ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿಪ್ರಕಟಿಸಿದೆ. ಇದರೊಂದಿಗೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಚುನಾವಣಾ ಕಾರ್ಯಚಟುವಟಿಕೆಗಳು ಗರಿಗೆದರಿವೆ.

ಮಂಡ್ಯ ಮಂಜುನಾಥ

ಮಂಡ್ಯ : ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿಪ್ರಕಟಿಸಿದೆ. ಇದರೊಂದಿಗೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಚುನಾವಣಾ ಕಾರ್ಯಚಟುವಟಿಕೆಗಳು ಗರಿಗೆದರಿವೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆಗೊಳಿಸಿವೆ. ಬಿಜೆಪಿ ಇದುವರೆಗೆ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿಲ್ಲ. ಏಪ್ರಿಲ್‌ ಮೊದಲ ವಾರದಲ್ಲೇ ಒಂದೇ ಬಾರಿಗೆ ಅಭ್ಯರ್ಥಿಗಳ ಪಟ್ಟಿಪ್ರಕಟ ಮಾಡಲು ನಿರ್ಧರಿಸಿದೆ.

ಜೆಡಿಎಸ್‌ ಅಭ್ಯರ್ಥಿಗಳು ಅಂತಿಮ:

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‌ ಮೊದಲ ಪಟ್ಟಿಯಲ್ಲೇ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಮಂಡ್ಯ ಕ್ಷೇತ್ರದಿಂದ ಎಂ.ಶ್ರೀನಿವಾಸ್‌, ಮದ್ದೂರು ಕ್ಷೇತ್ರದಿಂದ ಡಿ.ಸಿ.ತಮ್ಮಣ್ಣ, ಮೇಲುಕೋಟೆ ಕ್ಷೇತ್ರದಿಂದ ಸಿ.ಎಸ್‌.ಪುಟ್ಟರಾಜು, ಶ್ರೀರಂಗಪಟ್ಟಣ ಕ್ಷೇತ್ರದಿಂದ ರವೀಂದ್ರ ಶ್ರೀಕಂಠಯ್ಯ, ಕೆ.ಆರ್‌.ಪೇಟೆ ಕ್ಷೇತ್ರದಿಂದ ಎಚ್‌.ಟಿ.ಮಂಜು, ಮಳವಳ್ಳಿ ಕ್ಷೇತ್ರದಿಂದ ಡಾ.ಕೆ.ಅನ್ನದಾನಿ ಅವರನ್ನು ಕಣಕ್ಕಿಳಿಸಿದೆ.

ರಾಹುಲ್ ಗಾಂಧಿ ಅನರ್ಹತೆಯಿಂದ ತೆರವಾಗಿರುವ ವಯನಾಡು ಉಪ ಚುನಾವಣೆ ಕುತೂಹಲಕ್ಕೆ ಆಯೋಗ ಉತ್ತರ!

ಕೈ ಪಾಳಯದಲ್ಲಿ ಮೂರು ಅಭ್ಯರ್ಥಿಗಳು ಫೈನಲ್‌:

ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ನಾಗಮಂಗಲ ಕ್ಷೇತ್ರದಿಂದ ಎನ್‌.ಚಲುವರಾಯಸ್ವಾಮಿ, ಮಳವಳ್ಳಿ ಕ್ಷೇತ್ರದಿಂದ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದಿಂದ ರಮೇಶ್‌ ಬಂಡಿಸಿದ್ದೇಗೌಡ ಸೇರಿದಂತೆ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನಷ್ಟೇ ಅಂತಿಮಗೊಳಿಸಿದೆ. ಇನ್ನೂ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್‌ ಮಾಡಿಲ್ಲ. ಈ ಪೈಕಿ ಮೇಲುಕೋಟೆ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಘೋಷಿಸಿದೆ.

ಮಂಡ್ಯ, ಮದ್ದೂರು ಮತ್ತು ಕೆ.ಆರ್‌.ಪೇಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸದಿರುವುದರಿಂದ ಟಿಕೆಟ್‌ ಆಕಾಂಕ್ಷಿಗಳಲ್ಲಿ ತಳಮಳ ಹೆಚ್ಚಿದೆ. ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಆಕಾಂಕ್ಷಿಗಳು ತಮ್ಮ ಬೆಂಬಲಿಗ ನಾಯಕರಿಗೆ ದುಂಬಾಲು ಬಿದ್ದು ಟಿಕೆಟ್‌ಗಾಗಿ ತೀವ್ರ ಲಾಭಿ ನಡೆಸುತ್ತಿದ್ದಾರೆ.

ಮೇ 10 ರಂದು ಮಹಾ ಕದನ: ಕೇಸರಿ ಪಾಳಯ ಸಂಪೂರ್ಣ ಸಿದ್ಧ ಎಂದ ಸಿಎಂ

ಸಂಭಾವ್ಯರೇ ಫೈನಲ್‌ ಆಗುವರೇ?

ಬಿಜೆಪಿಯಿಂದ ಜಿಲ್ಲೆಯೊಳಗೆ ಅಖಾಡ ಪ್ರವೇಶಿಸುವ ಹುರಿಯಾಳುಗಳು ಯಾರು ಎನ್ನುವುದು ಖಚಿತವಾಗಿಲ್ಲ. ಇದರ ನಡುವೆಯೂ ಮಂಡ್ಯ ಕ್ಷೇತ್ರದಿಂದ ಅಶೋಕ್‌ ಜಯರಾಂ, ಮೇಲುಕೋಟೆ ಕ್ಷೇತ್ರದಿಂದ ಡಾ.ಎನ್‌.ಇಂದ್ರೇಶ್‌, ಮದ್ದೂರು ಕ್ಷೇತ್ರದಿಂದ ಎಸ್‌.ಪಿ.ಸ್ವಾಮಿ, ಕೆ.ಆರ್‌.ಪೇಟೆ ಕ್ಷೇತ್ರದಿಂದ ಕೆ.ಸಿ.ನಾರಾಯಣಗೌಡ, ಮಳವಳ್ಳಿ ಕ್ಷೇತ್ರದಿಂದ ಮುನಿರಾಜು, ಶ್ರೀರಂಗಪಟ್ಟಣ ಕ್ಷೇತ್ರದಿಂದ ಎಸ್‌.ಸಚ್ಚಿದಾನಂದ, ನಾಗಮಂಗಲ ಕ್ಷೇತ್ರದಿಂದ ಎಲ್‌.ಆರ್‌.ಶಿವರಾಮೇಗೌಡ ಮತ್ತು ಫೈಟರ್‌ ರವಿ ತಮಗೇ ಟಿಕೆಟ್‌ ಸಿಗುತ್ತದೆ ಎಂಬ ಆಶಾಭಾವನೆಯೊಂದಿಗೆ ಚುನಾವಣಾ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಚುನಾವಣೆ ವೇಳಾಪಟ್ಟಿಪ್ರಕಟವಾಗಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಫೈನಲ್‌ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿವೆ. ಪಕ್ಷಗಳಿಂದ ಸ್ಟಾರ್‌ ಪ್ರಚಾರಕರನ್ನು ಗುರುತಿಸುವ ಕಾರ್ಯವೂ ಜೊತೆಯಲ್ಲೇ ಆರಂಭಗೊಂಡಿದೆ.

ಅಭ್ಯರ್ಥಿಗಳಿಂದ ಪ್ರಚಾರಕ್ಕೆ ಚುರುಕು

ಈಗಾಗಲೇ ಟಿಕೆಟ್‌ ಘೋಷಣೆಯಾಗಿರುವ ಕ್ಷೇತ್ರಗಳ ಅಭ್ಯರ್ಥಿಗಳು ಪ್ರಚಾರಕ್ಕೆ ಇನ್ನಷ್ಟುಚುರುಕು ನೀಡುತ್ತಿದ್ದಾರೆ. ಅದರಲ್ಲೂ ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳು ಪ್ರಚಾರದಲ್ಲಿ ಬಿರುಸಿನಿಂದ ತೊಡಗಿಸಿಕೊಂಡಿದ್ದಾರೆ. ಪಕ್ಷದ ಬೆಂಬಲಿಗರು, ಮುಖಂಡರು, ಕಾರ್ಯಕರ್ತರೊಂದಿಗೆ ಪ್ರತಿ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಮುನಿಸಿಕೊಂಡಿದ್ದವರ ಮನವೊಲಿಸಿ ಜೊತೆಗೂಡಿಸಿಕೊಳ್ಳುವ, ಬೇರೆ ಪಕ್ಷದಲ್ಲಿ ಅಸಮಾಧಾನಗೊಂಡವರನ್ನು ಓಲೈಸಿಕೊಳ್ಳುವ, ವಿವಿಧ ಜಾತಿ-ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಅಲ್ಲಲ್ಲಿ ಜಾತ್ರೆ, ಹಬ್ಬದ ಹೆಸರಿನಲ್ಲಿ ಬಾಡೂಟ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ವೋಟ್‌ ಬ್ಯಾಂಕ್‌ ಗಟ್ಟಿಗೊಳಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಟಿಕೆಟ್‌ ನಿರೀಕ್ಷೆಯಲ್ಲಿ ಆಕಾಂಕ್ಷಿಗಳು

ಟಿಕೆಟ್‌ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳು ಪಕ್ಷದ ಅಧಿಕೃತ ಘೋಷಣೆಗೆ ಕುತೂಹಲದಿಂದ ಎದುರುನೋಡುತ್ತಾ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಚುನಾವಣಾ ಅಖಾಡ ಪ್ರವೇಶಿಸಲು ಸರ್ವರೀತಿಯಲ್ಲೂ ಸಜ್ಜಾಗಿದ್ದಾರೆ. ಪ್ರಚಾರ ಸಾಮಗ್ರಿಗಳು, ಬ್ಯಾನರ್‌, ಬಂಟಿಂಗ್ಸ್‌ಗಳೊಂದಿಗೆ ರೆಡಿಯಾಗಿದ್ದಾರೆ. ಪಕ್ಷ ಆಕಾಂಕ್ಷಿಗಳ ಹೆಸರನ್ನು ಘೋಷಿಸಿಲ್ಲವಾದ್ದರಿಂದ ಮುಂದೇನು ಮಾಡಬೇಕೆಂದು ತೋಚದೆ ದಿಕ್ಕೆಟ್ಟಿದ್ದಾರೆ.

ಜೆಡಿಎಸ್‌ ಪಕ್ಷ ಮಾತ್ರವೇ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಿ ದೃಢ ನಿರ್ಧಾರ ಕೈಗೊಂಡಿದೆ. ಹಾಗಾಗಿ ಪಕ್ಷದೊಳಗೆ ಘೋಷಿತ ಅಭ್ಯರ್ಥಿಗಳ ಬದಲಾವಣೆ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಅಭ್ಯರ್ಥಿಗಳ ಘೋಷಣೆ ದೊಡ್ಡ ಸವಾಲಾಗಿದೆ. ಈ ಬಾರಿ ಪ್ರತಿ ಕ್ಷೇತ್ರದ ಗೆಲುವು ಮುಖ್ಯವಾಗಿರುವುದರಿಂದ ಸಮರ್ಥ ಅಭ್ಯರ್ಥಿಗಳ ಆಯ್ಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಮೂರು ಕ್ಷೇತ್ರಗಳಲ್ಲಿ ಗೊಂದಲ

ಮಂಡ್ಯದಲ್ಲಿ ವಲಸಿಗರಿಗೆ ಟಿಕೆಟ್‌ ಬೇಡವೆಂಬ ಕೂಗೆದ್ದಿದೆ. ಮದ್ದೂರು ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸಹೋದರನ ಪುತ್ರ ಗುರುಚರಣ್‌ಗೆ ಟಿಕೆಟ್‌ ನೀಡಬೇಕೆಂಬ ಒತ್ತಡ ಸೃಷ್ಟಿಯಾಗಿದೆ. ಕೆ.ಆರ್‌.ಪೇಟೆಯಲ್ಲಿ ವಿಜಯ್‌ರಾಮೇಗೌಡರಿಗೆ ಟಿಕೆಟ್‌ ಸಿಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇನ್ನು ಮೇಲುಕೋಟೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಅವಕಾಶ ನೀಡದಿರುವುದರಿಂದ ಮೂರು ಕ್ಷೇತ್ರಗಳ ಹೆಸರನ್ನಷ್ಟೇ ಅಂತಿಮಗೊಳಿಸಬೇಕಿದೆ.

2023ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಈಗಿರುವ ಸಂಭಾವ್ಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವುದೋ ಅಥವಾ ಹೊಸ ಮುಖಗಳನ್ನು ಕಣಕ್ಕಿಳಿಸುವುದರೊಂದಿಗೆ ಕಾಂಗ್ರೆಸ್‌-ಜೆಡಿಎಸ್‌ಗೆ ಪ್ರಬಲ ಪೈಪೋಟಿ ನೀಡಲಿದೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.