Asianet Suvarna News Asianet Suvarna News

Insult to Ambedkar: ಬೆಂಗ್ಳೂರಲ್ಲಿ ದಲಿತರ ಬೃಹತ್‌ ರ‍್ಯಾಲಿ

*  ಜಿಲ್ಲಾ ನ್ಯಾ.ಮಲ್ಲಿಕಾರ್ಜುನ ವಿರುದ್ಧ ಆಕ್ರೋಶ
*  ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದಿಂದ ವಿಧಾನಸೌಧ-ಹೈಕೋರ್ಟ್‌ ಚಲೋ
*  ರ‍್ಯಾಲಿಯಲ್ಲಿ 50 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ
 

Dalits Held Protest In Bengaluru Condemned For Insult to Dr BR Ambedkar grg
Author
Bengaluru, First Published Feb 20, 2022, 8:13 AM IST | Last Updated Feb 20, 2022, 8:14 AM IST

ಬೆಂಗಳೂರು(ಫೆ.20):  ಗಣರಾಜ್ಯೋತ್ಸವ ಆಚರಣೆ ದಿನದಂದು ಡಾ. ಅಂಬೇಡ್ಕರ್‌(Dr BR Ambedkar) ಭಾವಚಿತ್ರ ತೆಗೆಯಿಸಿದ ರಾಯಚೂರು(Raichur) ಜಿಲ್ಲಾ ನ್ಯಾ.ಮಲ್ಲಿಕಾರ್ಜುನ ಗೌಡ ಪಾಟೀಲ ಅವರನ್ನು ಸೇವೆಯಿಂದ ವಜಾಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಶನಿವಾರ ನೂರಾರು ದಲಿತಪರ ಸಂಘಟನೆಗಳ(Pro-Dalit Organizations) ಮುಖಂಡರು ‘ವಿಧಾನಸೌಧ-ಹೈಕೋರ್ಟ್‌ ಚಲೋ’ ಪ್ರತಿಭಟನಾ ರ‍್ಯಾಲಿ(Rally) ನಡೆಸಿದರು.

‘ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ’ದಿಂದ ನಡೆದ ನಡೆದ ಬೃಹತ್‌ ರ‍್ಯಾಲಿಯ ನೇತೃತ್ವವನ್ನು ಮೈಸೂರು ಉರಿಲಿಂಗ ಪೆದ್ದಿ ಮಹಾಸಂಸ್ಥಾನ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ವಹಿಸಿದ್ದರು. ರ‍್ಯಾಲಿಯು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನವರೆಗೆ ಸಾಗಿತು. ನೂರಾರು ದಲಿತ ಸಂಘಟನೆಗಳ ಮುಖಂಡರು, ವಿವಿಧ ಜಿಲ್ಲೆಗಳಿಂದ ಬಂದಿದ್ದ ಸುಮಾರು 50 ಸಾವಿರಕ್ಕೂ ಅಧಿಕ ಕಾರ್ಯಕರ್ತರು(Activists) ರಾರ‍ಯಲಿಯಲ್ಲಿ ಪಾಲ್ಗೊಂಡಿದ್ದರು.

ಅಂಬೇಡ್ಕರ್‌ಗೆ ಅಪಮಾನ ಪ್ರಕರಣ, ರಾಯಚೂರು ನ್ಯಾಯಾಧೀಶ ವರ್ಗಾವಣೆ

ಖೋಡೆ ವೃತ್ತ, ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮಾರ್ಗವಾಗಿ ಸಾಗಿದ ಪ್ರತಿಭಟನಾಕಾರರ(Protest) ಗುಂಪು ಸ್ವಾತಂತ್ರ್ಯ ಉದ್ಯಾನಕ್ಕೆ ಸಮೀಪಿಸುತ್ತಿದ್ದಂತೆ ಪೊಲೀಸರು ವಿಧಾನಸೌಧದತ್ತ ಹೋಗದಂತೆ ತಡೆದರು. ನಂತರ ಪೊಲೀಸರೊಂದಿಗೆ(Police) ವಾಗ್ವಾದಕ್ಕಿಳಿದ ದಲಿತ ಮುಖಂಡರು, ಮುಖ್ಯಮಂತ್ರಿಗಳು ಸ್ಥಳಕ್ಕೆ ಆಗಮಿಸಿ ಬೇಡಿಕೆಗೆ ಸ್ಪಂದಿಸುವಂತೆ ಆಗ್ರಹಿಸಿದರು. ರಸ್ತೆಯುದ್ದಕ್ಕೂ ನಾಮಫಲಕ ಹಿಡಿದು ಕುಳಿತ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಸಚಿವ ಮುನಿರತ್ನ

ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸರ್ಕಾರದ ಪರವಾಗಿ ಹೋರಾಟಗಾರರ ಸ್ಥಳಕ್ಕೆ ತೋಟಗಾರಿಕೆ ಸಚಿವ ಮುನಿರತ್ನ(Muniratna) ಅವರು ಆಗಮಿಸಿ ಪ್ರತಿಭಟನಾನಿರತ ಮುಖಂಡರ ಮನವೊಲಿಕೆಗೆ ಯತ್ನಿಸಿದರು. ಆದರೆ ಸಚಿವರ ಆಗಮನಕ್ಕೆ ಆಕ್ರೋಶಗೊಂಡ ದಲಿತ ಸಂಘಟನೆಗಳ ಕಾರ್ಯಕರ್ತರು ಮುಖ್ಯಮಂತ್ರಿಗಳೇ ಸ್ಥಳಕ್ಕೆ ಬಂದು ಸಮಸ್ಯೆಗೆ ಬೇಡಿಕೆ ಈಡೇರಿಸಬೇಕು ಎಂದು ಪಟ್ಟು ಹಿಡಿದರು.

ಮನವಿ ಸಲ್ಲಿಕೆ: 

ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೊಂದಿಗೆ ಮಾತನಾಡಿದ ದಲಿತ ಮುಖಂಡರು, ಡಾ. ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾ.ಮಲ್ಲಿಕಾರ್ಜುನಗೌಡ ಪಾಟೀಲರನ್ನು ಸೇವೆಯಿಂದ ವಜಾಗೊಳಿಸಿ. ಅವರ ಮೇಲೆ ಎಫ್‌ಐಆರ್‌ ದಾಖಲಿಸಬೇಕು. ನ್ಯಾಯಾಂಗ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸಬೇಕು. ರಾಜ್ಯದ ಎಲ್ಲ ಹಂತದ ನ್ಯಾಯಾಲಯಗಳ ವಿಚಾರಣಾ ಕೊಠಡಿಗಳಲ್ಲಿ ಅಂಬೇಡ್ಕರ್‌ ಭಾವಚಿತ್ರ ಅಳವಡಿಸಲು ಹಾಗೂ ಎಲ್ಲ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕದಲ್ಲಿ ದಲಿತರಿಗೆ ಮೀಸಲಾತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.

ದಲಿತ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ, ದಲಿತ ಸೇನೆಯ ಬನಶಂಕರಿ ನಾಗು, ಜೈ ಭೀಮ್‌ನ ವೈ.ಎಸ್‌.ಬೇವೂರ್‌, ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾದ ಪಿಳ್ಳರಾಜು ಬೂಸಪ್ಪ, ಸಮತಾ ಸೈನಿಕ ದಳದ ಡಾ
ಜಿ.ಗೊವಿಂದಯ್ಯ, ದಲಿತ ಸಂಘರ್ಷ ಸಮಿತಿಯ ಅಣ್ಣಯ್ಯ ಹಾಗೂ ದಲಿತ ಮುಖಂಡರಾದ ಮಾವಳ್ಳಿ ಶಂಕರ್‌, ಬಿ.ಗೋಪಾಲ್‌, ಜಗನ್ನಾಥ್‌, ತಿಮ್ಮಯ್ಯ, ದಲಿತಪರ ಸಂಘಟನೆಗಳ ಸದಸ್ಯರು, ಕಾರ್ಯಕರ್ತರು, ಬೌದ್ಧ ಬಿಕ್ಕುಗಳು, ಮತ್ತಿತರರು ಭಾಗವಹಿಸಿದ್ದರು.

ಕಾಲ್ನಡಿಗೆಯಲ್ಲಿ ಬಂದ ಮೈಸೂರು ಶ್ರೀ

ಪ್ರತಿಭಟನೆಯ ನೇತೃತ್ವ ವಹಿಸಲು ಮೈಸೂರು ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮೈಸೂರಿನಿಂದ ಬೆಂಗಳೂರಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಫೆ.14ರಂದು ಮೈಸೂರಿನ ಟೌನ್‌ಹಾಲ್‌ ಮುಂಭಾಗದ ಡಾ. ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಯಿಂದ ಕಾಲ್ನಡಿಗೆ ಆರಂಭಿಸಿದ್ದರು. ವಿವಿಧ ಸಂಘಟನೆಗಳು ಮುಖಂಡರೊಂದಿಗೆ ಶನಿವಾರ ಬೆಳಗ್ಗೆ ಪ್ರತಿಭಟನಾ ಸ್ಥಳಕ್ಕೆ ಬಂದು ತಲುಪಿದರು.

Ambedkar Portrait Controversy ಕೋರ್ಟ್‌ನಲ್ಲಿ ರಾಷ್ಟ್ರೀಯ ಹಬ್ಬಕ್ಕೆ ಅಂಬೇಡ್ಕರ್‌ ಫೋಟೋ ಕಡ್ಡಾಯ!

ಕಾಮನ್‌ ಮ್ಯಾನ್‌ ಸಿಎಂ!

ದಲಿತ ಮುಖಂಡರ ಆಗ್ರಹಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖುದ್ದು ಪ್ರತಿಭಟನಾ ಸ್ಥಳ ಸ್ವಾತಂತ್ರ್ಯ ಉದ್ಯಾನ ಬಳಿ ಆಗಮಿಸಿದರು. ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸುವ ಮೂಲಕ ತಾವೊಬ್ಬ ಕಾಮನ್‌ ಮ್ಯಾನ್‌ ಮುಖ್ಯಮಂತ್ರಿ, ರಾಜ್ಯ ಸರ್ಕಾರ ಜನರಪವಾಗಿದೆ ಎಂಬುದನ್ನು ಸಾರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿಯೊಬ್ಬರು ಮುಷ್ಕರ, ಧರಣಿನಿರತ ಸ್ಥಳಗಳಿಗೆ ತೆರಳಿ ಮನವಿ ಸ್ವೀಕರಿಸಿದ ಉದಾರಹಣೆಗಳು ಇಲ್ಲ. ಇದಕ್ಕೆ ಅಪವಾದ ಎಂಬಂತೆ ಬೊಮ್ಮಾಯಿ ಅವರ ನಡೆಗೆ ಸ್ವತಃ ದಲಿತ ಮುಖಂಡರೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ದಲಿತ ಮುಖಂಡರ ಜತೆಗೆ ಮಾತುಕತೆ ನಡೆಸಿ, ನಿಮ್ಮ ಆಶಯದಂತೆ ಹೈಕೋರ್ಟ್‌ ಮುಖ್ಯ ನಾಯಮೂರ್ತಿಗಳ ಜತೆ ದಲಿತ ಮುಖಂಡರ ನಿಯೋಗ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಈ ಸಂಬಂಧ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದರು. ಈ ರೀತಿಯ ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆಯಾಗಲಿದೆ ಎಂದು ಮನವರಿಕೆ ಮಾಡಿ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸುವಲ್ಲಿ ಸಫಲರಾದರು.
 

Latest Videos
Follow Us:
Download App:
  • android
  • ios