ಬೆಂಗಳೂರು[ಜು.27]: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಒಂದು ದಿನ ಅವರ ಮನೆ ಮುಂದೆ ವಾಚ್‌ಮೆನ್ ಡ್ರೆಸ್ ಹಾಕಿಕೊಂಡು ಗೇಟು ಕಾಯುತ್ತೇನೆ ಎಂದಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ವಾಚ್ ಮೆನ್ ಆಗುವಂತೆ ನೆಟ್ಟಿಗರು ಜಮೀರ್ ಅಹ್ಮದ್ ಕಾಲೆಳೆದಿದ್ದಾರೆ.

ಮೇ 13ರಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಜಮೀರ್ ಅಹ್ಮದ್ ಯಡಿಯೂರಪ್ಪ ಯಾವುದೇ ಕಾರಣಕ್ಕೂ ಸಿಎಂ ಆಗುವುದಿಲ್ಲ. ಒಂದು ವೇಳೆ ಯಡಿಯೂರಪ್ಪ ಸಿಎಂ ಆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಜತೆಗೆ ಅವರ ಮನೆ ಎದುರು ಒಂದು ದಿನ ವಾಚ್‌ಮೆನ್ ಡ್ರೆಸ್ ಹಾಕಿಕೊಂಡು ಗೇಟು ಕಾಯುತ್ತೇನೆ ಎಂದು ಶಪಥ ಹಾಕಿದ್ದರು. ಸಮ್ಮಿಶ್ರ ಸರ್ಕಾರ ಪತನಗೊಂಡ ತಕ್ಷಣವೇ ಕೆಲವರು ಜಮೀರ್ ಅವರು ಸಿದ್ಧತೆ ಮಾಡಿಕೊಳ್ಳಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆದಿದ್ದರು.

ಶುಕ್ರವಾರ ಸಂಜೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜಮೀರ್ ಅಹ್ಮದ್ ಅವರ ವಾಚ್ ಮೆನ್ ಹೇಳಿಕೆ ಭಾರಿ ವೈರಲ್ ಆಗಿದ್ದು, ನೀವೇ ಹೇಳಿದಂತೆ ಯಡಿಯೂರಪ್ಪ ಅವರ ಮನೆ ಮುಂದೆ ವಾಚ್‌ಮೆನ್ ಡ್ರೆಸ್ ಹಾಕಿಕೊಂಡು ಗೇಟು ಕಾಯಬೇಕು ಎಂದು ವ್ಯಂಗ್ಯವಾಡಿದ್ದಾರೆ.