ಸೋಮರಡ್ಡಿ ಅಳವಂಡಿ

ಕೊಪ್ಪಳ(ಏ.16):
ಕೊರೋನಾ ಮಹಾಮಾರಿಗೆ ಅಂಜಿ ಊರು ತೊರೆದು, ಹೊಲದಲ್ಲಿಯೇ 21 ದಿನಗಳ ವಾಸವನ್ನು ಪೂರ್ಣಗೊಳಿಸಿದ ಕುಟುಂಬವೊಂದು ಈಗ ಊರಿಗೆ ಮರಳಿದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ತೊಂಡಿಹಾಳ ಗ್ರಾಮದ ನಿವಾಸಿ ಹೇಮಂತ್‌ ದಳವಾಯಿ ಕುಟುಂಬದ 22 ಜನರು ಊರಿಂದ ಸುಮಾರು 4 ಕಿ.ಮೀ. ದೂರದಲ್ಲಿ ಇರುವ ಹೊಲದಲ್ಲಿಯೇ ಟೆಂಟ್‌ ಹಾಕಿಕೊಂಡು ಇದ್ದರು. ಪ್ರಕೃತಿಯ ಮಡಿಲಿನಲ್ಲಿದ್ದು ಇದೀಗ ಗ್ರಾಮಕ್ಕೆ ವಾಪಸ್ಸಾಗಿದ್ದಾರೆ.

ಲಾಕ್‌ಡೌನ್‌ ಘೋಷಣೆ ಆಗುತ್ತಿದ್ದಂತೆಯೇ ಗ್ರಾಮಕ್ಕೆ ಹೊರ ರಾಜ್ಯ, ಹೊರ ಜಿಲ್ಲೆಗಳಿಗೆ ದುಡಿಯಲು ಹೋಗಿದ್ದ ನೂರಾರು ಜನರು ವಾಪಸ್‌ ಬರಲು ಶುರು ಮಾಡಿದರು. ಗ್ರಾಮದ ಪ್ರಮುಖರು ಅವರ ಆರೋಗ್ಯ ತಪಾಸಣೆಗೆ ಒತ್ತಾಯಿಸಿದರು. ಹಲವರು ತಪಾಸಣೆಗೆ ಒಳಪಟ್ಟರು. ಇನ್ನೂ ಕೆಲವರು ಮಾಡಿಸಿಕೊಳ್ಳಲಿಲ್ಲ. ಇದರಿಂದ ಆತಂಕಗೊಂಡ ಈ ಕುಟುಂಬವೇ ಹೊಲದಲ್ಲಿ ಕೆಲ ದಿನ ವಾಸ್ತವ್ಯ ಮಾಡಲು ನಿರ್ಧರಿಸಿತು. ಈ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಆದಷ್ಟು ದೂರವಿರಿ ಎಂಬ ಪ್ರಧಾನಿ ಅವರ ಹೇಳಿಕೆಯನ್ನು ಪಾಲಿಸಿ ತಾವೇ ಸ್ವಯಂ ನಿರ್ಬಂಧ ಹೇರಿಕೊಂಡು ಗ್ರಾಮದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಹೊಲದಲ್ಲಿ ವಾಸ್ತವ್ಯ ಮಾಡಿದರು.

ಕೊರೋನಾ ಅಟ್ಟಹಾಸಕ್ಕೆ ನಲುಗಿದ ಅನ್ನದಾತ: ಕಟಾವಿಗೆ ಬಂದ ಹೂಕೋಸು ಹರಗಿದ ರೈತ

ಅಡುಗೆಯೂ ಹೊಲದಲ್ಲೇ:

ಹೊಲದಲ್ಲಿ ಟೆಂಟ್‌ ಹಾಕಿಕೊಂಡು, ಅಲ್ಲಿಯೇ ಅಡುಗೆ ಮಾಡಿಕೊಂಡು ಇದ್ದರು. ಹೊಲದಲ್ಲಿನ ಕೆಲಸ ಮಾಡುವುದು, ಇಲ್ಲದಿದ್ದರೆ ಟೆಂಟ್‌ನಲ್ಲಿಯೇ ವಿಶ್ರಾಂತಿ ಪಡೆಯುತ್ತಾ ಹಾಯಾಗಿ ಇದ್ದರು. ಹೇಮಂತ್‌ ದಳವಾಯಿ ಅವರ ಕುಟುಂಬದ ಹಿರಿಯರ, 6-7 ಮಕ್ಕಳು ಸೇರಿ 22 ಜನರು 21 ದಿನಗಳ ಕಾಲ ಹೊಲದಲ್ಲಿಯೇ ಇದ್ದರು. ಈಗ ದುಡಿಯಲು ಹೋಗಿದ್ದವರ ಕ್ವಾರಂಟೈನ್‌ ಅವಧಿ ಮಗಿದಿದೆ, ಲಾಕ್‌ಡೌನ್‌ ತೆರವಾಗುತ್ತದೆ ಎಂಬ ವಿಶ್ವಾಸದಲ್ಲಿ ಇದೀಗ ಗ್ರಾಮಕ್ಕೆ ಮರಳಿದ್ದಾರೆ.

ಮಹಾಮಾರಿ ಕೊರೋನಾ ಬಂದಿದ್ದು, ಇದರಿಂದ ಪಾರಾಗಲು ಸಾಮಾಜಿಕ ಅಂತರ ಬಹಳ ಮುಖ್ಯ. ಅಲ್ಲದೆ ಗುಳೆ ಹೋಗಿದ್ದವರು ಊರಿಗೆ ಬಂದಿದ್ದರಿಂದ ಆತಂಕವಾಗಿತ್ತು. ಹೀಗಾಗಿ, ಅನಿವಾರ್ಯವಾಗಿ ಹೊಲದಲ್ಲಿಯೇ ಇದ್ದೆವು ಎಂದು ಹೇಮಂತ ದಳವಾಯಿ ಹೇಳಿದ್ದಾರೆ.