Asianet Suvarna News Asianet Suvarna News

'ಸರ್ವರ ಶ್ರೇಯೋಭಿವೃದ್ಧಿ ಆರ್‌ಎಸ್‌ಎಸ್‌ ಧ್ಯೇಯ'

*   ವಿಜಯದಶಮಿ ಪ್ರಯುಕ್ತ ಹುಬ್ಬಳ್ಳಿ ನಗರದಲ್ಲಿ ನಡೆದ ಗಣವೇಷಧಾರಿಗಳ ಪಥಸಂಚಲನದ 
*   ಆರ್‌ಎಸ್‌ಎಸ್‌ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿಕೆ
*   ರಾಷ್ಟ್ರದ ಅಸ್ಮಿತೆಗಾಗಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ
 

Dattatreya Hosabale Talks Over RSS grg
Author
Bengaluru, First Published Oct 16, 2021, 9:35 AM IST

ಹುಬ್ಬಳ್ಳಿ(ಅ.16): ಅಸ್ಪೃಶ್ಯರು(Untouchables), ಹಿಂದುಳಿದವರನ್ನು ಒಳಗೊಂಡಂತೆ ಎಲ್ಲರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಮುನ್ನಡೆದಾಗ ಮಾತ್ರ ಭಾರತದ(India) ಏಳಿಗೆ ಸಾಧ್ಯ ಎಂದ ಆರ್‌ಎಸ್‌ಎಸ್‌(RSS) ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ(Dattatreya Hosabale), ಸಂಘವು ಇದನ್ನೆ ಸಾಧಿಸುವತ್ತ ಸಮಾಜವನ್ನು ಪ್ರೇರೇಪಿಸುತ್ತದೆ ಎಂದರು.

ವಿಜಯದಶಮಿ(Vijayadashami) ಪ್ರಯುಕ್ತ ನಗರದಲ್ಲಿ ನಡೆದ ಗಣವೇಷಧಾರಿಗಳ ಪಥಸಂಚಲನದ ಬಳಿಕ ಬಿವಿಬಿ ಕಾಲೇಜಿನ ಆವರಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು. ಬಸವಣ್ಣನವರ ವಚನ, ಕನಕದಾಸರ ದಾಸಪದ, ಸರ್ವಜ್ಞರ ತ್ರಿಪದಿಗಳು, ಕುವೆಂಪು, ಗೋಪಾಲಕೃಷ್ಣ ಅಡಿಗರು ಹೇಳಿದ್ದನ್ನು ಕಂಠಪಾಠ ಮಾಡಿದ್ದೇವೆ. ಆದರೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿಲ್ಲ. 21ನೇ ಶತಮಾನದ ಈ ಹೊತ್ತಲ್ಲೂ ದಲಿತರು ದೇವಸ್ಥಾನ ಪ್ರವೇಶಿಸಬಾರದು ಎನ್ನುವಂತಹ ಮನಸ್ಥಿತಿ ಇರುವಂತದ್ದು ಸಲ್ಲದು. ರಾಷ್ಟ್ರಚೇತನವನ್ನು ಮೇಲೆತ್ತಬೇಕು ಎನ್ನುವುದಾದರೆ ಇಂತ ಮನಸ್ಥಿತಿಯಿಂದ ಹೊರಬರಬೇಕು ಎಂದರು.

ಈಚೆಗೆ ಆರ್‌ಎಸ್‌ಎಸ್‌ ಕುರಿತಂತೆ ಚರ್ಚೆ ಹೆಚ್ಚಾಗಿದೆ. ಸಂಘವು ಕಾರ್ಯಕರ್ತರು, ಸಮಾಜದ ಸಹಯೋಗದೊಂದಿಗೆ ವಿಭಿನ್ನ ಆಯಾಮದಲ್ಲಿ ಕೆಲಸ ಮಾಡುತ್ತದೆ. ಸಮಾಜ ಸಂಕಟಕ್ಕೆ ಒಳಗಾದಾಗ ನೆರವಿಗೆ ನಿಲ್ಲುತ್ತದೆ. ಆದರೆ ಎಲ್ಲಿಯೂ ತಾನು ಮಾಡಿದ್ದು ಎಂದು ಹೇಳಿಕೊಳ್ಳುವುದಿಲ್ಲ. ಯಾವುದೇ ಪ್ರಶಸ್ತಿಗಾಗಿ, ಹೆಸರಿಗಾಗಿ ಸೇವೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೊಮ್ಮಾಯಿ ರಾಜೀನಾಮೆಗೆ ಸಿದ್ದು ಒತ್ತಾಯ: ನಿಮ್ಮಿಂದ ಕಲಿಯುವ ಅಗತ್ಯ ಇಲ್ಲವೆಂದ ಸಿಎಂ!

ಆರ್‌ಎಸ್‌ಎಸ್‌ ದೇಶದ ಕೇಂದ್ರ ಬಿಂದುವಿನ ಸ್ಥಾನದಲ್ಲಿದೆ. ಸಂಘದ ವಿಚಾರದ ಪ್ರಭಾವ ಪ್ರತಿಯೊಂದು ವಿಚಾರದ ಮೇಲೆ ಉಂಟಾಗುತ್ತಿದೆ. ಸಂಘದ ಕಾರ್ಯ ಸಮಾಜದ ಕಾರ್ಯವಾಗಿದೆ. ಇದು ಯಾವುದೇ ಪಂಥ, ಸಂಪ್ರದಾಯ, ಜಾತಿಯ, ಪಕ್ಷದ ಕಾರ್ಯವಲ್ಲ. ಯಾವುದೇ ಮುಚ್ಚು ಮರೆ ಇಲ್ಲದೆ ಮುಕ್ತ ವಾತಾವರಣದಲ್ಲಿ ಸಂಘದ ಚಟುವಟಿಕೆ ನಡೆಯುತ್ತವೆ ಎಂದು ಹೇಳಿದರು.

ಭಾರತೀಯ ಭಾವ ಎಲ್ಲರಲ್ಲಿಯೂ ಮೂಡುತ್ತಿದೆ. ಅದು ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಅಷ್ಘಾನಿಸ್ತಾನ(Afghanistan), ಬಾಂಗ್ಲಾದೇಶ(Bangladesh) ಇಂದಿನ ಘಟನೆಗಳು ನಮಗೆ ಎಚ್ಚರಿಕೆಯ ಗಂಟೆಯಾಗಿವೆ. ಹೀಗಾಗಿ ಆರ್‌ಎಸ್‌ಎಸ್‌ ಸಂಘಟನೆಯ ಶಕ್ತಿಯನ್ನು ಒತ್ತಿ ಹೇಳುತ್ತದೆ. ಆದರೆ, ಇಂದು ಸಮಾಜದ ಒಳಗಡೆಯೆ ಕೆಲವರು ಒಡೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ, ವಿಶ್ವವಿದ್ಯಾಲಯದಲ್ಲಿ(University) ಯುವಕರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಬುದ್ಧಿಜೀವಿಗಳು ಈ ದೇಶಕ್ಕೆ ಇತಿಹಾಸವಿಲ್ಲ ಎನ್ನುತ್ತಾರೆ. ಇಂತಹ ಮನಸ್ಥಿತಿ ನಕ್ಸಲೀಯರಿಗಿಂತ(Naxal) ಕಡಿಮೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು RSS ಹಿನ್ನೆಲೆ ಇದ್ದರೆ ತಪ್ಪೇನು: ಜಗದೀಶ್‌ ಶೆಟ್ಟರ್‌

ಜೆ.ಕೆ. ವಿದ್ಯಾ ಸಮೂಹದ ಚೇರ್‌ಮನ್‌ ಜಗದೀಶ ಕಲ್ಯಾಣ ಶೆಟ್ಟರ್‌ ಮಾತನಾಡಿ, ಆರ್‌ಎಸ್‌ಎಸ್‌ ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿ ಅತಿದೊಡ್ಡ ಸ್ವಯಂ ಸೇವಾ ಸಂಘ. ಇದು 2025ಕ್ಕೆ ಶತಮಾನ ಪೂರೈಸಲಿದೆ. ರಾಷ್ಟ್ರ ನಿರ್ಮಾಣ, ನಾಗರಿಕ ಮೌಲ್ಯವನ್ನು ಕಾಪಾಡುತ್ತಿರುವ ಸಂಘವು ಆರೋಗ್ಯ, ದೇಶದ ರಕ್ಷಣೆ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಸೈನಿಕರು(Soldiers) ದೇಶದ ಗಡಿ ಕಾದರೆ, ಆರ್‌ಎಸ್‌ಎಸ್‌ ದೇಶದ ಒಳಗಿನ ಸೌಹಾರ್ದ ಕಾಯುವ ಕೆಲಸ ಮಾಡುತ್ತಿದೆ ಎಂದರು.

ಮೆಕಾಲೆ ಶಿಕ್ಷಣ(Education) ಪದ್ಧತಿ ಹೋಗಲಾಡಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(National Education Policy) ಅನುವಾಗಲಿದೆ. ಈ ವರೆಗಿನ ಶಿಕ್ಷಣ ಕೌಶಲ್ಯಗಳನ್ನು ಕಲಿಸಲು ವಿಫಲವಾಗಿದೆ. ಆದರೆ ಈ ಕೊರತೆಯನ್ನು ಹೊಸ ಶಿಕ್ಷಣ ನೀತಿ ನೀಗಿಸಲಿದೆ. ಜತೆಗೆ ದೇಶಭಕ್ತಿ, ಜನಪರ ಭಾವನೆಗಳನ್ನು ಬೆಳೆಸುವ ಅಂಶಗಳನ್ನು ಒಳಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi), ಸಚಿವ ಶಂಕರಪಾಟೀಲ ಮುನೇನಕೊಪ್ಪ(Shankar Patil Munenkoppa), ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagadish Shettar), ಶಾಸಕ ಅರವಿಂದ ಬೆಲ್ಲದ(Arvind Bellad), ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಶಾಸಕ ಅಶೋಕ ಕಾಟವೆ, ದತ್ತಾತ್ರೇಯ ಕುಲಕರ್ಣಿ, ಲಿಂಗರಾಜ ಪಾಟೀಲ, ಮಾಜಿ ಮೇಯರ್‌ ಡಿ.ಕೆ. ಚವ್ಹಾಣ, ಗೋವಿಂದಪ್ಪ ಗೌಡ ಇದ್ದರು.
ರಾಷ್ಟ್ರದ ಅಸ್ಮಿತೆಗಾಗಿ ಅಯೋಧ್ಯೆಯಲ್ಲಿ(Ayodhya) ಶ್ರೀರಾಮಮಂದಿರ(RamMandir) ನಿರ್ಮಿಸಲಾಗುತ್ತಿದೆ. ಅದರ ಜತೆಗೆ ನಮ್ಮ ಮನಸ್ಸಿನಲ್ಲಿ ಶ್ರೀರಾಮನನ್ನು(Sri Ram) ಪ್ರತಿಷ್ಠಾಪಿಸಿಕೊಳ್ಳಬೇಕಿದೆ ಎಂದು ಆರ್‌ಎಸ್‌ಎಸ್‌ ಸರ ಕಾರ್ಯವಾಹ ದತ್ತಾತ್ರೆಯ ಹೊಸಬಾಳೆ ತಿಳಿಸಿದ್ದಾರೆ.

ಪಥಸಂಚಲನ...

ವಿಜಯದಶಮಿ ಪ್ರಯುಕ್ತ ಹುಬ್ಬಳ್ಳಿಯಲ್ಲಿ(Hubballi) ರಾಷ್ಟ್ರೀಯ ಸ್ವಯಂ ಸೇವಾ ಸಂಘ ಪಥಸಂಚಲನ ನೆರವೇರಿಸಿತು. ನಗರದ ಚೇತನಾ ಕಾಲೇಜು ಮೈದಾನದಿಂದ ಪ್ರಾರಂಭವಾದ ಪಥಸಂಚಲನದಲ್ಲಿ ಸಾವಿರಾರು ಸಂಖ್ಯೆಯ ಗಣವೇಶಧಾರಿಗಳು ಶಿಸ್ತಿನಿಂದ ಪಥಸಂಚಲನ ಆರಂಭಿಸಿದರು. ಸ್ವಯಂ ಸೇವಕರ ಸ್ವಾಗತಕ್ಕಾಗಿ ಮನೆಯೆದುರು ರಂಗೋಲಿ ಇಡಲಾಗಿತ್ತು. ಟೆಂಡರ್‌ಶ್ಯೂರ್‌ ಮಾರ್ಗದ ಮೂಲಕ ಬಿವಿಬಿ ಮಹಾವಿದ್ಯಾಲಯ ಪ್ರವೇಶಿಸಿತು. ಪುಟ್ಟಮಕ್ಕಳು ಗಣವೇಷಧಾರಿಗಳ ಧಿರಿಸು ತೊಟ್ಟು ಎಲ್ಲರ ಗಮನಸೆಳೆದರು.
 

Follow Us:
Download App:
  • android
  • ios