ಮೃತ್ಯುಕೂಪವಾಯ್ತು ಗುಂಡ್ಲುಪೇಟೆ ಹೆದ್ದಾರಿ: ಸಂಚಾರ ದಟ್ಟಣೆಯಿಂದ ಹೆಚ್ಚಾಯ್ತು ಅಪಘಾತ ಸಂಖ್ಯೆ!
ಇದು ಕೇರಳ,ತಮಿಳುನಾಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ. ಹೆದ್ದಾರಿ ಅಂದ್ರೆ ಸುಗಮ ಸಂಚಾರ ನಡೀಬೇಕು. ಆದ್ರೆ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ 5 ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಅಪಘಾತ ಸಂಭವಿಸಿ 19ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು ಸವಾರರ ಪಾಲಿಗೆ ಡೆಡ್ಲಿ ಹೆದ್ದಾರಿಯಾಗಿದೆ.
ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಮೇ.27): ಇದು ಕೇರಳ,ತಮಿಳುನಾಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ. ಹೆದ್ದಾರಿ ಅಂದ್ರೆ ಸುಗಮ ಸಂಚಾರ ನಡೀಬೇಕು. ಆದ್ರೆ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ 5 ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಅಪಘಾತ ಸಂಭವಿಸಿ 19ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು ಸವಾರರ ಪಾಲಿಗೆ ಡೆಡ್ಲಿ ಹೆದ್ದಾರಿಯಾಗಿದೆ. ಅದ್ಯಾವ ಹೆದ್ದಾರಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.
ಬೆಂಗಳೂರು-ನೀಲಗಿರಿ, ನೆರೆ ರಾಜ್ಯ ಕೇರಳಕ್ಕೂ ಕೂಡ ಇದೇ ಹೆದ್ದಾರಿಯಲ್ಲಿ ಸಂಚಾರ. ಇದಕ್ಕೆ ಕಾರಣ ಹುಡುಕಲು ಹೊರಟರೆ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂಬುದು ಸ್ಪಷ್ಟ. ಜತೆಗೆ ವಾಹನ ಸವಾರರ ಬೇಜವಾಬ್ದಾರಿಯೂ ಇದೆ. ರಾಷ್ಟ್ರೀಯ ಹೆದ್ದಾರಿ 766 ಅವಘಡಕ್ಕೆ ಆಹ್ವಾನ ನೀಡುತ್ತಿದೆ. ಕಳೆದ ಐದು ತಿಂಗಳಲ್ಲಿ 19 ಜನ ಮೃತಪಟ್ಟಿದ್ದರೆ 28 ಜನ ಗಂಭೀರ ಗಾಯಗೊಂಡಿದ್ದಾರೆ. ವಾರಾಂತ್ಯದಲ್ಲಿ ಬಂಡೀಪುರ ಸಫಾರಿ ಹಾಗು ಪ್ರವಾಸಿ ತಾಣಗಳಿಗೆ ಬರುವ ವಿಪರೀತ ವಾಹನಗಳ ದಟ್ಟಣೆ ಹಾಗು ಪ್ರತಿನಿತ್ಯ ಮೈಸೂರು, ಬೆಂಗಳೂರಿನಿಂದ ಕೇರಳಕ್ಕೆ ಹೋಗುವ ಸರಕು ಸಾಗಣೆ ವಾಹನಗಳು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ತಮಿಳುನಾಡಿಗೆ ತೆರಳುವ ಅಂತರ ರಾಜ್ಯ ವಾಹನ ಸವಾರರು ಅವಸರಪಡುತ್ತಾರೆ.
Chamarajnagar: ಹಸಿರಿನ ವನರಾಶಿಯಿಂದ ನಳನಳಿಸುತ್ತಿದೆ ಬಂಡೀಪುರ!
ರಾತ್ರಿ 9 ರ ನಂತರ ವಾಹನ ಸಂಚಾರ ನಿಷೇಧಿಸಿರುವುದೇ ಇದಕ್ಕೆ ಮುಖ್ಯ ಕಾರಣ. ಹಿರೀಕಾಟಿ, ಬೇಗೂರು, ರಾಘವಾಪುರ, ಬೆಂಡರಹಳ್ಳಿ, ಗರಗನಹಳ್ಳಿ, ಬೆಂಡವಾಡಿ, ಹಿರೇಪುರ ವ್ಯಾಪ್ತಿಯಲ್ಲಿ ಹೆಚ್ಚು ಅಪಘಾತಗಳಾಗುತ್ತಿವೆ. ಗ್ರಾಮೀಣ ಭಾಗದಿಂದ ರಾಷ್ಟ್ರೀಯ ಹೆದ್ದಾರಿ ತಲುಪುವ ಬೈಕ್, ಕಾರು ಚಾಲಕರಿಗೆ ಅನುಕೂಲವಾಗುವ ಉದ್ದೇಶದಿಂದ ಯಾವುದೇ ಸೂಚನಾ ಫಲಕ, ಹಂಪ್ಸ್ ನಿರ್ಮಿಸಿಲ್ಲ. ಇದರಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವು ಎದ್ದು ಕಾಣುತ್ತಿದೆ. ರಸ್ತೆ ಸುರಕ್ಷತಾ ಸಪ್ತಾಹ ಎಂಬ ಅಭಿಯಾನವನ್ನು ಸಮರ್ಪಕವಾಗಿ ಮಾಡುವಲ್ಲಿ ವಿಫಲವಾಗಿದೆ ಅಂತಿದ್ದಾರೆ ಸಾರ್ವಜನಿಕರು.
ಈ ಡೆಡ್ಲಿ ರಸ್ತೆ ಬಗ್ಗೆ ಸ್ಥಳೀಯ ಶಾಸಕ ನಿರಂಜನ್ ಕುಮಾರ್ ಮಾತನಾಡಿ ಎರಡು ರಾಜ್ಯಗಳಿಗೆ ಅಪಾರ ಸಂಖ್ಯೆಯಲ್ಲಿ ವಾಹನ ಸಂಚಾರವಾಗ್ತಿದೆ. ಅಪಘಾತ ಸಂಖ್ಯೆ ಕೂಡ ಹೆಚ್ಚಾಗಿದೆ. ಪೊಲೀಸರು ಸ್ವಲ್ಪ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಈಗಾಗಲೇ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಹೆದ್ದಾರಿ ಅಗಲೀಕರಣವಾದರೆ ಈ ಸಮಸ್ಯೆಯೆಲ್ಲ ಪರಿಹಾರವಾಗುತ್ತೆ ಅಂತಾರೆ. ಚಾಮರಾಜನಗರ ಎಸ್ಪಿ ಶಿವಕುಮಾರ್ ಮಾತನಾಡಿ ಗುಂಡ್ಲುಪೇಟೆಯಿಂದ ಬೇಗೂರುವರೆಗೆ 5 ತಿಂಗಳಲ್ಲಿ 19 ಮಂದಿ ಆಕ್ಸಿಡೆಂಟ್ ನಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ರಸ್ತೆಯನ್ನು ಅವೈಜ್ಞಾನಿಕ ರೀತಿ ಮಾಡಿರುವುದೇ ಕಾರಣವಾಗಿದೆ.
ಚಾಮರಾಜನಗರ: ಗ್ಯಾಸ್ ಸಿಲಿಂಡರ್ ಸ್ಫೋಟ: ಯುವಕ ಸಜೀವ ದಹನ
ಈಗಾಗಲೇ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದು ಡಿವೈಡರ್ ನಿರ್ಮಿಸಬೇಕಿದೆ. ಅಂತರ ರಾಜ್ಯ ಹೆದ್ದಾರಿ ಆಗಿರುವುದರಿಂದ ಹಾಗು ವಾರಾಂತ್ಯದಲ್ಲಿ ಬರುವ ಪ್ರವಾಸಿಗರ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ರಸ್ತೆ ಅಗಲೀಕರಣ ಆಗಬೇಕಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸಂಚಾರಿ ಫಲಕ ಅಳವಡಿಸಿ ಅರಿವು ಮೂಡಿಸಲಾಗ್ತಿದೆ ಅಂತಿದ್ದಾರೆ ಚಾಮರಾಜನಗರ ಜಿಲ್ಲಾ ಎಸ್ಪಿ ಶಿವಕುಮಾರ್. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕಿದೆ. ಅಪಘಾತಗಳಲ್ಲಿ ಮೃತಪಟ್ಟಿರುವ ಎಲ್ಲರೂ ಯುವಕರೇ ಎಂಬುದು ಕಳವಳಕಾರಿ ವಿಚಾರ. ಸಂಬಂಧಪಟ್ಟವರು ಸಮಸ್ಯೆಯನ್ನು ಇನ್ನಾದರು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಬೇಕಿರುವ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ.