ಪುರಸಭೆಯು ಘನತ್ಯಾಜ್ಯ ನಿರ್ವಹಣಾ ನಿಯಮದ ಅಡಿಯಲ್ಲಿ ತ್ಯಾಜ್ಯವನ್ನು 4 ವಿಧಗಳಲ್ಲಿ ವಿಂಗಡಿಸುವುದನ್ನು ಕಡ್ಡಾಯಗೊಳಿಸಿದೆ. ಈ ನಿಯಮ ಪಾಲಿಸದ ಸಾರ್ವಜನಿಕರು ಮತ್ತು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಟಿ.ಲೀಲಾವತಿ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ:  ಘನತ್ಯಾಜ್ಯ ನಿರ್ವಹಣಾ ನಿಯಮ- 2026ರಂತೆ ಇನ್ನು ಮುಂದೆ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಹೋಟೆಲ್ ಮಾಲೀಕರು, ವಾಣಿಜ್ಯ ಉದ್ದಿಮೆದಾರರು, ಬೀದಿಬದಿ ವ್ಯಾಪಾರಸ್ಥರು ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ 4 ವಿಧದ ತ್ಯಾಜ್ಯಗಳಾದ ಹಸಿತ್ಯಾಜ್ಯ, ಒಣತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ಅಥವಾ ಅಪಾಯಕಾರಿ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕ್ರಮಬದ್ದವಾಗಿ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊನ್ನಾಳಿ ಪುರಸಭೆ ವ್ಯಾಪ್ತಿ

ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘನತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಘನತ್ಯಾಜ್ಯ ನಿರ್ವಹಣಾ ನಿಯಮ 2026 ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕಾಗಿದೆ. ಆದ್ದರಿಂದ ಹೊನ್ನಾಳಿ ಪುರಸಭೆ ವ್ಯಾಪ್ತಿಯ ಎಲ್ಲ ತ್ಯಾಜ್ಯ ಉತ್ಪಾದಕರಿಗೆ ಕರಪತ್ರಗಳು, ಬ್ಯಾನರ್‌ಗಳು, ದಿನಪತ್ರಿಕೆಗಳು, ಕಸ ಸಂಗ್ರಹಿಸುವ ಪುರಸಭೆ ವಾಹನಗಳ ಧ್ವನಿವರ್ಧಕಗಳ ಮೂಲಕ ಈಗಾಗಲೇ ಸಾರ್ವಜನಿಕರು, ವರ್ತಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ ಎಂದರು.

ಆದರೆ, ಹಲವಾರು ಜನ ಖಾಲಿ ನಿವೇಶನ, ಚರಂಡಿಗಳು, ರಸ್ತೆ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಇಡೀ ನಗರದ ಸ್ವಚ್ಛತೆ ಹಾಳು ಮಾಡುತ್ತಿದ್ದಾರೆ. ಇದು ಪುರಸಭೆ ಗಮನಕ್ಕೆ ಬಂದಿದೆ. ಜನರು ತಮ್ಮ, ಕಚೇರಿ, ಅಂಗಡಿಗಳಿಂದ ಪ್ರತಿನಿತ್ಯ ಉತ್ಪತ್ತಿಯಾಗುವ 4 ವಿಧದ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ತಪ್ಪದೇ ನಿತ್ಯ ಬೆಳಗ್ಗೆ ಪುರಸಭೆಯಿಂದ ಬರುವ ಕಸ ಸಂಗ್ರಹ ವಾಹನಗಳಿಗೆ ಕಡ್ಡಾಯವಾಗಿ ನೀಡಬೇಕು ಎಂದರು.

ಬಟ್ಟೆ ಅಂಗಡಿ, ಗ್ಯಾರೇಜ್, ಮೆಡಿಕಲ್ ಶಾಪ್, ಪ್ರಾವಿಜನ್ ಸ್ಟೋರ್ಸ್‌, ಹಣ್ಣು, ತರಕಾರಿ ಅಂಗಡಿ, ಹೋಟೆಲ್‌ಗಳಲ್ಲಿ ಬೀದಿಬದಿ ವ್ಯಾಪಾರಿಗಳು ಇತರೆ ಯಾವುದೇ ವಾಣಿಜ್ಯ ಉದ್ದಿಮೆದಾರರು ಪುರಸಭೆಯಿಂದ ಉದ್ದಿಮೆ, ಪರವಾನಗಿಯನ್ನು ಪಡೆಯುವುದು, ತಂಬಾಕು ಉತ್ಪನ್ನ ಮಾರಾಟಗಾರರು ಪ್ರತ್ಯೇಕ ತಂಬಾಕು ಮಾರಾಟ ಪರವಾನಗಿ ಕಡ್ಡಾಯವಾಗಿ ಪಡೆದು ವ್ಯವಹಾರ ಸ್ಥಳದಲ್ಲಿ ಉತ್ಪತ್ತಿ ಆಗುವ ತ್ಯಾಜ್ಯಗಳನ್ನು ಶೇಖರಿಸಿಡಬೇಕು. ಬಳಿಕ ಪ್ರತಿದಿನ ತಮ್ಮ ಬಳಿ ಬರುವ ಪುರಸಭೆ ವಾಹನಕ್ಕೆ ನೀಡಬೇಕು ಎಂದರು.

ಸಾರ್ವಜನಿಕರಲ್ಲಿ ಮನವಿ

ವ್ಯಾಪಾರಸ್ಥರು ವ್ಯಾಪಾರದ ಸ್ಥಳದಲ್ಲಿ ಗ್ರಾಹಕರು ಎಸೆದುಹೋದ ಟೀ ಲೋಟ, ತಂಬಾಕು ಚೀಟಿ, ಹಣ್ಣಿನ ಸಿಪ್ಪೆಗಳನ್ನು ರಸ್ತೆಯಲ್ಲಿ ಎಸೆಯದೇ ನಿಗದಿಪಡಿಸಿದ ಬುಟ್ಟಿಗಳಲ್ಲಿ ಹಾಕುವಂತೆ ಕ್ರಮಕೈಗೊಳ್ಳಬೇಕು. ಈ ಮೂಲಕ ನಗರದ ಸ್ವಚ್ಛತೆಗೆ ಸಾರ್ವಜನಿಕರ ಆರೋಗ್ಯ ರಕ್ಷಣೆ, ಉತ್ತಮ ಜೀವನಕ್ಕೆ ಮತ್ತು ಸರ್ಕಾರದ ಆದೇಶಗಳನ್ನು ಅನುಷ್ಠಾನಗೊಳಿಸಲು ಪುರಸಭೆ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.