ಉಕ್ಕಡಗಾತ್ರಿ ಬಳಿ ಹಿರೇಕೆರೂರು ತಾಲೂಕಿನ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಒಡೆದು ಅಪಾರ ಹಾನಿಯಾಗಿದೆ. ನೀರಿನ ರಭಸಕ್ಕೆ ರಸ್ತೆ ಕೊಚ್ಚಿಹೋಗಿದ್ದು, ತೆಂಗು ಮತ್ತು ಅಡಕೆ ಮರಗಳು ನೆಲಕ್ಕುರುಳಿವೆ. ಕಳಪೆ ಕಾಮಗಾರಿಯಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದಾವಣಗೆರೆ (ಮಲೇಬೆನ್ನೂರು): ಇಲ್ಲಿಗೆ ಸಮೀಪದ ಉಕ್ಕಡಗಾತ್ರಿ ಗ್ರಾಮದ ಬಳಿ ಹಿರೇಕೆರೂರು ತಾಲೂಕಿನ ಕುಡಿಯುವ ನೀರು, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್ ಒಡೆದು ಅಪಾರ ಹಾನಿ ಸಂಭವಿಸಿದೆ. ನೀರು ರಭಸವಾಗಿ ಚಿಮ್ಮಿದ್ದರಿಂದ ಉಕ್ಕಡಗಾತ್ರಿ ಕ್ಷೇತ್ರ ಸಂಪರ್ಕ ರಸ್ತೆ ಕೊಚ್ಚಿಹೋಗಿದೆ.

ಪೈಪ್‌ಲೈನ್‌ ಒಡೆದು ನೀರು ಚಿಮ್ಮಿದ ಸದ್ದಿಗೆ ಹತ್ತಿರದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಭಯಗೊಂಡು ಓಡಿಹೋಗಿದ್ದಾರೆ. ಪೈಪ್‌ಲೈನ್‌ನಲ್ಲಿ ನೀರಿನ ರಭಸ ಎಷ್ಟರಮಟ್ಟಿದೆ ಇತ್ತು ಎಂದರೆ ಪಕ್ಕದ ತೋಟದಲ್ಲಿ 8 ಅಡಕೆ ಮರಗಳು, 3 ತೆಂಗಿನ ಮರಗಳೂ ನೆಲಕ್ಕುರುಳಿವೆ.

30 ಅಡಿ ಎತ್ತರಕ್ಕೆ ಚಿಮ್ಮಿದ ನೀರು

ಕರಿಬಸವೇಶ್ವರ ಪ್ರೌಢಶಾಲೆ ಹಿಂಭಾಗದ ಸಮೀಪದಲ್ಲಿರುವ ಈ ಪೈಪ್ ಲೈನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದರಿಂದ ಸುಮಾರು 20 ರಿಂದ 30 ಅಡಿಗಳ ಎತ್ತರಕ್ಕೆ ನೀರು ಚಿಮ್ಮಿದೆ. ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಇರುವುದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ಶಾಲಾ ಆವರಣದ ತುಂಬೆಲ್ಲ ನೀರು ಆವರಿಸಿದೆ. ಆವರಣದಲ್ಲಿನ ಶಾಲಾ ಕೈ ತೋಟ ಜಲಾವೃತಗೊಂಡಿದೆ. ಮರ-ಗಿಡಗಳು ನೆಲಕ್ಕುರುಳಿವೆ. ತೆಂಗಿನ ಮರಗಳು, ಅಡಕೆ ಮರಗಳು, ರಸ್ತೆ ಹಾನಿ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ಸಿದ್ದನಗೌಡ ಮುದೆಗೌಡ್ರ ದೃಢಪಡಿಸಿದ್ದಾರೆ.

ಯಾವ ಪೈಪ್‌ಲೈನಿದು?

ತುಂಗಭದ್ರಾ ನದಿಯಿಂದ ಉಕ್ಕಡಗಾತ್ರಿ ಬಳಿ ಜಾಕ್ ವೆಲ್ ಮುಖಾಂತರ ಹಿರೇಕೆರೂರು ತಾಲೂಕಿಗೆ ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್‌ ಇದಾಗಿದೆ. ಸುಮಾರು 6 ತಿಂಗಳ ಹಿಂದೆಯೂ ಇದೇ ರೀತಿ ಪೈಪ್‌ಲೈನ್‌ ಒಡೆದು ಸ್ವಲ್ಪ ಪ್ರಮಾಣದ ಹಾನಿಯಾಗಿತ್ತು. ಈಗ ಮತ್ತೊಮ್ಮೆ ಪೈಪ್‌ಲೈನ್‌ ಒಡೆದ ಘಟನೆ ಮರುಕಳಿಸಿದೆ. ಜಾಕ್‌ವೆಲ್ ಪೈಪ್‌ಲೈನ್‌ಗಳ ಅಳವಡಿಕೆಯಲ್ಲಿ ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದ ಈ ರೀತಿ ಪದೇಪದೇ ಸಮಸ್ಯೆ ಆಗುತ್ತಿದೆ.

ಪೈಪ್‌ಲೈನ್‌ಗಳ ಸಮರ್ಪಕ ನಿರ್ವಹಣೆ ಕೊರತೆ

ಈ ಅವಘಡದಿಂದ ಪೈಪ್‌ಲೈನ್‌ಗಳ ಸಮರ್ಪಕ ನಿರ್ವಹಣೆ ನಡೆಯುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜಾಕ್‌ವೆಲ್ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಗೌಡ ಜಿಗಳೇರ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕೋಟ್ಯಧಿಪತಿಗಳಾದರೂ ವೈದ್ಯಕೀಯ ಬಿಲ್ ಸರ್ಕಾರದ್ದೇ! ಶಾಸಕರಿಗೆ ₹7.40 ಕೋಟಿ ಮರುಪಾವತಿ, ಟಾಪ್‌ನಲ್ಲಿ ಇರೋದು ಇವರೇ!