ಮಂಡ್ಯ (ನ.10):  ಮೇಘಶ್ರೀ ಹತ್ಯೆ ಪ್ರಕ​ರ​ಣ​ದ ಆರೋ​ಪಿ​ಗ​ಳನ್ನು ಬಂಧಿಸದ ಪೊಲೀ​ಸ್‌ ಅಧಿ​ಕಾ​ರಿ​ಗಳ ಅಮಾ​ನ​ತ್ತಿಗೆ ಒತ್ತಾ​ಯಿಸಿ ದಲಿತ ಸಂಘರ್ಷ ಸಮಿತಿ ಕಾರ‍್ಯ​ಕರ್ತರು ನಗ​ರ​ದಲ್ಲಿ ಪ್ರತಿ​ಭ​ಟನೆ ನಡೆ​ಸಿ​ದರು.

ನಗ​ರದ ಜಿಲ್ಲಾ ಪೊಲೀಸ್‌ ಅಧೀ​ಕ್ಷ​ಕರ ಕಚೇರಿ ಬಳಿ ಸೇರಿದ ಕಾರ‍್ಯ​ಕರ್ತರು, ಕೆಲಕಾಲ ಧರಣಿ ನಡೆಸಿ ನಂತರ ಜಿಲ್ಲಾ​ಧಿ​ಕಾರಿ ಕಚೇರಿ ಬಳಿ ತೆರಳಿ ಧರಣಿ ಕುಳಿತರು.

ಮಳವಳ್ಳಿ ತಾಲ್ಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಪರಿಶಿಷ್ಟ ಜಾತಿಯ ಮಹಾದೇವಮ್ಮಳ ಪುತ್ರಿ ಮೇಘಶ್ರೀ ಹಾಗೂ ತಿರುಮಲಾಪುರದ ಸವರ್ಣೀಯ ಟಿ.ಕೆ.ಸ್ವಾಮಿ ಬೆಂಗಳೂರಿನಲ್ಲಿದ್ದಾಗ ಪರಸ್ಪರ ಪ್ರೀತಿಸಿ ಐದು ವರ್ಷದ ಹಿಂದೆ ಮದುವೆಯಾಗಿದ್ದರು. ಈ ದಂಪತಿ ತಿರುಮಲಾಪುರಕ್ಕೆ ಬಂದ ಕೆಲ ತಿಂಗಳ ಬಳಿಕ ಮೇಘಶ್ರೀಯ ಜಾತಿ ತಿಳಿದ ಟಿ.ಕೆ.ಸ್ವಾಮಿ ಕುಟುಂಬದ ಸದಸ್ಯರು ಮೇಘಶ್ರೀಯನ್ನು ಕೊಲೆ ಮಾಡಿದ್ದಾರೆ. ಈ ಅಮಾನವೀಯ ಘಟನೆ ಇತ್ತೀಚೆಗೆ ಮೇಘಶ್ರೀ ಕುಟುಂಬಕ್ಕೆ ತಿಳಿದ ಬಳಿಕ ಪಾಂಡವಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ ಎಂದು ಆರೋ​ಪಿ​ಸಿ​ದರು.

ಶಿಕ್ಷಕನ ಹೆಂಡ್ತಿ ಲವ್ವಿ-ಡವ್ವಿ : ಹೊಳೆದಂಡೇಲಿ ಅವನ ಜೊತೆ ಸಿಕ್ಕಿಬಿದ್ದು ದಾರುಣ ಅಂತ್ಯ ...

ಮೇಘಶ್ರೀ ಮರ್ಯಾದೆ ಗೇಡು ಹತ್ಯೆಯಾಗಿರುವುದಕ್ಕೆ ಸಾಕ್ಷಿಗಳಿದ್ದರೂ ಡಿವೈಎಸ್ಪಿ$ಅರುಣ್‌ನಾಗೇಗೌಡ ನೊಂದ ದಂಪತಿಗಳಿಗೆ ಸಮಾಧಾನ ಹೇಳಿ ನ್ಯಾಯ ಕೊಡಿಸುವ ಭರವಸೆ ನೀಡದೆ ಆರೋಪಿಗಳನ್ನು ಬಂಧಿಸುವ ಬದಲು ಕೇವಲ ಹೇಳಿಕೆಗಳನ್ನು ಪಡೆದು ಕೊಲೆಗಾರರು ನೆಮ್ಮದಿಯಾಗಿ ಮನೆಗೆ ತೆರಳುವಂತೆ ಮಾಡಿರುವುದು ಪೊಲೀಸ್‌ ವ್ಯವಸ್ಥೆಯನ್ನೇ ಸಂಶಯಿಸುವಂತೆ ಮಾಡಿದೆ ಎಂದು ದೂರಿ​ದರು.

ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿ​ಸಿ​ರುವ ಶ್ರೀರಂಗ​ಪ​ಟ್ಟಣ ಉಪ ವಿಭಾ​ಗದ ಡಿವೈ​ಎಸ್ಪಿ ಅರುಣ್‌ ನಾಗೇ​ಗೌಡ ಬದ​ಲಾಗಿ ಸಮರ್ಥ ಪೊಲೀಸ್‌ ಅಧಿ​ಕಾ​ರಿ​ಯೊ​ಬ್ಬ​ರನ್ನು ನೇಮಿಸಿ ಎಸ್‌ಪಿ ಅವರ ಕಣ್ಗಾ​ವ​ಲಿ​ನಲ್ಲೇ ಸೂಕ್ತ ತನಿ​ಖೆ ನಡೆ​ಸ​ಬೇಕು ಹಾಗೂ ಕೊಲೆ ಆರೋ​ಪಿ​ಗ​ಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರ​ಹಿ​ಸಿ​ದರು.

ಪ್ರತಿಭಟನೆಯಲ್ಲಿ ಎಂ.ಬಿ. ಶ್ರೀನಿ​ವಾಸ್‌, ಸುನಂದಾ ಜಯರಾಂ, ಚಂದ್ರ​ಶೇ​ಖರ್‌, ಮುದ್ದೇ​ಗೌಡ, ಸಂತೋಷ್‌, ಮಹಾ​ದೇ​ವಪ್ಪ, ಎನ್‌. ಪರ​ಮೇಶ್‌, ಚುಂಚಯ್ಯ, ಹುರು​ಗ​ಲ​ವಾಡಿ ರಾಮಯ್ಯ, ಪವನ್‌ಕು​ಮಾರ್‌, ದೇವ​ರಾಜು, ಯತೀಶ್‌, ಧರ್ಮಾತ್ಮ, ವೈರ​ಮುಡಿ, ಕೃಷ್ಣಪ್ಪ, ರವಿ, ಸೋಮ​ರಾಜ್‌, ಜನಾರ್ಧನ್‌ ಇತರರಿದ್ದರು.