ದಾವಣಗೆರೆಯ ಗುಮ್ಮನೂರು ಗ್ರಾಮದಲ್ಲಿ, ಮದುವೆಯಾದ ಎರಡೂವರೆ ತಿಂಗಳಲ್ಲೇ ಪತ್ನಿ ಓಡಿಹೋದಳೆಂಬ ಕಾರಣಕ್ಕೆ ನವವಿವಾಹಿತ ಹರೀಶ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತ್ನಿ ಮತ್ತು ಆಕೆ ಕುಟುಂಬವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ನಂತರ ಆಕೆಯ ಸೋದರಮಾವ ಕೂಡ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.
ದಾವಣಗೆರೆ (ಜ.27): ಮದುವೆಯಾಗಿ 100 (ಎರಡೂವರೆ ತಿಂಗಳು) ದಿನ ಕಳೆಯುವ ಮೊದಲೇ ಸಂಸಾರದಲ್ಲಿ ಬಿರುಗಾಳಿ ಎದ್ದು, ನವವಿವಾಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ನಡೆದಿದೆ. ಈ ಸಾವಿನ ಬೆನ್ನಲ್ಲೇ ಮದುವೆ ಮಾಡಿಸಿದ್ದ ಯುವತಿಯ ಸೋದರಮಾವ ಕೂಡ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದು, ಒಂದೇ ಮದುವೆಗೆ ಎರಡು ಜೀವಗಳು ಬಲಿಯಾದಂತಾಗಿದೆ.
ಘಟನೆಯ ವಿವರ
ಗುಮ್ಮನೂರು ಗ್ರಾಮದ ಹರೀಶ್ (32) ಎಂಬುವವರೇ ಮೃತಪಟ್ಟ ದುರ್ದೈವಿ. ಖಾಸಗಿ ಕಂಪನಿಯಲ್ಲಿ ಹೆಚ್‌ಆರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಅವರಿಗೆ ಎರಡೂವರೆ ತಿಂಗಳ ಹಿಂದೆಯಷ್ಟೇ ಸರಸ್ವತಿ ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿ ಸರಸ್ವತಿ ಬೇರೊಬ್ಬ ಯುವಕನ ಜೊತೆ ಓಡಿಹೋಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಮಾನಸಿಕವಾಗಿ ನೊಂದಿದ್ದ ಹರೀಶ್, ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್‌ನಲ್ಲಿ ಏನಿದೆ?
ಆತ್ಮ*ಹತ್ಯೆಗೂ ಮುನ್ನ ಹರೀಶ್ ಸುದೀರ್ಘವಾದ ಡೆತ್ ನೋಟ್ ಬರೆದಿಟ್ಟಿದ್ದಾರೆ. ತನ್ನ ಸಾವಿಗೆ ಪತ್ನಿ ಸರಸ್ವತಿ, ಆಕೆಯನ್ನು ಕರೆದುಕೊಂಡು ಹೋದ ಯುವಕ ಹಾಗೂ ಅತ್ತೆ-ಮಾವನೇ ನೇರ ಕಾರಣ ಎಂದು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಪತ್ನಿ ಓಡಿಹೋದ ನಂತರ ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಪ್ರಾಣ ಬೆದರಿಕೆ ಹಾಕಲಾಗಿತ್ತು ಎಂದು ಹರೀಶ್ ಡೆತ್ ನೋಟ್‌ನಲ್ಲಿ ನೋವು ತೋಡಿಕೊಂಡಿದ್ದಾರೆ. ಕೊನೆಯ ಇಚ್ಛೆಯಾಗಿ, ತನ್ನ ಅಂತ್ಯಸಂಸ್ಕಾರವನ್ನು ಬಸವಧರ್ಮದ ಪ್ರಕಾರ ನೆರವೇರಿಸಬೇಕೆಂದು ಮನವಿ ಮಾಡಿದ್ದಾರೆ.
ಸರಣಿ ಆತ್ಮ*ಹತ್ಯೆ
ಹರೀಶ್ ಆತ್ಮ*ಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ, ಆತನಿಗೆ ಸರಸ್ವತಿಯನ್ನು ಮದುವೆ ಮಾಡಿಸಿಕೊಟ್ಟಿದ್ದ ಆಕೆಯ ಸೋದರಮಾವ ರುದ್ರೇಶ್ (40) ಕೂಡ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಆನೆಕೊಂಡದ ಮನೆಯಲ್ಲಿ ವಿಷ ಸೇವಿಸಿದ್ದ ರುದ್ರೇಶ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸಂಬಂಧ ಬೆಳೆಸಲು ಮುಂದಾಗಿ ಇಷ್ಟೆಲ್ಲಾ ಅವಾಂತರ ನಡೆದಿದ್ದಕ್ಕೆ ನೊಂದು ಅವರು ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.
ದಾವಣಗೆರೆ ಗ್ರಾಮಾಂತರ ಹಾಗೂ ಆರ್‌ಎಂಸಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಒಂದೇ ಕುಟುಂಬದ ನಂಟಿನ ಇಬ್ಬರು ಸಾವನ್ನಪ್ಪಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.


