ಒಬ್ಬರ ಮನೆಗೆ ಮಾತ್ರ ಭೇಟಿ ನೀಡಿದ್ದೀರಿ; ಯಾರನ್ನು ಮೆಚ್ಚಿಸಲು ಸಿಎಂ ಆಗಿದ್ದೀರಿ? ಹೆಚ್‌ಡಿಕೆ ಗರಂ

  • ದಕ್ಷಿಣಕನ್ನಡದಲ್ಲಿ ನಡೆದಿರುವ ಮೂರು ಹತ್ಯೆಗಳ ಆರೋಪಿಗಳನ್ನು ಬಂಧಿಸಲು 4 ದಿನ ಗಡುವು ಕೊಟ್ಟ ಹೆಚ್‌ಡಿಕೆ 
  • ಆ.5ರೊಳಗೆ ಬಂಧಿಸದಿದ್ದರೆ ಸತ್ಯಾಗ್ರಹ,
  •  ಮೂರೂ ಸಂತ್ರಸ್ತರ ಕುಟುಂಬಕ್ಕೆ ತಲಾ 5 ಲಕ್ಷ ರು. ನೀಡಿದ ಕುಮಾರಸ್ವಾಮಿ
  • ಒಬ್ಬರ ಮನೆಗೆ ಮಾತ್ರ ಭೇಟಿ ನೀಡಿ ಯಾರನ್ನು ಮೆಚ್ಚಿಸಲು ಸಿಎಂ ಆಗಿದ್ದೀರಿ?
  • ಸಿಎಂ ಬಸವರಾಜ ಬೊಮ್ಮಾಯಿಗೆ ಹೆಚ್‌ಡಿಕೆ ಪ್ರಶ್ನೆ
Dakshina kannada murder casees HD kumaraswamy  visited the houses of the three victims rav

ಮಂಗಳೂರು (ಆ.1) : ದಕ್ಷಿಣ ಕನ್ನಡದಲ್ಲಿ ನಡೆದ ಮೂರೂ ಹತ್ಯೆ ಪ್ರಕರಣಗಳ ನಿಜವಾದ ಆರೋಪಿಗಳ ಬಂಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ನಾಲ್ಕು ದಿನಗಳ ಗಡುವು ನೀಡಿದ್ದಾರೆ. ಆ.5ರೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಸರ್ಕಾರ ವಿಫಲವಾದರೆ ನಾನೇ ಬಂದು ಮಂಗಳೂರಿನಲ್ಲಿ ಸತ್ಯಾಗ್ರಹ ಹೂಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಹತ್ಯೆಗೀಡಾದ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು(Praveen Nettaru), ಮಸೂದ್‌, ಸುರತ್ಕಲ್‌(Masood suratkal) ಮಂಗಲಪೇಟೆಯ ಮಹಮ್ಮದ್‌ ಫಾಝಿಲ್‌(Mohmed Fazil) ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದ ಅವರು ಬಳಿಕ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಂದಕ ಹೆಚ್ಚಿಸಿದ ಸಿಎಂ: ಹತ್ಯೆಯಾದ ಬಳಿಕ ದ.ಕ. ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಏನು ಸಾಧನೆ ಮಾಡಿದ್ದಾರೆ? ಎರಡೂ ಸಮುದಾಯದ ನಡುವಿನ ಕಂದಕ ಸರಿಪಡಿಸುವ ಹಾಗೂ ಇಂಥ ಸರಣಿ ಹತ್ಯೆ ನಡೆಯದಂತೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಸಿಎಂ ಕೇವಲ ಒಬ್ಬರ ಮನೆಗೆ ಮಾತ್ರ ಹೋಗಿ ಹಿಂದೂ- ಮುಸ್ಲಿಮರ ನಡುವಿನ ಕಂದಕವನ್ನು ಇನ್ನಷ್ಟುಹೆಚ್ಚಿಸಿದ್ದಾರೆ. ಅಲ್ಲದೆ, ಸಿಎಂ ಮಂಗಳೂರಿನಲ್ಲಿ ಇರುವಾಗಲೇ ಇನ್ನೊಂದು ಹತ್ಯೆ ಕೂಡ ನಡೆದಿದೆ. ಆವತ್ತೇ ಸಿಎಂ ಅಲ್ಲಿಗೆ ಭೇಟಿ ನೀಡಿ ಆ ಸಮಾಜಕ್ಕೆ ಸ್ಥೈರ್ಯ ತುಂಬಬೇಕಿತ್ತು. ಯಾರನ್ನು ಮೆಚ್ಚಿಸಲು ನೀವು ಸಿಎಂ ಆಗಿದ್ದೀರಿ ಎಂದು ಕುಮಾರಸ್ವಾಮಿ ಹರಿಹಾಯ್ದರು.

Praveen Nettaru Murder Case: ಹತ್ಯೆ ಖಂಡಿಸಿ ಪ್ರತಿಭಟನೆ, ಮಾನವ ಸರಪಳಿ ರಚನೆ

‘ಸುರತ್ಕಲ್‌ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಕಾರ್ಯಕರ್ತರ ತನಿಖೆಗೆ ಬಂದರೆ ಠಾಣೆಗೆ ಬಂದು ಧರಣಿ ಮಾಡುತ್ತೇನೆ’ ಎಂದು ಅಲ್ಲಿನ ಶಾಸಕರು ಹೇಳಿದ್ದಾರೆ. ಹೀಗೆ ಹೇಳಿದರೆ ಪೊಲೀಸರು ಏನ್‌ ಮಾಡಬೇಕು? ಬಡವರ ಮಕ್ಕಳ ನರಮೇಧ ಮಾಡಿ ಅಂತ ನಿಮಗೆ ಜನ ಓಟು ಹಾಕಿದ್ರಾ ಎಂದು ಪ್ರಶ್ನಿಸಿದರು.

ಡಿಜಿಪಿ ಭೇಟಿ ನೀಡಿಲ್ಲ: ಪ್ರವೀಣ್‌ ನೆಟ್ಟಾರು ಹತ್ಯೆಗೆ ಕಾರಣ, ಯಾರು ಮಾಡಿದ್ದು ಎನ್ನುವ ಮಾಹಿತಿ ಇಲ್ಲ. ಫಾಝಿಲ್‌ ಕೊಲೆ ಕೃತ್ಯಕ್ಕೆ ಬಳಸಿದ ಕಾರು ಹಾಗೂ ಅದರ ಮಾಲೀಕ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ಘಟನೆ ನಡೆದ ದಿನವೇ ಸ್ಥಳಕ್ಕೆ ಬರಬೇಕಿತ್ತು. ಬೆಂಗಳೂರಿನಲ್ಲಿ ಏನು ಘನಂದಾರಿ ಕೆಲಸ ಇತ್ತು? ಟ್ರಾನ್ಸ್‌ಫರ್‌ ಮಾಡುವ ಹಣದ ವ್ಯವಹಾರ ಇತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಘಟನೆ ನಡೆದು ಹಲವು ದಿನಗಳ ಬಳಿಕ ಈಗ ಡಿಜಿಪಿ ಬಂದಿದ್ದಾರೆ, ಕೊಲೆಗೀಡಾದ ಯುವಕರ ಮನೆಗಳಿಗೆ ಭೇಟಿ ನೀಡಿ ಪೊಲೀಸರಿಗೆ ಸೂಕ್ತ ಸೂಚನೆ ನೀಡುತ್ತಾರೆ ಅಂದುಕೊಂಡಿದ್ದೆ. ಆದರೆ ಇಲ್ಲಿಗೆ ಬಂದರೂ ಸಂತ್ರಸ್ತರ ಮನೆಗಳಿಗೆ ಭೇಟಿ ಯಾಕೆ ನೀಡಿಲ್ಲ? ಆರೆಸ್ಸೆಸ್‌ ಮತ್ತು ಬೇರೆ ಸಂಘಟನೆಗಳ ಸೂಚನೆಗಳನ್ನು ನೀಡಿ ಹೋಗಲು ಬಂದಿದ್ದಾ ಎಂದು ಖಾರವಾಗಿ ಪ್ರಶ್ನಿಸಿದರು.

ಮಂತ್ರಿಗಳ ಮಕ್ಕಳ ಕೊಲೆಯಾಗಲ್ಲ: ದ.ಕ. ಜಿಲ್ಲೆ ಶಿಕ್ಷಣ ಕಾಶಿ ಮತ್ತು ಧಾರ್ಮಿಕ ಸ್ಥಳ ಇರುವ ಜಾಗ. ಬೆಂಗಳೂರನ್ನು ಮೀರಿಸುವಂತೆ ಆರ್ಥಿಕ ಚಟುವಟಿಕೆ ನಡೆಸುವ ಜಿಲ್ಲೆ ಇದು. ಆದರೆ ಸುಮಾರು 15 ವರ್ಷದಿಂದ ಇಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತಿದೆ. ಹೂಡಿಕೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಇಲ್ಲಿ ರಾಜಕಾರಣಿಗಳ ಮಕ್ಕಳು, ಮಂತ್ರಿಗಳ ಮಕ್ಕಳು, ಮುಂಚೂಣಿ ನಾಯಕರ ಮಕ್ಕಳ ಕೊಲೆಯಾಗಿಲ್ಲ. ಕೊಲೆಯಾಗುತ್ತಿರುವವರು ಬಡವರ ಮಕ್ಕಳು ಎಂದು ಹೇಳಿದರು.

ಪ್ರಕರಣಗಳನ್ನ NIAಗೆ ಒಪ್ಪಿಸಲು ಒತ್ತಾಯಿಸೋದು ಯಾಕೆ.? ಹೇಗಿರುತ್ತೆ ಇವರ ಆಪರೇಷನ್..?

ತಾರತಮ್ಯ ಸಲ್ಲದು: ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ(CM Ibrahim) ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಮೂರು ಸಾವು ಸಂಭವಿಸಿದಾಗ ಮುಖ್ಯಮಂತ್ರಿ ಕನಿಷ್ಠ ಮಾನವೀಯತೆ ದೃಷ್ಟಿಯಿಂದಲಾದರೂ ಎಲ್ಲರ ಮನೆಗೆ ಹೋಗಿಲ್ಲ. ಧಾರವಾಡದಲ್ಲಿ ಮುಸ್ಲಿಮ್‌ ವ್ಯಕ್ತಿಯೊಬ್ಬರ ಸಾವು ಸಂಭವಿಸಿದಾಗಲೂ ಒಬ್ಬ ಮಂತ್ರಿ ಹೋಗಿಲ್ಲ. ಡ್ಯೂಟಿಯಲ್ಲಿ ಸಾವಿಗೀಡಾದ ಮುಸ್ಲಿಂ ಸೈನಿಕನ ಮನೆಗೆ ಒಬ್ಬ ಮಂತ್ರಿಯೂ ಹೋಗಿಲ್ಲ. ಇಂಥ ತಾರತಮ್ಯ ನೀತಿ ಸರ್ಕಾರಕ್ಕೆ ಶೋಭೆಯಲ್ಲ ಎಂದು ಹೇಳಿದರು.

ಜೆಡಿಎಸ್‌ ಮುಖಂಡರಾದ ಬಿ.ಎಂ. ಫಾರೂಕ್‌, ಭೋಜೇಗೌಡ, ಎಂ.ಬಿ. ಸದಾಶಿವ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios