೆಗೆ ಸಾಗಿಸುವ ಜವಾಬ್ದಾರಿಯನ್ನು ಕಾರ್ಖಾನೆಯವರೆ ವಹಿಸಿಕೊಳ್ಳಬೇಕು.
5.ಕಬ್ಬಿನ ಟನ್ ಒಂದಕ್ಕೆ ರೂ.3100.00 ಕೊಡಬೇಕು ಎಂದು ರಾಜ್ಯ ಸರ್ಕಾರ ನಿಗದಿಪಡಿಸಿದೆ. ಆದರೆ ಈ ಕಾರ್ಖಾನೆಯಲ್ಲಿ ಟನ್ ಒಂದಕ್ಕೆ ರೂ.1825.00 ಮಾತ್ರ ಕೊಡಲಾಗುತ್ತಿದೆ. ಇದು ಟನ್ ಗೆ 275 ರೂಪಾಯಿ ಕಡಿಮೆಯಾಗುತ್ತದೆ. ಇದರಿಂದ ರೈತರಿಗೆ ಬಹಳ ಅನ್ಯಾಯವಾಗುತ್ತಿದೆ. ಈ ಹಂಗಾಮಿನಲ್ಲಿ ಸರ್ಕಾರ ನಿಗದಿಪಡಿಸಿರುವ ಬೆಲೆ 3100.00 ತಕ್ಷಣದಿಂದ ಕೊಡಬೇಕು. ಈಗಾಗಲೇ ಕಬ್ಬು ಸರಬರಾಜು ಮಾಡಿರುವ ರೈತರಿಗೂ 275 ರೂಪಾಯಿ ಬಿಡುಗಡೆ ಮಾಡಬೇಕು.
6.ಕಬ್ಬು ಸರಬರಾಜು ಮಾಡಿ, 2 ತಿಂಗಳಾದರೂ ಅಂತಿಮ ಬಿಲ್ ಪಾವತಿಸಿಲ್ಲ. ಕಬ್ಬು ಸರಬರಾಜು ಮಾಡಿ, 14 ದಿನಗಳೊಳಗೆ ಬಿಲ್ ಪಾವತಿಸಬೇಕು.
7.ಕಾರ್ಖಾನೆಯಲ್ಲಿ ಷೇರು ಹೊಂದಿರುವ ರೈತರಿಗೆ ಲಾಭಾಂಶ ಕೊಡಬೇಕು ಮತ್ತು ಷೇರು ವರ್ಗಾವಣೆ ನಿಯಮಗಳನ್ನು ಸಡಿಲಗೊಳಿಸಿ, ಕಾರ್ಖಾನೆ ಆವರಣದ ಕಚೇರಿಯಲ್ಲಿ ಈ ವರ್ಗಾವಣೆ ಪ್ರಕ್ರಿಯೆ ನಡೆಯಬೇಕು.
8.ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆ ಅನ್ವಯ ವೇತನವನ್ನು ಸಮಯಕ್ಕೆ ಸರಿಯಾಗಿ ಕೊಡಬೇಕು.

ಮನವಿ ಸ್ವೀಕರಿಸಿದ ತಹಶೀಲ್ದಾರ್: ದಾವಣಗೆರೆ ತಹಸೀಲ್ದಾರ್ ಅಶ್ವಥ್ ರವರು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ, ಮನವಿ ಪತ್ರ ಸ್ವೀಕರಿಸಿದರು. ರೈತರ ಈ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು, ರೈತರ ಮತ್ತು ಸಕ್ಕರೆ ಕಂಪನಿ ಮಾಲೀಕರ ಸಭೆ ಕರೆದು ಸಮಸ್ಯೆಗಳ ಕೂಲಂಕಷವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರತಿಭಟನೆಯಲ್ಲಿ ಕೊಳೇನಹಳ್ಳಿ ಬಿ.ಎಂ. ಸತೀಶ್, ಹದಡಿ ಹಾಲಪ್ಪ, ಯಶವಂತರಾವ್ ಜಾದವ್, ಅಣಬೇರು ಜೀವನಮೂರ್ತಿ, ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ್,  ಬಾಬಜ್ಜಿ ಮುಂತಾದವರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios