Asianet Suvarna News Asianet Suvarna News

ಕರ್ನಾಟಕ ಬಂದ್‌ಗೆ ದಸಂಸ ಬೆಂಬಲವಿಲ್ಲ

ಕಾವೇರಿ ವಿಚಾರವಾಗಿ ಕನ್ನಡ ಪರ ಸಂಘಟನೆಗಳು 29ರಂದು ಕರೆದಿರುವ ಸಮಗ್ರ ಕರ್ನಾಟಕ ಬಂದ್‌ಗೆ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ದಂಡು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿವೆ.

Dasamsa has no support for Karnataka bandh snr
Author
First Published Sep 28, 2023, 8:55 AM IST

 ತುಮಕೂರು :  ಕಾವೇರಿ ವಿಚಾರವಾಗಿ ಕನ್ನಡ ಪರ ಸಂಘಟನೆಗಳು 29ರಂದು ಕರೆದಿರುವ ಸಮಗ್ರ ಕರ್ನಾಟಕ ಬಂದ್‌ಗೆ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ದಂಡು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿವೆ.

ಅಂಬೇಡ್ಕರ್ ಭವನದಲ್ಲಿಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ನೇತೃತ್ವದಲ್ಲಿ ಸಭೆ ಸೇರಿದ್ದ ದಲಿತ ಸಂಘಟನೆಗಳು, ಕಾವೇರಿ ಜಲವಿವಾದ ಕುರಿತು ಚರ್ಚೆ ನಡೆಸಿ, ಜನಸಾಮಾನ್ಯರಿಗೆ ಮಾರಕವಾಗಿರುವ ಬಂದ್ ಬದಲು, ಶಾಂತಿಯುತ ಪ್ರತಿಭಟನೆಯ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ರಾಜ್ಯ ಮತ್ತು ಕೇಂದ್ರ ಸರಕಾರದ ಗಮನ ಸೆಳೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನದಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವಾಗ, ಯಾವ ಪುರುಷಾರ್ಥಕ್ಕಾಗಿ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ ಎಂಬುದು ತಿಳಿಯುತ್ತಿಲ್ಲ ಎಂದಿದ್ದಾರೆ.

ಕಾವೇರಿ ಟ್ರೂಬ್ಯುನಲ್‌ನಲ್ಲಿ ಮಳೆಯಿಲ್ಲದ ಬರಗಾಲದಂತಹ ಸಂಕಷ್ಟ ಸಮಯದಲ್ಲಿ ಯಾವ ಸೂತ್ರ ಅನುಸರಿಸಬೇಕು ಎಂದು ಸ್ಪಷ್ಟವಾಗಿ ಹೇಳಿಲ್ಲ. ಇದು ಕರ್ನಾಟಕವನ್ನು ಬರಗಾಲ ದಂತಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕೇಂದ್ರ ಸರಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ, ಸಂಕಷ್ಟ ಸೂತ್ರ ಸಿದ್ಧಪಡಿಸಬೇಕಿದೆ. ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ೨೮ ಜನ ಸಂಸತ್ ಸದಸ್ಯರು ಈ ಬಗ್ಗೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು. ಆದರೆ, ಒಬ್ಬರೂ ತುಟಿ ಬಿಚ್ಚುತ್ತಿಲ್ಲ. ಕನ್ನಡ ಪರ ಸಂಘಟನೆಗಳಿಗೆ ನಿಜವಾಗಿಯೂ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದರೆ, ಮೊದಲು ಸಂಸದರು ಬಾಯಿ ತೆರೆದು ಮಾತನಾಡುವಂತೆ, ರಾಜ್ಯದ ಕಷ್ಟವನ್ನು ಪ್ರಧಾನಿ ಮತ್ತು ಒಕ್ಕೂಟ ಸರಕಾರದ ನೀರಾವರಿ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವಂತೆ ಒತ್ತಡ ತರಬೇಕು. ಇದನ್ನು ಬಿಟ್ಟು ಬಂದ್ ನಂತಹ ಕಾರ್ಯಕ್ರಮದಿಂದ ಜನಸಾಮಾನ್ಯರಿಗೆ ಯಾವುದೇ ಉಪಯೋಗವಾಗದು ಎಂದರು.

ರಾಜ್ಯದಲ್ಲಿ ಒಂದರ ಹಿಂದೆ ಒಂದು ಕನ್ನಡ ಶಾಲೆಗಳು ಮುಚ್ಚುತ್ತಿವೆ, ಖಾಸಗಿ ಶಾಲೆಗಳ ಕಾರ್ಪೋರೆಟ್ ಶುಲ್ಕ ಭರಿಸುವುದು ಸಾಮಾನ್ಯ ಜನರಿಗೆ ಕಷ್ಟ. ಇದರ ಬಗ್ಗೆ ಎಂದಿಗೂ ಕನ್ನಡಪರ ಸಂಘಟನೆಗಳು ಧನಿ ಎತ್ತಿಲ್ಲ. ಸೌಜನ್ಯಳ ಅತ್ಯಾಚಾರ, ಕೊಲೆ ಕೇಸ್ ಸೇರಿದಂತೆ ರಾಜ್ಯದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಕಿಂಚಿತ್ತು ಧ್ವನಿ ಎತ್ತದ ಕನ್ನಡ ಪರ ಸಂಘಟನೆಗಳು, ಈಗಾಗಲೇ ಒಕ್ಕೂಟ ಸರಕಾರದ ಅಂಗಳದಲ್ಲಿರುವ ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಹಾಗಾಗಿ, ನಾವುಗಳು ಬಂದ್‌ಗೆ ಬೆಂಬಲ ನೀಡುತ್ತಿಲ್ಲ. ಬದಲಾಗಿ ಶಾಂತಿಯುತ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಒಕ್ಕೂಟ ಸರಕಾರ ಹಾಗೂ ರಾಜ್ಯ ಸರಕಾರದ ಗಮನಸೆಳೆಯಲಾಗುವುದು ಎಂದು ಪಿ.ಎನ್.ರಾಮಯ್ಯ ತಿಳಿಸಿದರು.

ಸಭೆಯಲ್ಲಿ ಪಿ.ಎನ್.ರಾಮಯ್ಯ ಜಿಲ್ಲಾಧ್ಯಕ್ಷರು ದಸಂಸ, ಎನ್.ಕುಮಾರ್ ಜಿಲ್ಲಾಧ್ಯಕ್ಷ ಅಂಬೇಡ್ಕರ್ ದಂಡು, ಲಕ್ಷ್ಮಮ್ಮ ಜಿಲ್ಲಾಧ್ಯಕ್ಷರು, ವಿದ್ಯಾರ್ಥಿ ಒಕ್ಕೂಟದ ಟಿ.ಎನ್.ಮಧು, ಅಲ್ಪಸಂಖ್ಯಾತರ ತಾಲೂಕು ಘಟಕ ಅಧ್ಯಕ್ಷ ಯೂಸೂಫ್, ಎ.ಸುನಿಲ್ ತಾಲೂಕು ಅಧ್ಯಕ್ಷರು, ಸಲ್ಮಾ, ರಘುಪ್ರಸಾದ್, ಸುಪ್ರೀಮ್ ಟಿ. ಆರ್, ರಂಗಪ್ಪ ಇದ್ದರು.

Follow Us:
Download App:
  • android
  • ios