ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕಾರು: ಮಾನವೀಯತೆ ಮೆರೆದ ದ.ಕ ಜಿಲ್ಲಾಧಿಕಾರಿ
* ಗಾಯಾಳುಗಳ ರಕ್ಷಣೆಗೆ ಧಾವಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ
* ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದ್ದ ಕಾರು
* ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ನಡೆದ ಘಟನೆ
ಬೆಳ್ತಂಗಡಿ(ಮೇ.26): ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದು ಕಾರಿನಲ್ಲಿದ್ದ ಮಹಿಳೆಯ ತಲೆಗೆ ಗಾಯವಾಗಿದ್ದು ತಕ್ಷಣ ಹಿಂಬದಿಯಿಂದ ಬರುತ್ತಿದ್ದ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ನೋಡಿ ರಕ್ಷಣೆಗೆ ಧಾವಿಸಿದ ಘಟನೆ ಬುಧವಾರ ಸಂಜೆ ಲಾಯಿಲ ಗ್ರಾಮದ ಕಾಶಿಬೆಟ್ಟಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೋಡುವ ರಭಸದಲ್ಲಿ ತುಮಕೂರು ಜಿಲ್ಲೆಯವರಿಗೆ ಸೇರಿದ ಕಾರು ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದಿದ್ದು ಕಾರಿನಲ್ಲಿ ನಾಲ್ಕು ಜನ ಇದ್ದು ಅದರಲ್ಲಿ ಮಹಿಳೆಯ ತಲೆಗೆ ಗಾಯವಾಗಿತ್ತು. ಅದೆ ದಾರಿಯಲ್ಲಿ ಚಾರ್ಮಾಡಿ ಕಡೆ ಹೋಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸ್ಥಳಕ್ಕೆ ಹೋಗಿ ವಿಚಾರಿಸಿದಾಗ ಮಹಿಳೆ ಮಮತಾ (36) ತಲೆಗೆ ಗಾಯವಾಗಿತ್ತು. ತಕ್ಷಣ ಜೊತೆಯಲ್ಲಿ ಇದ್ದ ಬೆಳ್ತಂಗಡಿ ತಹಸೀಲ್ದಾರ್ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದರು.
Mangaluru ಮಸೀದಿಯಲ್ಲಿ ದೈವೀ ಶಕ್ತಿ ಇತ್ತೆಂದ ತಾಂಬೂಲ ಪ್ರಶ್ನೆ
ಅದರಂತೆ ತಹಸೀಲ್ದಾರ್ ಮಹೇಜ್ ಜೆ. ಅವರ ವಾಹನ ಚಾಲಕ ಸಂತೋಷ್ ಕುಮಾರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ವಾಪಸ್ ಕಾರು ಬಿದ್ದ ಜಾಗಕ್ಕೆ ಕರೆತಂದು ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಚಾಲಕ ಸಂತೋಷ್ ಕುಮಾರ್ ಜೊತೆ ಕಂದಾಯ ನಿರೀಕ್ಷಕ ಪ್ರತೀಷ್, ವಿ.ಎ. ನಾರಾಯಣ ಕುಲಾಲ್ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.
ತುಮಕೂರು ಜಿಲ್ಲೆಯವರಾದ ನಾಲ್ಕು ಜನ ಮಗಳನ್ನು ಅಳ್ವಾಸ್ ಕಾಲೇಜಿಗೆ ಸೇರಿಸಿ ವಾಪಸ್ ಚಾರ್ಮಾಡಿ ಘಾಟ್ ಅಗಿ ಊರಿಗೆ ಮರಳುತ್ತಿದ್ದಾಗ ಕಾಶಿಬೆಟ್ಟಿನಲ್ಲಿ ಈ ಘಟನೆ ನಡೆದಿದೆ.