Asianet Suvarna News Asianet Suvarna News

ಮೈಸೂರಿಗೆ ಇಂದು ನಾಗರಹೊಳೆಯಿಂದ ಗಜಪಯಣ

ವಿಶ್ವವಿಖ್ಯಾತ ಮೈಸೂರು ದಸರೆಯ ಸಲುವಾಗಿ ಆನೆಗಳು ಇಂದು ನಾಗರಹೊಳೆ ಅಭಯಾರಣ್ಯದಿಂದ ಮೈಸೂರಿಗೆ ತೆರಳಲಿವೆ

Dasara Elephants leave Nagarahole  On October 1 snr
Author
Bengaluru, First Published Oct 1, 2020, 12:34 PM IST

ಹುಣಸೂರು (ಅ.01) :  ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ನಾಂದಿಯೆಂದೇ ಪರಿಗಣಿಸುವ ಗಜಪಯಣ ಕಾರ್ಯಕ್ರಮ ಇಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ಗೇಟ್‌ ಬಳಿ ಆಯೋಜನೆಗೊಂಡಿದ್ದು, ಈ ಬಾರಿ ಕೇವಲ ಔಪಚಾರಿಕವಾಗಿ ನಡೆಯಲಿದೆ.

ಕೋವಿಡ್‌ 19ರ ಪರಿಸ್ಥಿತಿಯಿಂದಾಗಿ ಸರ್ಕಾರ ಈಗಾಗಲೇ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದು, ಅಂತೆಯೇ ಗಜಪಯಣವೂ ಸರಳವಾಗಿ ಸಾಂಕೇತಿಕವಾಗಿ ನಡೆಯಲಿದೆ ಎಂದು ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶ್‌ಕುಮಾರ್‌ ತಿಳಿಸಿದ್ದಾರೆ.

'ದಸರೆಗೆ ಹೋಗಬೇಕಂದ್ರೆ 5 ದಿನ ಮುಂಚೆ ಕೋವಿಡ್ ಟೆಸ್ಟ್ ಅಗತ್ಯ' ...

ಈ ಬಾರಿಯ ಜಂಬೂಸವಾರಿಗೆ 5 ಆನೆಗಳನ್ನು ಮಾತ್ರ ಆಯ್ದುಕೊಳ್ಳಲಾಗಿದೆ. ಪ್ರಥಮ ಬಾರಿಗೆ ಅಂಬಾರಿಯನ್ನು ಹೊರಲು 54ರ ಹರೆಯದ ಆಪರೇಷನ್‌ ಹೀರೋ ಎಂದೇ ಪ್ರಸಿದ್ಧನಾದ ಅಭಿಮನ್ಯು(ಮತ್ತಿಗೋಡು ಆನೆಶಿಬಿರ) ಸಿದ್ಧನಾಗಿದ್ದಾನೆ. ಕುಶಾಲನಗರ ಆನೆಕಾಡು ಶಿಬಿರದಿಂದ ವಿಕ್ರಮ್‌ ಮತ್ತು ವಿಜಯ್‌, ದುಬಾರೆ ಶಿಬಿರದ ಗೋಪಿ ಮತ್ತು ಕಾವೇರಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲರನ್ನು ವೀರನಹೊಸಳ್ಳಿ ಗೇಟ್‌ ಬಳಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಳುಹಿಸಿಕೊಡಲಾಗುವುದು.

ಮೈಸೂರು ಸಿಂಹಾಸನ ಸಾರ್ವಜನಿಕರ ವೀಕ್ಷಣೆಗೆ ಲಭ್ಯ ...

ಈ ಬಾರಿಯ ಗಜಪಯಣ ವೇಳೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವಿಲ್ಲ, ಜನಪ್ರತಿನಿಧಿಗಳಿಗೆ ಆಹ್ವಾನವಿಲ್ಲ, ಕೇವಲ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮಾತ್ರ ಭಾಗವಹಿಸಲಿದ್ದಾರೆ. ಆನೆಗಳಿಗೆ ಪೂಜೆ ಸಲ್ಲಿಸಿದ ನಂತರ ಮೈಸೂರು ಅರಣ್ಯಭವನದ ಕಡೆ ತೆರಳಲಿವೆ. ಅ. 2ರಂದು ಅರಮನೆಯ ಆವರಣಕ್ಕೆ ಕರೆ ತಂದು ಅಲ್ಲಿ ಉಸ್ತುವಾರಿ ಸಚಿವರಿಂದ ಗಜಪಡೆಗೆ ಸ್ವಾಗತ ಕೋರಲಿದ್ದಾರೆ ಎಂದು ಡಿಸಿಎಫ್‌ ಮಾಹಿತಿ ನೀಡಿದರು.

 ನಾಳೆ ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ

ಮೈಸೂರು: ಮೈಸೂರು ಅರಮನೆ ಮಂಡಳಿಯು 2020ನೇ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಆಗಮಿಸುತ್ತಿರುವ ಗಜಪಡೆಗೆ ಸ್ವಾಗತ ಕಾರ್ಯಕ್ರಮವನ್ನು ಅ.2ರ ಮಧ್ಯಾಹ್ನ 12.18 ರಿಂದ 12.40 ಗಂಟೆಯವರೆಗೆ ಧನುರ್‌ ಲಗ್ನದಲ್ಲಿ ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಆಯೋಜಿಸಿದೆ. ಈ ವೇಳೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಮೇಯರ್‌ ತಸ್ನೀಂ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ. ರಾಮದಾಸ್‌, ತನ್ವೀರ್‌ ಸೇಠ್‌, ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್‌, ಕೆ. ಮಹದೇವ್‌, ಎಲ್‌. ನಾಗೇಂದ್ರ, ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌, ಜಿಲ್ಲಾಧಿಕಾರಿ ಬಿ. ಶರತ್‌ ಮೊದಲಾದವರು ಉಪಸ್ಥಿತರಿರುವರು.

Follow Us:
Download App:
  • android
  • ios