ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಎಚ್.ಕೆ. ಪಾಟೀಲರ ಹೆಸರು 3 ಬೂತ್‌ಗಳಲ್ಲಿದೆ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಆಧಾರರಹಿತ ಎಂದು ತಳ್ಳಿಹಾಕಿದ ಪಾಟೀಲರು, ಅದು ಬೇರೆ ವ್ಯಕ್ತಿಗಳ ಹೆಸರು ಎಂದು ಸ್ಪಷ್ಟನೆ ನೀಡಿ ಕ್ಷಮೆಗೆ ಆಗ್ರಹಿಸಿದ್ದಾರೆ. ಆದರೆ, ದಾಖಲೆ ಆಧರಿಸಿ ಮಾತನಾಡಿದ್ದೇನೆ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಗದಗ: ಉತ್ತಮ ರಾಜಕೀಯ ಕುಟುಂಬದಿಂದ ಬಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಲವಾರು ದಶಕಗಳ ಕಾಲ ರಾಜಕೀಯದಲ್ಲಿ ಇದ್ದವರು. 3 ಬೂತ್‌ಗಳಲ್ಲಿ ನನ್ನ ಹೆಸರು ಇದೇ ಎಂದು ಅವರು ಮಾಡಿರುವ ಆರೋಪ ಸಂಪೂರ್ಣ ಆಧಾರರಹಿತ. ಅವರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಆಗ್ರಹಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೊಮ್ಮಾಯಿ ಅವರು ಯಾವುದೇ ದಾಖಲೆಗಳಿಲ್ಲದೆ ಸಾರ್ವಜನಿಕವಾಗಿ ಆರೋಪ ಮಾಡುವುದು ಶೋಭೆ ತರುವುದಿಲ್ಲ ಎಂದರು.
ಹುಲಕೋಟಿ ಗ್ರಾಮದಲ್ಲಿ ಒಂದೇ ಹೆಸರಿನ ಇಬ್ಬರು ಎಚ್.ಕೆ.ಪಾಟೀಲರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಅವರವರ ಭಾವಚಿತ್ರ ಹಾಗೂ ವಿವರಗಳು ಸ್ಪಷ್ಟವಾಗಿ ದಾಖಲಾಗಿವೆ. ಹುಲಕೋಟಿ ಗ್ರಾಮದ ಬೂತ್ ಸಂಖ್ಯೆ 143ರ ಕ್ರಮ ಸಂಖ್ಯೆ 183ರಲ್ಲಿ ನನ್ನ ಹೆಸರಿದೆ. ಅದೇ ಬೂತ್‌ನ ಕ್ರಮ ಸಂಖ್ಯೆ 161ರಲ್ಲಿ ತಮ್ಮ ಸಹೋದರ ಸಂಬಂಧಿಯಾಗಿರುವರ ಹೆಸರಿದ್ದು, ಅವರು ಕೂಡಾ ಎಚ್.ಕೆ.ಪಾಟೀಲ ಆಗಿದ್ದಾರೆ. ಅದೇ ರೀತಿ ಬೂತ್ ಸಂಖ್ಯೆ 153 ಅಸುಂಡಿ ಗ್ರಾಮಕ್ಕೆ ಸಂಬಂಧಿಸಿದ್ದರೂ ಅದನ್ನು ಹುಲಕೋಟಿ ಎಂದು ಉಲ್ಲೇಖಿಸಿದ್ದಲ್ಲದೇ ಕ್ರಮ ಸಂಖ್ಯೆ 393ರಲ್ಲಿ ಎಚ್.ಕೆ.ಪಾಟೀಲರ ಹೆಸರಿದೆ ಎಂದು ಆರೋಪಿಸಿದ್ದಾರೆ. ಆದರೆ ಆ ಹೆಸರು ನನ್ನದಲ್ಲ, ಅಲ್ಲಿಯೂ ಒಬ್ಬರು ಎಚ್.ಕೆ.ಪಾಟೀಲ ಎನ್ನುವ ಬೇರೆ ಮತದಾರರಿದ್ದಾರೆ. ಬೊಮ್ಮಾಯಿ ಅವರು ಈ ವಾಸ್ತವಾಂಶವನ್ನು ಪರಿಶೀಲಿಸದೇ ಇನ್ನೊಬ್ಬರ ಬಗ್ಗೆ ಹೇಳಿಕೆ ನೀಡಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದರು.
ನನ್ನ 40 ವರ್ಷ ಸಾರ್ವಜನಿಕ ಜೀವನವನ್ನು ಅವರೂ ನೋಡಿದ್ದಾರೆ. ಆದರೆ ಭಾನುವಾರ ಅವರು ವೈಯಕ್ತಿಕವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಿ ಆರೋಪಿಸಿರುವುದು ನೋವು ತಂದಿದೆ. ಪ್ರಜಾಪ್ರಭುತ್ವದಲ್ಲಿ ಸಿಎಂ ಹುದ್ದೆ ಅಲಂಕರಿಸಿದ ವ್ಯಕ್ತಿ ಯಾವುದೇ ವಿಷಯವನ್ನು ಹೇಳುವ ಮೊದಲು ವಾಸ್ತವಾಂಶಗಳನ್ನು ಪರಿಶೀಲಿಸಬೇಕು. ಆದರೆ, ಬೊಮ್ಮಾಯಿ ಅವರು ಸುಳ್ಳು ಆರೋಪ ಮಾಡಿದ್ದಾರೆ.
ದಾಖಲೆ ಇಟ್ಟುಕೊಂಡೇ ಹೇಳಿದ್ದೇನೆ, ಕ್ಷಮೆ ಪ್ರಶ್ನೆಯೇ ಇಲ್ಲ: ಬೊಮ್ಮಾಯಿ
ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಕುರಿತು ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ ಅವರ ಹೆಸರು 3 ಬೂತ್‌ಗಳಲ್ಲಿ ಇದೇ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಈ ಬಗ್ಗೆ ಮುಖ್ಯ ಚುನಾವಣಾ ಅಧಿಕಾರಿ ಪರಿಶೀಲನೆ ನಡೆಸಬೇಕು. ನಾನು ವೈಯಕ್ತಿಕವಾಗಿ ಆಪಾದನೆ ಮಾಡಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮತಪಟ್ಟಿಯಲ್ಲಿರುವ ಅಧಿಕೃತ ದಾಖಲೆಗಳ ಅನುಗುಣವಾಗಿಯೇ ಶನಿವಾರ ಎಚ್.ಕೆ.ಪಾಟೀಲ ಅವರ ಹೆಸರಿನಲ್ಲಿ 3 ಮತಗಳಿರುವ ಕುರಿತು ಹೇಳಿಕೆ ನೀಡಲಾಗಿತ್ತು. ಒಂದೇ ಕ್ಷೇತ್ರದಲ್ಲಿ, ಒಂದೇ ಊರಿನಲ್ಲಿ ಹಾಗೂ ಪಕ್ಕದ ಊರಿನಲ್ಲಿ ವ್ಯಕ್ತಿಯ ಹೆಸರು ಮತ್ತು ತಂದೆಯ ಹೆಸರು ಒಂದೇ ತರ ಇರುವುದರಿಂದ ಪಕ್ಷದ ಮುಖಂಡರು ಸಂಶಯ ವ್ಯಕ್ತಪಡಿಸಿದ್ದರು. ಆ ಮಾಹಿತಿಯ ಆಧಾರದ ಮೇಲೆಯೇ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದರು.
ಈ ಗೊಂದಲಕ್ಕೆ ಸಂಬಂಧಿಸಿದಂತೆ ಎಚ್.ಕೆ.ಪಾಟೀಲ ಅವರು ಭಾನುವಾರ ನೀಡಿರುವ ಸ್ಪಷ್ಟೀಕರಣವನ್ನು ಚುನಾವಣಾ ಅಧಿಕಾರಿಗಳು ಸೂಕ್ತವಾಗಿ ಮತ್ತು ಕೂಲಂಕಷವಾಗಿ ಪರಿಶೀಲಿಸಬೇಕು. ಇದು ಕೇವಲ ಎಚ್.ಕೆ.ಪಾಟೀಲ ಅವರಿಗೆ ಮಾತ್ರ ಸೀಮಿತವಾಗಿಲ್ಲ. ಒಂದೇ ಹೆಸರಿನಲ್ಲಿ 4 ರಿಂದ 5 ಮತಗಳಿರುವ ಹಲವಾರು ಪ್ರಕರಣಗಳಿದ್ದು, ಈಗಾಗಲೇ 3- 4 ಉದಾಹರಣೆಗಳನ್ನು ನೀಡಲಾಗಿದೆ. ಮ್ಯಾಪಿಂಗ್ ಮಾಡಿದ ನಂತರವೂ ಇಂತಹ ತಪ್ಪುಗಳು ಮರುಕಳಿಸುತ್ತಿರುವುದು ಗಂಭೀರ ವಿಚಾರ ಎಂದರು.
ವೈಯಕ್ತಿಕ ಆಪಾದನೆ ಮಾಡಿಲ್ಲ:
ನನ್ನ ಬಳಿ ಇದ್ದ ಮಾಹಿತಿಯನ್ನಷ್ಟೇ ಬಹಿರಂಗಪಡಿಸಿದ್ದೇನೆ ಹೊರತು, ಎಚ್.ಕೆ.ಪಾಟೀಲ ಅವರ ಮೇಲೆ ವೈಯಕ್ತಿಕವಾಗಿ ಯಾವುದೇ ಆಪಾದನೆ ಮಾಡಿಲ್ಲ. ಹೀಗಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕ್ಷಮೆ ಕೇಳುವಂತಹ ತಪ್ಪೇನೂ ನಡೆದಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.


