ದಾವಣಗೆರೆ(ಫೆ.18): ಕೋವಿಡ್‌ ಲಸಿಕೆ ಈವರೆಗೆ ಹಾಕಿಸಿಕೊಳ್ಳದ ಆರೋಗ್ಯ ಕ್ಷೇತ್ರ ಹಾಗೂ ಮುಂಚೂಣಿ ಕ್ಷೇತ್ರದ ಫಲಾನುಭವಿಗಳು ತಕ್ಷಣ ಸಂಬಂಧಿಸಿದ ಲಸಿಕಾ ಕೇಂದ್ರಕ್ಕೆ ಹೋಗಿ, ಲಸಿಕೆ ಹಾಕಿಕೊಳ್ಳದಿದ್ದರೆ ಸರ್ಕಾರದಿಂದ ಯಾವುದೇ ಸೌಲಭ್ಯ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಎಚ್ಚರಿಸಿದ್ದಾರೆ.

ನಗರದ ಡಿಸಿ ಕಚೇರಿಯಲ್ಲಿ ಕೋವಿಡ್‌ ಲಸಿಕೆ ಕಾರ್ಯಕ್ರಮದ ಪ್ರಗತಿ ಕುರಿತಂತೆ ಬುಧವರ ಆರೋಗ್ಯ ಇಲಾಖೆ ಆಯಕ್ತ ಡಾ.ತ್ರಿಲೋಕ ಚಂದ್ರ ನಡೆಸಿದ ವೀಡಿಯೋ ಕಾನ್ಫರೆನ್ಸ್‌ ನಂತರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್‌ ಲಸಿಕೆ ಹಾಸಿಕೊಳ್ಳದವರಿಗೆ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯ ಲಸಿಕಾ ಕಾರ್ಯದ ಪ್ರಗತಿ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ಡಾ.ತ್ರಿಲೋಕಚಂದ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದವರಿಗೆ ನೀಡುವ ಕೋವಿಡ್‌ ಲಸಿಕೆಯಲ್ಲಿ ಜಿಲ್ಲೆಯ 18920 ಫಲಾನುಭವಿಗಳಿಗೆ ಗುರಿ ಹೊಂದಿದ್ದು, ಈವರೆಗೆ 9979 ಜನ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದು, ಶೇ.52.7 ಸಾಧನೆಯಾಗಿದೆ. ಎರಡನೇ ಹಂತದಲ್ಲಿ ಪೊಲೀಸ್‌, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ನಗರಾಭಿವೃದ್ಧಿ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಮಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ, ಕೋವಿಡ್‌ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿತ್ತು ಎಂದು ತಿಳಿಸಿದರು.

ಕೊರೊನಾ ಸೋಂಕು, ಸಾವಿನ ಪ್ರಮಾಣ ಏರಿಕೆ; ರಾಜಧಾನಿಯಲ್ಲಿ ಮತ್ತೆ ಆತಂಕ

ಪೊಲೀಸ್‌ ಇಲಾಖೆಯ 2076 ಜನರಿಗೆ ಕೋವಿಡ್‌ ಲಸಿಕೆ ನೀಡಿಕೆ ಗುರಿ ಪೈಕಿ ಕೇವಲ 629 ಜನ ಮಾತ್ರ ಲಸಿಕೆ ಪಡೆದಿದ್ದಾರೆ. ಕಂದಾಯ ಮತ್ತು ಆರ್‌ಡಿಪಿಆರ್‌ ಇಲಾಖೆಯ 3413 ಜನರ ಪೈಕಿ 408 ಜನ, ನಗರಾಭಿವೃದ್ಧಿ ಇಲಾಖೆಯ 1644 ಜನರ ಪೈಕಿ 350 ಜನ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗಾಗಿ, ಕೋವಿಡ್‌ ಲಸಿಕೆ ಕಾರ್ಯಕ್ರಮ ಜಿಲ್ಲೆಯಲ್ಲಿ ತೃಪ್ತಿಕರವಾಗಿಲ್ಲ. ಜಿಲ್ಲೆಯ ಕಳಪೆ ಸಾಧನೆಯನ್ನು ಆರೋಗ್ಯ ಇಲಾಖೆ ಆಯುಕ್ತರು ಗಂಭೀರವಾಗಿ ಪರಿಗಣಿಸಿದ್ದಾರೆ. ಇನ್ನಾದರೂ ಎಲ್ಲರೂ ಸ್ವಯಂ ಪ್ರೇರಣೆಯಿಂದ ಲಸಿಕೆ ಹಾಕಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳು ಖುದ್ದಾಗಿ ಈಗಾಗಲೇ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಯಾರಿಗೂ ಯಾವುದೇ ಅಡ್ಡಪರಿಣಾಮವಾಗಿಲ್ಲ. ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಎರಡೂ ಲಸಿಕೆಗಳೂ ಉತ್ತಮವಾಗಿವೆ. ಕೋವಿಡ್‌ ಲಸಿಕೆ ಕುರಂತೆ ಯಾರೂ ಸಹ ತಪ್ಪು ಕಲ್ಪನೆ ಹೊಂದಬಾರದು. ಪೂರ್ವಾಗ್ರಹ ಪೀಡಿತರಂತೆ ವರ್ತಿಸಬಾರದು. ಕೋವಿಡ್‌ ಲಸಿಕೆಗಾಗಿ ಗುರುತಿಸಲಾಗಿರುವ ಮೊದಲ ಹಾಗೂ 2ನೇ ಹಂತದ ಫಲಾನುಭವಿಗಳು ಈವರೆಗೆ ಲಸಿಕೆಯನ್ನುಪಡೆದಿದ್ದರೆ ತಕ್ಷಣ ಸಂಬಂಧಿಸಿದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಕೊರೋನಾ ಹೆಚ್ಚಳ: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗುತ್ತಾ?

ಕೋವಿಡ್‌ ಲಸಿಕೆ ಪಡೆಯದಿರುವ ಫಲಾನುಭವಿಗಳು ಒಂದು ವೇಳೆ ಕೋವಿಡ್‌ ಸೋಂಕಿಗೆ ತುತ್ತಾದರೆ ಅಂತಹವರು ತಮ್ಮ ಸ್ವಂತ ಖರ್ಚಿನಿಂದಲೇ ಚಿಕಿತ್ಸೆ ವೆಚ್ಚ ಭರಿಸಬೇಕಾಗುತ್ತದೆ. ಸರ್ಕಾರದಿಂದ ಯಾವುದೇ ಸೌಲಭ್ಯವನ್ನೂ ನೀಡುವುದಿಲ್ಲ ಎಂದು ಈಗಾಗಲೇ ಆರೋಗ್ಯ ಇಲಾಖೆ ಎಚ್ಚರಿಸಿದೆ. ಹೀಗಾಗಿ, ಇದುವರೆಗೂ ಕೋವಿಡ್‌ ಲಸಿಕೆ ಪಡೆಯದಿರುವವರು ತಕ್ಷಣವೇ ತಂಡೋಪತಂಡವಾಗಿ ಆಯಾ ಲಸಿಕಾ ಕೇಂದ್ರಕ್ಕೆ ತೆರಳಿ, ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಅಧಿಕಾರಿ, ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಆರೋಗ್ಯ ಕ್ಷೇತ್ರ ಕಾರ್ಯಕರ್ತರಾದ ಖಾಸಗಿ ಮತ್ತು ನೋಂದಾಯಿತ ಆರೋಗ್ಯ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರಾದ ಪೊಲೀಸ್‌, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ನಗರಾಭಿವೃದ್ಧಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಯಾವುದೇ ಎಸ್ಸೆಮ್ಮೆಸ್‌ಗೆ ಕಾಯದೇ, ಯಾವುದಾದರೂ ಗುರುತಿನ ಪತ್ರ ತೆಗೆದುಕೊಂಡು, ಹೋಗಿ ಲಸಿಕೆ ಪಡೆಯಬಬುದು. ದಾವಣಗೆರೆ ಜಿಲ್ಲಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ದಾವಣಗೆರೆ, ಹರಿಹರ, ಜಗಳೂರು, ಹೊನ್ನಾಳಿ ತಾಲೂಕು ಆಸ್ಪತ್ರೆಗಳನ್ನು ಕೋವಿಡ್‌-19 ಲಸಿಕಾಕರಣಕ್ಕಾಗಿ ನಿಗದಿಪಡಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.