ಬಿಎಸ್‌ವೈ ಮನೆ ಗೇಟ್ ಕಾಯಲು ಜಮೀರ್‌ಗೆ ಆಹ್ವಾನ
ಮಾಜಿ ಸಚಿವ ಜಮೀರ್ ಅಹಮ್ಮದ್ ಅವರನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮನೆ ಕಾಯಲು ಕರೆಯಲಾಗಿದೆ. ದಾವಣಗೆರೆ ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಮುಖಂಡ ಎಸ್.ಅಬ್ದುಲ್ ಮಜೀದ್ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆ ಗೇಟ್ ಕಾಯುವ ಕಾವಲುಗಾರನಾಗುವೆ ಎಂದಿದ್ದ ಮಾಜಿ ಸಚಿವ ಜಮೀರ್ ಅಹಮ್ಮದ್ ಈಗ ಗೇಟ್ ಕಾಯೋ ಕೆಲಸ ಆರಂಭಿಸಲಿ ಎಂದಿದ್ದಾರೆ.
ದಾವಣಗೆರೆ(ಜು.30): ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆ ಗೇಟ್ ಕಾಯುವ ಕಾವಲುಗಾರನಾಗುವೆ ಎಂದಿದ್ದ ಮಾಜಿ ಸಚಿವ ಜಮೀರ್ ಅಹಮ್ಮದ್ ಈಗ ಸಿಎಂ ನಿವಾಸದ ಗೇಟ್ ಕಾಯುವ ಕೆಲಸ ಆರಂಭಿಸಲಿ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಮುಖಂಡ, ಜಿಲ್ಪಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎಸ್.ಅಬ್ದುಲ್ ಮಜೀದ್ ತಾಕೀತು ಮಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾದ ಹಿನ್ನೆಲೆ ಜಮೀರ್ ಸಿಎಂ ಮನೆ ಗೇಟ್ ಕಾಯುವ ಕಾವಲುಗಾರನ ಕೆಲಸ ಶೀಘ್ರವೇ ಮಾಡಲಿ ಎಂದರು. ಐಎಂಎ ಹಗರಣ ನಡೆದಾಗ ಮುಸ್ಲಿಮರ ಪರವಾಗಿ ಜಮೀರ್ ಅಹಮ್ಮದ್ ಚಕಾರ ಎತ್ತಲಿಲ್ಲ ಎಂದರು.
ಮುಸ್ಲಿಂ ಧರ್ಮೀಯರೇ ಮನ್ಸೂರ್‌ಗೆ ಸೇರಿದ ಐಎಂಎ ಸಂಸ್ಥೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಣ ತೊಡಗಿಸಿ, ಕಳೆದುಕೊಂಡು ಬೀದಿಗೆ ಬಿದ್ದಾಗಲೂ ಇದೇ ಜಮೀರ್ ಸಾಂತ್ವನದ ಮಾತುಗಳನ್ನೂ ಆಡಲಿಲ್ಲ. ಇಂತಹವರು ಸಮಾಜದ ಮುಖಂಡರೆಂಬುದೇ ಬೇಸರ ಮೂಡಿಸುತ್ತದೆ ಎಂದರು.
ಬಿಎಸ್‌ವೈ ಅಲ್ಪಸಂಖ್ಯಾತರ ಉನ್ನತಿಗಾಗಿ ಸಾಕಷ್ಟು ಕ್ರಮ ಕೈಗೊಂಡಿದ್ದರೂ ಇದಕ್ಕೆ ಯಾವುದೇ ರೀತಿ ಪ್ರಚಾರ ಪಡೆದವರಲ್ಲ. ಮುಮ್ತಾಜ್ ಅಲಿ ಖಾನ್‌ರನ್ನು ವಕ್ಫ್ ಸಚಿವರನ್ನಾಗಿಸಿದ್ದು, ಹಜ್ ಹೌಸ್‌ಗೆ ಬಜೆಟ್‌ನಲ್ಲಿ 40 ಕೋಟಿ ರು.ಗಳನ್ನು ಹಿಂದೆ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಬಿಡುಗಡೆ ಮಾಡಿದ್ದರು. ಖಬರಸ್ಥಾನ ಕಾಂಪೌಂಡ್ ನಿರ್ಮಾಣಕ್ಕೆ 5 ಕೋಟಿ, ಪೇಶ್ಮಾ ಮೌಜಾನ ಗುರುಗಳಿಗೆ ಸಂಬಂಳಕ್ಕೋಸ್ಕರ ಬಜೆಟ್‌ನಲ್ಲಿ 5 ಕೋಟಿ ಬಿಡುಗಡೆ ಮಾಡಿದ್ದರು ಎಂದು ವಿವರಿಸಿದರು.
ಬಿಎಸ್‌ವೈ ವಾಚ್‌ಮೆನ್ ಆಗುವೆ: ಜಮೀರ್ ವೀಡಿಯೋ ಮತ್ತೆ ವೈರಲ್
ಶಿಕಾರಿಪುರದಲ್ಲಿ ಹೈಟೆಕ್ ಮದರಸಾ ನಿರ್ಮಿಸಿದ್ದು, ಅಲ್ಪಸಂಖ್ಯಾತರ ಏಳಿಗೆಗಾಗಿ 167 ಕೋಟಿ ಅನುದಾನವನ್ನು 251 ಕೋಟಿವರೆಗೂ ಮಂಜೂರು ಮಾಡಿದ್ದರು. ಹಜ್ ಯಾತ್ರಿಗಳಿಗೆ ಮೊದಲ ಬಾರಿಗೆ ಮಂಗಳೂರಿನಿಂದ ನೇರವಾಗಿ ಜಿದ್ದಾಗೆ ವಿಮಾನ ಸಂಚರಿಸುವಂತೆ ಕ್ರಮ ಕೈಗೊಂಡಿದ್ದರು. ಕಲಬುರಗಿಯಿಂದ ನೇರವಾಗಿ ಜಿದ್ದಾಗಿ ವಿಮಾನ ಸಂಚರಿಸಲು ಅನುವು ಮಾಡಿಕೊಟ್ಟಿದ್ದರು ಎಂದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಕ್ಫ್ ಆಸ್ತಿಗಳನ್ನು ರಕ್ಷಿಸಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಿ, ಸರ್ವೇ ಸಹ ಮಾಡಿಸಿದ್ದು ಯಡಿಯೂರಪ್ಪ. ಹೀಗೆ ಅಲ್ಪಸಂಖ್ಯಾತರಿಗಾಗಿ ಸಾಕಷ್ಟುಸ್ಪಂದಿಸಿದ ಯಡಿಯೂರಪ್ಪಗೆ ಸಮಸ್ತ ಮುಸ್ಲಿಮರ ಪರವಾಗಿ ಅಭಿನಂದಿಸುತ್ತೇವೆ ಎಂದು ಹೇಳಿದರು. ಮುಖಂಡ ಉಮೇಶ ಪಾಟೀಲ್, ತನ್ವೀರ್ ಅಹಮ್ಮದ್, ಸೈಯದ್ ಗೌಸ್, ಖಲೀಮುಲ್ಲಾ, ಮಹಮ್ಮದ್ ಜಿಕ್ರಿಯಾ, ಜಮೀಲ್ ನೂರ್ ಇಇದ್ದರು.