ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಂ.ಸಿ.ಸುಧಾಕರ್: ಕೃಷಿಗೆ ನಿತ್ಯ 5 ತಾಸು ವಿದ್ಯುತ್ ಪೂರೈಕೆ
ಕೃಷಿ ಪಂಪ್ ಸೆಟ್‌ಗಳಿಗೆ ಪ್ರತಿ ನಿತ್ಯ ತ್ರೀ ಪೇಸ್ 5 ತಾಸು ವಿದ್ಯುತ್ ಪೂರೈಕೆ ಮಾಡಲು ಜಿಲ್ಲಾಡಳಿತ ಕ್ರಮವಹಿಸಿದೆ. ರೈತರು ಆತಂಕ ಪಡಬಾರದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರೈತರಲ್ಲಿ ಮನವಿ ಮಾಡಿದರು.
ಚಿಕ್ಕಬಳ್ಳಾಪುರ (ಅ.21): ಕೃಷಿ ಪಂಪ್ ಸೆಟ್‌ಗಳಿಗೆ ಪ್ರತಿ ನಿತ್ಯ ತ್ರೀ ಪೇಸ್ 5 ತಾಸು ವಿದ್ಯುತ್ ಪೂರೈಕೆ ಮಾಡಲು ಜಿಲ್ಲಾಡಳಿತ ಕ್ರಮವಹಿಸಿದೆ. ರೈತರು ಆತಂಕ ಪಡಬಾರದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರೈತರಲ್ಲಿ ಮನವಿ ಮಾಡಿದರು. ನಗರ ಹೊರವಲಯದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿವಿಧ ವಿದ್ಯುತ್ ಮಾರ್ಗಗಳಿಂದ ವಿದ್ಯುತ್ ಪೂರೈಸಲಾಗುತ್ತಿದೆ ಎಂದರು.
ವಿದ್ಯುತ್ ಕೊರತೆ, ಬೇಡಿಕೆ ಹೆಚ್ಚು: ಪ್ರಸ್ತುತ ವರ್ಷದಲ್ಲಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಬಳಕೆದಾರರ ಬೇಡಿಕೆಯು ದುಪ್ಪಟ್ಟು ಹೆಚ್ಚಿದೆ. ಪ್ರತಿವರ್ಷ ಜನವರಿ ಮಾಹೆಗಳಲ್ಲಿ ಬರುವ ವಿದ್ಯುತ್ ಬೇಡಿಕೆ ಈ ವರ್ಷ ಆಗಸ್ಟ್ ಮಾಹೆಯಿಂದಲೆ ಬಂದಿದೆ, ಇದೇ ಸಮಯದಲ್ಲಿ ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆ ನಡುವೆ ಅಂತರ ಹೆಚ್ಚಾಗಿದೆ. ಪವನ ವಿದ್ಯುತ್ ಉತ್ಪಾದನೆ ಸಹ ಕಡಿಮೆ ಆಗಿರುವುದರಿಂದ ಲೋಡ್ ಶೆಡ್ಡಿಂಗ್ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಡಿಕೆಶಿ ಮೇಲೆ ಸಿಬಿಐ ತನಿಖೆ ರಾಜಕೀಯ ಪ್ರೇರಿತ: ವೀರಪ್ಪ ಮೊಯ್ಲಿ
ಜಿಲ್ಲೆಯಲ್ಲಿನ ರೈತರು ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ 3 ತಾಸು, ರಾತ್ರಿ ವೇಳೆ 2 ತಾಸು ವಿದ್ಯುತ್ ಪ್ರಸರಣ ಮಾಡಲು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ 3+2 ತಾಸುಗಳ ಮಾದರಿಯಲ್ಲಿ ಒಟ್ಟು 5 ತಾಸು ತ್ರಿಪೇಸ್ ವಿದ್ಯುತ್ ಪೂರೈಸಲಾಗುವುದು. ಒಟ್ಟಾರೆ 5 ತಾಸುಗಳ ವಿದ್ಯುತ್ ಪೂರೈಕೆಯಲ್ಲಿ ವೆತ್ಯಯ ಆಗದಂತೆ ನಿಗಾವಹಿಸಲಾಗುವುದು, ಈ ಮಾದರಿಯಲ್ಲಿ ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆಗೆ ಎಲ್ಲ ರೈತರು ಸಹಕಾರ ನೀಡಬೇಕು ಎಂದು ಕೋರಿದರು.
ಅಧಿಕಾರಿಗಳೊಂದಿಗೆ ಸಭೆ: ಪ್ರತಿ ಜಿಲ್ಲೆಯ ವಿವಿಧ ವರ್ಗದ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿರುವ ಕುರಿತು ಮೇಲ್ವಿಚಾರಣೆ ನಡೆಸಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸದಸ್ಯತ್ವದೊಂದಿಗೆ ಸಮಿತಿಯನ್ನು ಸರ್ಕಾರ ರಚಿಸಿದ್ದು ಅದರಂತೆ ನಮ್ಮ ಜಿಲ್ಲೆಯಲ್ಲಿ ಇಂದು ಸಭೆ ನಡೆಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿರುವುದಾಗಿ ತಿಳಿಸಿದರು.
ನ. 1 ರಿಂದ ಪ್ಲಾಸ್ಟಿಕ್ ನಿಷೇಧ: ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಕಳೆದ ಕೆಲವು ತಿಂಗಳುಗಳಿಂದ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿ, ಜಿಲ್ಲೆಯ ವರ್ತಕರು, ವ್ಯಾಪಾರಿಗಳೊಂದಿಗೆ ಸಭೆ ನಡೆಸಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ಸೂಚಿಸಲಾಗಿದೆ. ಜೊತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಮನವೊಲಿಸುವ ಕೆಲಸವನ್ನು ಸಹ ಮಾಡಲಾಗಿದೆ. ನವೆಂಬರ್ 1ರಿಂದ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಜಿಲ್ಲೆಯ ಸಮಸ್ತ ಜನತೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಜಿಲ್ಲಾಡಳಿತ ಬಹಳ ಗಂಭೀರವಾಗಿ ಪರಿಗಣಿಸಿದೆ, ನಿಷೇಧಿತ ಪ್ಲಾಸ್ಟಿಕ್ ಅನ್ನು ಯಾರೂ ಬಳಸುವಂತಿಲ್ಲ. ಸಾರ್ವಜನಿಕರು ಸಹ ಕಸವನ್ನು ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು. ಬ್ಲಾಕ್ ಸ್ಪಾಟ್‌ಗಳಲ್ಲಿ ಕಸ ಎಸೆದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸಿಬ್ಬಂದಿ ನಿಯೋಜಿಸಿ ಕಸ ಎಸೆಯುವವರ ಮೇಲೆ ನಿಗಾ ಇಡಲಾಗುತ್ತದೆ. ಬ್ಲಾಕ್ ಸ್ಪಾಟ್ ಗಳಲ್ಲಿ ಕಸ ಎಸೆಯಲು ಬಂದವರಿಗೆ ದಂಡ ವಿಧಿಸುವ ಜೊತೆಗೆ ಕಸವನ್ನು ಅವರ ಮನೆಯ ಹತ್ತಿರ ತೆಗೆದುಕೊಂಡು ಹೋಗಿ ಕಸವನ್ನು ಎಸೆದವರಿಂದಲೇ ಹಸಿ ಹಾಗೂ ಒಣ ಕಸವನ್ನು ವಿಂಗಡಿಸಿ ಕಸ ಸಂಗ್ರಹ ವಾಹನಗಳಿಗೆ ಕೊಡಿಸುವ ಪ್ರಯತ್ನವನ್ನು ಮಾಡಲಾಗುತ್ತದೆ ಎಂದರು.
ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಇವರೆಲ್ಲಾ ಚಿಗುರುತ್ತಾರೆ: ಭಗವಾನ್ ವಿರುದ್ಧ ಸುಧಾಕರ್ ಆಕ್ರೋಶ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್,ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಜಿ.ಪಂ.ಉಪಕಾರ್ಯದರ್ಶಿ ಡಾ.ಎನ್.ಭಾಸ್ಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.