ಹಂಪಿ ಹರೇಶಂಕರ ಮಂಟಪದೊಳಗೆ ಬಸ್‌ ಸಿಲುಕಿ ಸ್ಮಾರಕಕ್ಕೆ ಧಕ್ಕೆ

ಪ್ರವಾಸಿಗರಲ್ಲಿ ಜಾಗೃತಿ ಮೂಡಿಸದ ಇಲಾಖೆಗಳು| ಇತಿಹಾಸ ಪ್ರಿಯರಿಗೆ ಬೇಸರ| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ| ಹಂಪಿಯಲ್ಲಿ ಪದೇ ಪದೆ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗುತ್ತಿರುವ ಸಂಬಂಧಿಸಿದ ಇಲಾಖೆ| 

Damage to the Monument in Hampi in Ballari grg

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಜ.27): ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿನ ಹರೇ ಶಂಕರ ಬಾಗಿಲು ಮಂಟಪದೊಳಗೆ ಬಸ್‌ ಸಿಲುಕಿಕೊಂಡು ಸ್ಮಾರಕಕ್ಕೆ ಹಾನಿಯಾಗಿದೆ.

ವಿಜಯ ವಿಠ್ಠಲ ದೇವಸ್ಥಾನವನ್ನು ವೀಕ್ಷಣೆ ಮಾಡಲು ತೆರಳುವಾಗ ಬಸ್‌ ಸಿಲುಕಿಕೊಂಡಿತ್ತು. ಗಣರಾಜ್ಯೋತ್ಸವದ ರಜೆಯ ಹಿನ್ನೆಲೆಯಲ್ಲಿ ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಹೀಗೆ ಆಗಮಿಸಿದ್ದ ಪ್ರವಾಸಿ ಬಸ್ಸೊಂದು ಈ ಮಾರ್ಗದಲ್ಲಿ ದಾಟುವಾಗ ಸಿಲುಕಿಕೊಂಡಿತು. ಇದರಿಂದ ಮಂಟಪದ ಮೇಲಿನ ಕಲ್ಲು ಸ್ವಲ್ಪ ಅಲುಗಾಡಿ ಸಡಿಲಗೊಂಡಿದೆ. ಬಳಿಕ ಚಾಲಕ ಬಸ್‌ನ್ನು ಹಿಮ್ಮುಖ (ರಿವರ್ಸ್‌) ತೆಗೆದುಕೊಂಡು ಬೇರೆ ಮಾರ್ಗದಲ್ಲಿ ತೆರಳಿದ.

ಇಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಮಂಟಪ ಬಳಸಿ ಭಾರಿ ವಾಹನಗಳು ಓಡಾಡುತ್ತಿರುವುದನ್ನು ಖಂಡಿಸಿ ಈ ಹಿಂದೆ ಚರಿತ್ರೆಪ್ರಿಯರು ಪ್ರತಿಭಟನೆ ಕೂಡ ಮಾಡಿದ್ದರು. ಆದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಜತೆಗೆ ಯುನೆಸ್ಕೊ ಕೂಡ ಈ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಬೇಕು ಎಂದು ಈ ಹಿಂದೆಯೇ ಭಾರತೀಯ ಪುರಾತತ್ವ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲಹೆ ನೀಡಿದೆ. ಪ್ರಾಚೀನ ಸ್ಮಾರಕಗಳನ್ನು ಸಹಜ ಸ್ಥಿತಿಯಲ್ಲಿ ಕಾಪಾಡಬೇಕು ಎಂದು ಸಲಹೆ ನೀಡಲಾಗಿದೆ. ಈ ಹಿಂದೆ ಈ ಸ್ಮಾರಕಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಸೇತುವೆ ನಿರ್ಮಾಣ ಕಾರ್ಯ ಕೈಗೊಂಡಿದ್ದಾಗ ಯುನೆಸ್ಕೊ ಹಂಪಿ ಸ್ಮಾರಕಗಳ ಗುಚ್ಛವನ್ನು ಅಪಾಯದ ಪಟ್ಟಿಗೆ ಸೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಂಪಿ ಸ್ಮಾರಕಗಳ ಬಳಿ ಮತ್ತೆ ಡ್ರೋಣ್‌ ಕ್ಯಾಮೆರಾ ಹಾರಾಟ

ಯುನೆಸ್ಕೊ ತಾಕೀತು:

ಬಳಿಕ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಯುನೆಸ್ಕೊ ಮಾರ್ಗಸೂಚಿ ಮತ್ತು ಪುರಾತತ್ವ ಇಲಾಖೆಯ ನಿರ್ದೇಶನದ ಅನ್ವಯ ನಡೆದುಕೊಂಡು ಹಂಪಿಯ ಸಮಗ್ರ ಯೋಜನೆ ಜಾರಿ ಮಾಡಿದ್ದರಿಂದ, ಯುನೆಸ್ಕೊ ಹಂಪಿ ಸ್ಮಾರಕಗಳ ಗುಚ್ಛವನ್ನು ಅಪಾಯದ ಪಟ್ಟಿಯಿಂದ ಹೊರತೆಗೆದಿತ್ತು. ಜತೆಗೆ ಯುನೆಸ್ಕೊದ ತಂಡವೊಂದು ಹಂಪಿಗೆ ಭೇಟಿ ನೀಡಿದ್ದಾಗ ಇಂಥ ಸ್ಮಾರಕಗಳ ಬಳಿ ಭಾರಿ ವಾಹನ ಓಡಿಸಬಾರದು ಎಂದು ತಾಕೀತು ಮಾಡಿತ್ತು. ಹೀಗಾಗಿ ಈ ಹರೇ ಶಂಕರ ಬಾಗಿಲು ಮಂಟಪದ ಅನತಿ ದೂರದಲ್ಲೇ ಭಾರತೀಯ ಪುರಾತತ್ವ ಇಲಾಖೆ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿತ್ತು. ಈಗ ಕಬ್ಬಿಣದ ರಾಡ್‌ಗಳನ್ನು ತೆಗೆಯಲಾಗಿದ್ದು, ಪದೇ ಪದೆ ಈ ಬಗೆಯ ಅವಘಡಗಳು ಸಂಭವಿಸುತ್ತಿವೆ. ಶ್ರೀಕೃಷ್ಣ ದೇಗುಲದ ಬಳಿಯ ದ್ವಾರ ಬಾಗಿಲಿಗೂ ಪ್ರವಾಸಿ ವಾಹನಗಳು ಪದೇ ಪದೆ ಧಕ್ಕೆ ಮಾಡುತ್ತಿವೆ. ಹೀಗಾಗಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಬೇಕು ಎಂಬುದು ಚರಿತ್ರೆಪ್ರಿಯರ ಆಗ್ರಹವಾಗಿದೆ.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಟನೆಯ ರೌಡಿ ರಾಠೋಡ್‌ ಸಿನಿಮಾದ ಶೂಟಿಂಗ್‌ ವೇಳೆ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದರಿಂದ ಶೂಟಿಂಗ್‌ ಪ್ಯಾಕಪ್‌ ಆಗಿತ್ತು. ಆಗ ತೆಗೆದುಕೊಂಡ ಕಠಿಣ ನಿಯಮಗಳನ್ನು ಈಗ ಭಾರತೀಯ ಪುರಾತತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ ತೆಗೆದುಕೊಳ್ಳದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹಂಪಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್‌, ಜೋಡಿ ಮಾಡಿದ ಅವಾಂತರ ನೋಡಿ

ಈ ಬಗೆಯ ಘಟನೆಗಳು ಹಂಪಿಯಲ್ಲಿ ಪದೇ ಪದೆ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಮೌನಕ್ಕೆ ಶರಣಾಗುತ್ತಿವೆ. ಹಂಪಿ ಸ್ಮಾರಕಗಳ ವೀಕ್ಷಣೆಗೆ ದೇಶ-ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹಂಪಿಯ ಸ್ಮಾರಕಗಳ ಗುಚ್ಛವನ್ನು ಮುಂದಿನ ಪೀಳಿಗೆಗೆ ಸಹಜ ಸ್ಥಿತಿಯಲ್ಲಿ ಕಾಪಾಡಬೇಕು ಎಂದು ಯುನೆಸ್ಕೊ 1986ರಲ್ಲೇ ಹೇಳಿದೆ. ಹೀಗಿದ್ದರೂ ಇಲಾಖೆಗಳು ಎಚ್ಚೆತ್ತುಕೊಂಡು ಕೆಲಸ ನಿರ್ವಹಿಸದೇ ಇರುವುದು ಇಂಥ ಅವಘಡಗಳು ನಡೆಯುತ್ತಿವೆ.

ಇತಿಹಾಸ ಪ್ರಿಯರಿಗೆ ಬೇಸರ:

ಹಂಪಿ ಸ್ಮಾರಕಗಳ ರಕ್ಷಣೆಗಾಗಿಯೇ ಕೇಂದ್ರ ಸರಕಾರ ಪುರಾತತ್ವ ಇಲಾಖೆಯ ಪ್ರತ್ಯೇಕ ವಲಯವನ್ನೇ ನೀಡಿದೆ. ಹೀಗಿದ್ದರೂ ಸ್ಮಾರಕಗಳ ರಕ್ಷಣೆಗೆ ಮುನ್ನೆಚ್ಚರಿಕಾ ಕ್ರಮವಹಿಸದೇ ಇರುವುದು ಇತಿಹಾಸಪ್ರಿಯರಿಗೆ ಬೇಸರ ತರಿಸಿದೆ.
ಹರೇ ಶಂಕರ ಮಂಟಪದೊಳಗೆ ಬಸ್‌ ಸಿಲುಕಿ ಸ್ಮಾರಕಕ್ಕೆ ಧಕ್ಕೆಯಾಗಿರುವ ಕುರಿತು ವಿಚಾರಿಸಲು ಕನ್ನಡಪ್ರಭ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ಕಾಳಿಮುತ್ತು ಅವರನ್ನು ಸಂಪರ್ಕಿಸಿದರೆ, ಅವರು ಕರೆ ಸ್ವೀಕರಿಸಲಿಲ್ಲ. ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದರೂ ಇಲಾಖೆಗಳು ಮಾತ್ರ ಮೌನಕ್ಕೆ ಶರಣಾಗುತ್ತಿರುವುದು ಭಾರಿ ಚರ್ಚೆಗೂ ಕಾರಣವಾಗುತ್ತಿದೆ.

ಹಂಪಿ ಸ್ಮಾರಕಗಳನ್ನು ಸಹಜ ಸ್ಥಿತಿಯಲ್ಲಿ ಕಾಪಾಡಬೇಕು. ಐತಿಹಾಸಿಕ ಹಿನ್ನೆಲೆವುಳ್ಳ ಹರೇಶಂಕರ ಮಂಟಪಕ್ಕೆ ಧಕ್ಕೆಯಾಗಿರುವುದು ಅಕ್ಷಮ್ಯ ಅಪರಾಧ. ಇಂಥ ಸ್ಮಾರಕಗಳು ಅಧ್ಯಯನಕ್ಕೆ ಯೋಗ್ಯವಾಗಿವೆ. ಜತೆಗೆ ಮುಂದಿನ ಪೀಳಿಗೆಗೆ ನಮ್ಮ ಇತಿಹಾಸವನ್ನು ಕಟ್ಟಿ ಕೊಡಲು ಆಕರವಾಗಿವೆ. ಈ ಸ್ಮಾರಕಗಳನ್ನೇ ಕಳೆದುಕೊಂಡರೆ ಮುಂದಿನ ಪೀಳಿಗೆಗೆ ವಿಜಯನಗರದ ಗತ ವೈಭವ ಕಟ್ಟಿಕೊಡಲು ಆಗುವುದಿಲ್ಲ ಎಂದು ಕನ್ನಡ ವಿವಿ ಹಂಪಿ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ. ವಿರೂಪಾಕ್ಷ ಪೂಜಾರಹಳ್ಳಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios