ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ವಕ್ಷೇತ್ರ ವರುಣದಿಂದಲೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಪುತ್ರನಿಗೆ ಕ್ಷೇತ್ರ ತ್ಯಾಗ ಮಾಡಲು ಮುಂದಾಗಿದ್ದ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ಟಿ. ನರಸೀಪುರದಿಂದಲೇ ಟಿಕೆಟ್‌ ನೀಡಲಾಗಿದೆ.

 ಅಂಶಿ ಪ್ರಸನ್ನಕುಮಾರ್‌

 ಮೈಸೂರು : ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ವಕ್ಷೇತ್ರ ವರುಣದಿಂದಲೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಪುತ್ರನಿಗೆ ಕ್ಷೇತ್ರ ತ್ಯಾಗ ಮಾಡಲು ಮುಂದಾಗಿದ್ದ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ಟಿ. ನರಸೀಪುರದಿಂದಲೇ ಟಿಕೆಟ್‌ ನೀಡಲಾಗಿದೆ.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳ ಅಭ್ಯರ್ಥಿಗಳ ಯಾದಿಯನ್ನು ಕಾಂಗ್ರೆಸ್‌ ಪ್ರಕಟಿಸಿದೆ. ಸಿದ್ದರಾಮಯ್ಯ ಅವರು ಕಳೆದ ಬಾರಿ ಚಾಮುಂಡೇಶ್ವರಿ ಹಾಗೂ ಬಾದಾಮಿಯಿಂದ ಸ್ಪರ್ಧಿಸಿದ್ದರು. ಈ ಪೈಕಿ ಚಾಮುಂಡೇಶ್ವರಿಯಲ್ಲಿ ಸೋತಿದ್ದರು. ಈ ಬಾರಿ ಕೋಲಾರದಿಂದ ಸ್ಪರ್ಧಿಸ ಬಯಸಿದ್ದರು. ಆದರೆ ಅದು ಸುರಕ್ಷಿತವಲ್ಲ ಎಂಬ ಕಾರಣಕ್ಕಾಗಿ ವರುಣದಿಂದಲೇ ಕಣಕ್ಕಿಳಿದಿದ್ದಾರೆ. ಕೋಲಾರದಿಂದಲೂ ಸ್ಪರ್ಧಿಸುವ ಸಾಧ್ಯತೆ ಇದೆ. ಕೋಲಾರ ಹಾಗೂ ವರುಣ-ಎರಡೂ ಕಡೆಯೂ ಗೆದ್ದಲ್ಲಿ ಈಗ ತಮಗಾಗಿ ಕ್ಷೇತ್ರ ತ್ಯಾಗ ಮಾಡಿರುವ ಪುತ್ರ ಹಾಗೂ ಹಾಲಿ ಶಾಸಕ ಡಾ. ಯತೀಂದ್ರ ಅವರಿಗೆ ಸಿದ್ದರಾಮಯ್ಯ ಅವರು ವರುಣ ಬಿಟ್ಟುಕೊಡುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಿಂದ ಎಂಟು ಬಾರಿ ಸ್ಪರ್ಧಿಸಿ ಒಂದು ಉಪ ಚುನಾವಣೆ ಸೇರಿದಂತೆ ಐದು ಬಾರಿ ಆಯ್ಕೆಯಾಗಿದ್ದಾರೆ. ಮೂರು ಬಾರಿ ಸೋತಿದ್ದಾರೆ. ಪಕ್ಕದ ವರುಣ ಕ್ಷೇತ್ರದಿಂದ ಎರಡು ಬಾರಿ ಎರಡೂ ಬಾರಿಯೂ ಆಯ್ಕೆಯಾಗಿದ್ದಾರೆ. ಬಾದಾಮಿಯಿಂದ ಒಂದು ಬಾರಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಗೆದ್ದಲ್ಲಿ ಅವರು 9ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದಂತೆ ಆಗುತ್ತದೆ.

ಮಹದೇವಪ್ಪ ಅವರು ಟಿ. ನರಸೀಪುರದಿಂದ ಎಂಟು ಬಾರಿ ಸ್ಪರ್ಧಿಸಿ, ಐದು ಬಾರಿ ಆಯ್ಕೆಯಾಗಿದ್ದಾರೆ. ಮೂರು ಬಾರಿ ಸೋತಿದ್ದಾರೆ. ಈ ಬಾರಿ ಗೆದ್ದಲ್ಲಿ ಆರನೇ ಬಾರಿ ವಿಧಾನಸಭೆ ಪ್ರವೇಶಿದಂತೆ ಆಗುತ್ತದೆ.

ಅದೇ ರೀತಿ ಮಾಜಿ ಸಚಿವ ಕೆ. ವೆಂಕಟೇಶ್‌ ಅವರು ಪಿರಿಯಾಪಟ್ಟಣದಿಂದ ಎಂಟು ಬಾರಿ ಸ್ಪರ್ಧಿಸಿ, ಐದು ಬಾರಿ ಆಯ್ಕೆಯಾಗಿ, ಮೂರು ಬಾರಿ ಸೋತಿದ್ದಾರೆ. ಅವರು ಕೂಡ ಗೆದ್ದಲ್ಲಿ ಆರನೇ ಬಾರಿಗೆ ವಿಧಾನಸಭೆಗೆ ಪ್ರವೇಶ.

ಮಾಜಿ ಸಚಿವ ಹಾಗೂ ಹಾಲಿ ಶಾಸಕ ತನ್ವೀರ್‌ ಸೇಠ್‌ ಅವರು ನರಸಿಂಹರಾಜ ಕ್ಷೇತ್ರದಿಂದ ಒಂದು ಉಪ ಚುನಾವಣೆ ಸೇರಿದಂತೆ ಸತತ ಐದು ಬಾರಿ ಗೆದ್ದಿದ್ದಾರೆ. ಈ ಬಾರಿ ಗೆದ್ದಲ್ಲಿ ಆರನೇ ಬಾರಿ ಆಯ್ಕೆಯಾದಂತೆ ಆಗುತ್ತದೆ.

ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರು ನೀವು ಕೈಹಿಡಿದ್ರಿ: ಬದುಕಿರೋತನಕ ಬಾದಾಮಿ ಜನರನ್ನ ಮರೆಯೊಲ್ಲ: ಸಿದ್ದು ಭಾವನಾತ್ಮಕ ಮಾತು

ಹುಣಸೂರಿನ ಹಾಲಿ ಶಾಸಕ ಎಚ್‌.ಪಿ. ಮಂಜುನಾಥ್‌ ಒಂದು ಉಪ ಚುನಾವಣೆ ಸೇರಿದಂತೆ ಮೂರು ಗೆದ್ದಿದ್ದಾರೆ. ಒಂದು ಬಾರಿ ಸೋತಿದ್ದಾರೆ. ಈ ಬಾರಿ ಗೆದ್ದಲ್ಲಿ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶ.

ಎಚ್‌.ಡಿ. ಕೋಟೆಯ ಹಾಲಿ ಶಾಸಕ ಅನಿಲ್‌ ಚಿಕ್ಕಮಾದು ಮೊದಲ ಚುನಾವಣೆಯಲ್ಲಿಯೇ ಗೆದ್ದು, ಅತಿ ಕಿರಿಯ ವಯಸ್ಸಿನ ಶಾಸಕ ಎನಿಸಿಕೊಂಡವರು. ಈ ಬಾರಿ ಗೆದ್ದಲ್ಲಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ.

ಕೆ.ಆರ್‌. ನಗರದಿಂದ ಜಿಪಂ ಮಾಜಿ ಸದಸ್ಯ ಡಿ. ರವಿಶಂಕರ್‌ ಅವರಿಗೆ ಮತ್ತೆ ಟಿಕೆಟ್‌ ನೀಡಲಾಗಿದೆ. ಅವರು ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದರು. ಈ ಬಾರಿ ಗೆದ್ದಲ್ಲಿ ಚೊಚ್ಚಲ ವಿಧಾನಸಭಾ ಪ್ರವೇಶ. 2013 ರಲ್ಲಿ ರವಿಶಂಕರ್‌ ಅವರ ತಂದೆ ದೊಡ್ಡಸ್ವಾಮೇಗೌಡ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋತಿದ್ದರು.

ಇತ್ತೀಚೆಗೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್‌. ಧ್ರುವನಾರಾಯಣ ಅವರು ನಂಜನಗೂಡಿನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗ ಬಯಸಿದ್ದರು. ಈಗ ಅವರ ನಿಧನದ ಅನುಕಂಪದ ಲಾಭ ಪಡೆಯಲು ಅವರ ಪುತ್ರ ದರ್ಶನ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ದರ್ಶನ್‌ ಗೆದ್ದಲ್ಲಿ ಮೊದಲ ಬಾರಿ ವಿಧಾನಸಭೆಗೆ ಪ್ರವೇಶ.

ಮೂರು ಕ್ಷೇತ್ರಗಳ ಬಾಕಿ

ಮೈಸೂರು ನಗರದ ಚಾಮರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ವಾಸು ಹಾಗೂ ಮುಖಂಡ ಕೆ. ಹರೀಶ್‌ಗೌಡರ ನಡುವೆ ಟಿಕೆಟ್‌ಗೆ ಪೈಪೋಟಿ ಇದೆ. ಇಬ್ಬರ ಪೈಕಿ ಒಬ್ಬರಿಗೆ ಟಿಕೆಟ್‌ ನೀಡಲಾಗುವುದು. ಇಲ್ಲಿ ಸಿದ್ದರಾಮಯ್ಯ ಅವರು ಹರೀಶ್‌ಗೌಡ ಪರ ಇದ್ದರೆ ಉಳಿದೆಲ್ಲಾ ಮುಖಂಡರು ವಾಸು ಪರ ಇದ್ದಾರೆ.

ಬಿಎಸ್‌ವೈ ಮನೆಯಲ್ಲಿ “ವರುಣಾ” ವ್ಯೂಹ ಹೆಣೆದರಾ ಕೇಸರಿ ಚಾಣಕ್ಯ..?

ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಜೊತೆಗೆ ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್‌ಕುಮಾರ್‌, ಎಂಡಿಎ ಮಾಜಿ ಅಧ್ಯಕ್ಷ ಕೆ.ಆರ್‌. ಮೋಹನಕುಮಾರ್‌ ಪುತ್ರ ಎನ್‌.ಎಂ. ನವೀನ್‌ಕುಮಾರ್‌, ಮುಖಂಡ ಗುರುಪಾದಸ್ವಾಮಿ ಮತ್ತಿತರರು ಟಿಕೆಟ್‌ ಕೇಳಿದ್ದಾರೆ. ಬಿಜೆಪಿ ಟಿಕೆಟ್‌ ಯಾರಿಗೆ ಎಂಬುದರ ಮೇಲೆ ಕಾಂಗ್ರೆಸ್‌ ತನ್ನ ಉಮೇದುವಾರರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಬಂದಿರುವ ಮೈಮುಲ್‌ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ ಸೇರಿದಂತೆ ಒಂದು ಡಜನ್‌ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಅಲ್ಲಿ ಕೂಡ ಟಿಕೆಟ್‌ ಆಖೈರುಗೊಳಿಸಿಲ್ಲ.

ಜೆಡಿಎಸ್‌ ಹುರಿಯಾಳುಗಳು

ಜೆಡಿಎಸ್‌ ಈಗಾಗಲೇ ತನ್ನ ಮೊದಲ ಪಟ್ಟಿಪ್ರಕಟಿಸಿದೆ.

ಚಾಮುಂಡೇಶ್ವರಿ- ಜಿ.ಟಿ. ದೇವೇಗೌಡ

ಕೆ.ಆರ್‌. ನಗರ- ಸಾ.ರಾ. ಮಹೇಶ್‌

ಪಿರಿಯಾಪಟ್ಟಣ- ಕೆ. ಮಹದೇವ್‌

ಟಿ. ನರಸೀಪುರ- ಎಂ. ಅಶ್ವಿನ್‌ಕುಮಾರ್‌

ಹುಣಸೂರು- ಜಿ.ಡಿ. ಹರೀಶ್‌ಗೌಡ

ವರುಣ- ಎಂ.ಎಸ್‌. ಅಭಿಷೇಕ್‌

ಕೃಷ್ಣರಾಜ- ಕೆ.ವಿ. ಮಲ್ಲೇಶ್‌

ಚಾಮರಾಜ, ನರಸಿಂಹರಾಜ, ಎಚ್‌.ಡಿ. ಕೋಟೆ, ನಂಜನಗೂಡು ಕ್ಷೇತ್ರಗಳ ಪಟ್ಟಿಅಂತಿಮವಾಗಿಲ್ಲ. ಈ ಪೈಕಿ ಎಚ್‌.ಡಿ. ಕೋಟೆಯಿಂದ ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್‌, ನಂಜನಗೂಡಿನಿಂದ ಆರ್‌. ಮಾದೇಶ್‌ ಹಾಗೂ ಬೆಳವಾಡಿ ಶಿವಕುಮಾರ್‌, ನರಸಿಂಹರಾಜದಲ್ಲಿ ಅಬ್ದುಲ್ಲಾ, ಚಾಮರಾಜದಲ್ಲಿ ಕೆ.ವಿ. ಶ್ರೀಧರ್‌, ಎಸ್‌ಬಿಎಂ ಮಂಜು, ಎಚ್‌.ಕೆ. ರಮೇಶ್‌, ಎಂ,ಜಿ. ರವಿಕುಮಾರ್‌ ಮೊದಲಾದರ ಹೆಸರುಗಳಿವೆ.

 - ಅಪ್ಪನಿಗಾಗಿ ಮಕ್ಕಳಿಂದ ಕ್ಷೇತ್ರ ತ್ಯಾಗ

ವರುಣ ಕ್ಷೇತ್ರದ ಹಾಲಿ ಶಾಸಕ ಡಾ.ಯತೀಂದ್ರ ಅವರು ತಂದೆ ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಅದೇ ರೀತಿ ಟಿ. ನರಸೀಪುರದಿಂದ ಕಾಂಗ್ರೆಸ್‌ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದ ಸುನಿಲ್‌ ಬೋಸ್‌ ಅವರ ಬದಲಿಗೆ ಅವರ ತಂದೆ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ಕ್ಷೇತ್ರ ಬಿಟ್ಟುಕೊಡಬೇಕಾಗಿದೆ.

ನಂಜನಗೂಡಿನಲ್ಲಿ ದಿವಂಗತ ಆರ್‌. ಧ್ರುವನಾರಾಯಣ ಅವರ ಪುತ್ರ ದರ್ಶನ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿದೆ. ಇಲ್ಲಿ ಧ್ರುವನಾರಾಯಣ ಸ್ಪರ್ಧಿಸಲು ಸಜ್ಜಾಗಿದ್ದರು. ಆದರೆ ಇತ್ತೀಚೆಗೆ ತೀವ್ರ ಹೃದಯಾಘಾತದಿಂದ ನಿಧನರಾದರು.