* ನೈತಿಕ ಪೊಲೀಸ್‌ಗಿರಿ ಸಮರ್ಥಿಸಿದ ಸಿಎಂ ಬೊಮ್ಮಾಯಿ* ರಾಜೀನಾಮೆ ನೀಡಿ ಎಂದ ಸಿದ್ದರಾಮಯ್ಯ* ನಿಮ್ಮಿಂದ ನಾನು ಕಲಿಯಬೇಕಿಲ್ಲ, ಬೊಮ್ಮಾಯಿ ತಿರುಗೇಟು

ಬೆಂಗಳೂರು(ಅ.14): ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ನೈತಿಕ ಪೊಲೀಸ್‌ಗಿರಿ(Moral Policing) ಬಗ್ಗೆ ನೀಡಿರುವ ಹೇಳಿಕೆ ಸದ್ಯ ಭಾರೀ ಸದ್ದು ಮಾಡುತ್ತಿದೆ. ಒಂದೆಡೆ ಅವರ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಟ್ವಿಟರ್‌ನಲ್ಲಿ(Twitter) ಅವರು ರಾಜೀನಾಮೆ ನೀಡಬೇಕೆಂಬ ಧ್ವನಿ ಎದ್ದಿದೆ. ಹೀಗಿರುವಾಗ ಇತ್ತ ವಿಪಕ್ಷ ನಾಯಕರೂ ಅವರ ಈ ಹೇಳಿಕೆಗೆ ಕಿಡಿ ಕಾರಲಾರಂಭಿಸಿದ್ದಾರೆ. ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ(Siddaramaiah) ಕೂಡಾ ಬೊಮ್ಮಾಯಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯ ಟ್ವೀಟ್‌ಗೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಹೌದು ಸಿಎಂ ಬೊಮ್ಮಾಯಿ ನೈತಿಕ ಪೊಲೀಸ್‌ಗಿರಿ ಪರ ನೀಡಿರುವ ಹೇಳಿಕೆಯನ್ನು ಖಂಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ. ಬೊಮ್ಮಾಯಿ ವಿರುದ್ಧ ಕಿಡಿ ಕಾರುತ್ತಾ ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಪುಂಡರು ಕಾನೂನನ್ನು ಕೈಗೆತ್ತಿಕೊಳ್ಳುವ ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸುವ ಮೂಲಕ ಕಾನೂನು ಪಾಲನೆ ನಿಮ್ಮಿಂದ ಸಾಧ್ಯವಿಲ್ಲ ಎಂದು ನಿಮ್ಮ ಅಸಾಮರ್ಥ್ಯವನ್ನು ತೋಡಿಕೊಂಡಿದ್ದೀರಿ. ದಯವಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ರಾಜ್ಯವನ್ನು ಜಂಗಲ್ ರಾಜ್ಯ ಮಾಡಬೇಡಿ ಎಂದಿದ್ದಾರೆ. 

Scroll to load tweet…

ಇದೇ ವೇಳೆ ಅನೈತಿಕ ಪೊಲೀಸ್‌ಗಿರಿಗೆ ಬಲಿಯಾಗುತ್ತಿರುವುದು ಅಸಹಾಯಕ, ಅಮಾಯಕ ಹೆಣ್ಣುಮಕ್ಕಳು. ಸ್ತ್ರಿಪೀಡಕರ ಹೆಡೆಮುರಿಕಟ್ಟಿ ಜೈಲಿಗೆ ತಳ್ಳಬೇಕಾದ ನೀವು ಅದನ್ನು ಮಾಡದೆ ದುಷ್ಕರ್ಮಿಗಳ ರಕ್ಷಣೆಗೆ ನಿಂತಿದ್ದೀರಿ. ಕುರ್ಚಿಯ ರಕ್ಷಣೆಗಾಗಿ ಸಂಘ ಪರಿವಾರದ ಓಲೈಕೆ ನಿಮಗೆ ಅನಿವಾರ್ಯವಾಗಿರಬಹುದು. ಇದಕ್ಕಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದೇ? ಎಂದೂ ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲದೇ ಮುಖ್ಯಮಂತ್ರಿ ಸ್ಥಾನದಲ್ಲಿದ್ದು, ನೈತಿಕ ಪೊಲೀಸ್‌ಗಿರಿ ಬೆಂಬಲಿಸಿದ್ದಕ್ಕೆ ಸಿದ್ದರಾಮಯ್ಯ ಸಂವಿಧಾನದ ಪಾಠವನ್ನೂ ಮಾಡಿದ್ದಾರೆ.

Scroll to load tweet…

ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯರ ಈ ಟ್ವೀಟ್‌ಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 'ನೀವು ಸಿಎಂ ಆಗಿದ್ದ ಸಂದರ್ಭದಲ್ಲಿ ಟಿಪ್ಪು ತನ್ನ ಕಾಲದಲ್ಲಿ ಮಾಡಿದಂತೆ ನೀವು ಹಿಂದೂ ಕಾರ್ಯಕರ್ತರ ಹತ್ಯೆ ನಡೆಸಿ ಹಿಂದೂ-ವಿರೋಧಿಗಳ ಪ್ರತಿನಿಧಿಯಂತೆ ವರ್ತಿಸಿದಿರಿ. ಹೀಗಾಗಿ ಅಧಿಕಾರ ಹೇಗೆ ನಡೆಸಬೇಕು ಅಥವಾ ಪೊಲೀಸ್‌ಗಿರಿ ಬಗೆಗಿನ ಪಾಠ ನಾನು ನಿಮ್ಮಿಂದ ಕಲಿಯಬೇಕಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಶಕ್ತವಾದ ಪೊಲೀಸ್ ಪಡೆ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ.

ಬೊಮ್ಮಾಯಿ ಹೇಳಿದ್ದೇನು?

ಅ.13ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ದಾಳಿಯನ್ನು ಸಮರ್ಥಿಸಿಕೊಂಡಿದ್ದರು. "ನೈತಿಕ ಪೊಲೀಸ್‌ಗಿರಿ, ಇದು ಬಹಳ ಸೂಕ್ಷ್ಮವಾಗಿರುವ ವಿಚಾರ. ಸಮಾಜದಲ್ಲಿ ನಾವೆಲ್ಲರೂ ಜವಾಬ್ದಾರಿ ಹೊಂದಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೆ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಮತ್ತು ರಿಯಾಕ್ಷನ್ ಆಗುತ್ತದೆ" ಎಂದಿದ್ದರು.