Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಹೆದ್ದಾರಿ ಅಗಲೀಕರಣಕ್ಕೆ ಮರಗಳ ಮಾರಣ ಹೋಮ..!

ನೂರಾರು ವರ್ಷಗಳಿಂದ ಇದ್ದ ಬೃಹತ್‌ ಮರಗಳು ಹಾಗೂ ಅರಣ್ಯ ಇಲಾಖೆ ಕಳೆದ ಮೂರ್ನಾಲ್ಕು ವರ್ಷಗಳಿಂದ ರಸ್ತೆಯ ಎರಡೂ ಬದಿಯಲ್ಲಿ ನೆಟ್ಟು ಪೋಷಣೆ ಮಾಡಿದ್ದ ಗಿಡಗಳ ಹನನವಾಗುತ್ತಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.
 

Cutting of Trees for Highway Widening in Chikkaballapura grg
Author
First Published Aug 8, 2023, 11:15 PM IST

ದಯಾಸಾಗರ್‌ ಎನ್‌.

ಚಿಕ್ಕಬಳ್ಳಾಪುರ(ಆ.08):  ಇಲ್ಲಿ ನಿರ್ಮಾಣವಾಗುತ್ತಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-234ರ ಅಗಲೀಕರಣಕ್ಕಾಗಿ ರಸ್ತೆ ಬದಿ ಅರಣ್ಯ ಇಲಾಖೆ ಬೆಳೆಸಿದ್ದ ಸಾವಿರಾರು ಮರ, ಗಿಡಗಳು ಬಲಿಯಾಗುತ್ತಿವೆ.
ನೂರಾರು ವರ್ಷಗಳಿಂದ ಇದ್ದ ಬೃಹತ್‌ ಮರಗಳು ಹಾಗೂ ಅರಣ್ಯ ಇಲಾಖೆ ಕಳೆದ ಮೂರ್ನಾಲ್ಕು ವರ್ಷಗಳಿಂದ ರಸ್ತೆಯ ಎರಡೂ ಬದಿಯಲ್ಲಿ ನೆಟ್ಟು ಪೋಷಣೆ ಮಾಡಿದ್ದ ಗಿಡಗಳ ಹನನವಾಗುತ್ತಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

ಚತುಷ್ಪಥವಾಗಿ ಮೇಲ್ದರ್ಜೆಗೆ

ತುಮಕೂರು ಜಿಲ್ಲೆಯಿಂದ ಗೌರಿಬಿದನೂರು ತಾಲೂಕಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾದಿಂದ ಮಧುಗಿರಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಮತ್ತು ಕೋಲಾರ ಜಿಲ್ಲೆಯ ಶ್ರೀನಿವಾಸ ಪುರ ಮುಳಬಾಗಿಲು ಮೂಲಕ ಬೆಂಗಳೂರು-ಚಿತ್ತೂರು ಹೆದ್ದಾರಿ ರಸ್ತೆಯಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಸ್ತುತ ದ್ವಿಪಥ ರಸ್ತೆಯಾಗಿರುವ ಇದನ್ನು ಈಗ ಚತುಷ್ಪಥವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
ರಸ್ತೆ ಅಗಲೀಕರಣವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದ ಮೇರೆಗೆ ನಡೆಯುತ್ತಿದೆ. ಶತಮಾನಗಳಿಂದಲೂ ರಸ್ತೆಯ ಎರಡೂ ಬದಿಯಲ್ಲಿ ಬೆಳೆದು ನಿಂತ ಮರಗಳು ಉತ್ತಮ ವಾತಾವರಣಕ್ಕೆ ಕಾರಣವಾಗಿದ್ದವು. ಜತೆಗೆ ವಾಹನ ಸವಾರರು ಮತ್ತು ಪಾದಾಚಾರಿಗಳಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಹಾಗೂ ಹಲವಾರು ಪಕ್ಷಿಗಳಿಗೆ ಆಶ್ರಯ ನೀಡುತ್ತಿದ್ದವು. ಆದರೆ ಏಕಾಏಕಿ ರಸ್ತೆ ಅಗಲೀಕರಣದಿಂದಾಗಿ ಬೃಹತ್‌ ಮರಗಳ ಬುಡಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ.

ಗ್ಯಾರಂಟಿ ಯೋಜನೆಯಿಂದ ಜನರ ಬದುಕಿನಲ್ಲಿ ಬದಲಾವಣೆ: ಸಚಿವ ಎಂ.ಸಿ.ಸುಧಾಕರ್‌

ರಸ್ತೆ ಬದಿ ಗಿಟ ನೆಟ್ಟು ಬೆಳೆಸಲಿ

ಪರಿಸರವಾದಿ ಚೌಡಪ್ಪ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಶೀಘ್ರ ಕಾರ್ಯಪ್ರವೃತ್ತರಾಗಿ ಮಾರಣ ಹೋಮಕ್ಕೆ ಬಲಿಯಾದ ಮರಗಳಿಗೆ ರಸ್ತೆ ಎರಡೂ ಬದಿಯಲ್ಲಿ ಪರ್ಯಾಯವಾಗಿ ಗಿಡಗಳನ್ನು ನೆಟ್ಟು ಪೋಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ರಸ್ತೆ ಅಗಲೀಕರಣದ ಹೆಸರಿನಲ್ಲಿ ಮರ, ಗಿಡಗಳನ್ನು ತೆರವುಗೊಳಿಸುತ್ತಿರುವುದು ನೋವಿನ ಸಂಗತಿ. ರಸ್ತೆ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವ ಎಂಜಿನಿಯರ್‌ ಜತೆ ಈ ಕುರಿತು ಚರ್ಚಿಸಲಾಗಿದ್ದು, ಗಿಡಗಳನ್ನು ಜೋಪಾನವಾಗಿ ತೆರವುಗೊಳಿಸಿ ಪುನಃ ಅವುಗಳನ್ನು ರಸ್ತೆಯ ಪಕ್ಕದಲ್ಲಿ ಗುಂಡಿ ತೋಡಿ ನೆಡುವಂತೆ ತಿಳಿಸಲಾಗಿದೆ ಎಂದು ಗೌರಿಬಿದನೂರು ತಾಲೂಕು ವಲಯದ ಅರಣ್ಯ ಇಲಾಖೆ ಅಧಿಕಾರಿ ವೈ. ಚೇತನ್‌ ತಿಳಿಸಿದರು.

ಜಿಲ್ಲೆಯ ಚಿಂತಾಮಣಿಯಿಂದ ಆಂಧ್ರಪ್ರದೇಶದ ಹಿಂದೂಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರ ವಿಸ್ತರಣೆಗೆ ಮರಗಳ ತೆರವು ಕಾರ್ಯಾಚರಣೆ ಭರದಿಂದ ನಡೆದಿದೆ.ತಾಲೂಕು ವ್ಯಾಪ್ತಿಯ ಹೆದ್ದಾರಿ ಬದಿಯ ಮರಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಮರಗಳನ್ನು ಕಡಿಯಲು ಮತ್ತು ಸಾಗಿಸಲು ಅನುಮತಿ ನೀಡಿದೆ. ನೂರಾರು ಬೃಹತ್‌ ಮರಗಳು ಕೊಡಲಿ ಪೆಟ್ಟಿಗೆ ಬಲಿಯಾಗಲಿವೆ.

ಚಿಕ್ಕಬಳ್ಳಾಪುರ: ದಾಖಲೆ ತಿದ್ದಿ ಕೋಟ್ಯಂತರ ರೂ. ಸರ್ಕಾರಿ ಭೂಮಿ ಕಬಳಿಕೆ..!

1 ಮರಕ್ಕೆ ಪರ್ಯಾಯವಾಗಿ 4 ಗಿಡ ಬೆಳೆಸಲಿ

ನ್ಯಾಷನಲ್‌ ಹೂಮನ್‌ ರೈಟ್ಸ್‌ ಕಲ್ಚರ್‌ ಆಂಡ್‌ ನೆಚರ್‌ ಡೆವೆಲಪ್‌ಮೆಂಟ್‌ ಟ್ರಸ್ಟ್‌ನ ದಕ್ಷಿಣ ಭಾರತದ ಅಧ್ಯಕ್ಷ ಜಿ.ಭಾಸ್ಕರ್‌ರೆಡ್ಡಿ ಪತ್ರಿಕೆಯೊಂದಿಗೆ ಮಾತನಾಡಿ, ರಸ್ತೆ ವಿಸ್ತರಣಾ ಕಾರ್ಯದ ಜತೆಗೆ ಬಲಿಯಾಗಿರುವ ಒಂದು ಮರಕ್ಕೆ ಪರ್ಯಾಯವಾಗಿ ಕನಿಷ್ಠ ನಾಲ್ಕು ಗಿಡಗಳನ್ನು ಅರಣ್ಯ ಇಲಾಖೆ ನೆಟ್ಟು ಬೆಳಸಬೇಕು, ಅಲ್ಲಲ್ಲಿ ಗಿಡ ಮತ್ತು ಸಸಿಗಳನ್ನು ನೆಟ್ಟರೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.

ಹೆದ್ದಾರಿ ವಿಸ್ತರಣೆ ಪ್ರಕ್ರಿಯೆ ಒಂದೂವರೆ ವರ್ಷದಿಂದ ಬಾಕಿಯಿತ್ತು. ಚಿಂತಾಮಣಿಯಿಂದ ಚಿಕ್ಕಬಳ್ಳಾಪುರದವರೆಗೆ ಮರಗಳ ಹರಾಜು ಪ್ರಕ್ರಿಯೆ ಕೆಲ ದಿನಗಳ ಹಿಂದೆ ಪೂರ್ಣಗೊಂಡಿತ್ತು. ತಾಲ್ಲೂಕಿನ ಮಂಚೇನಹಳ್ಳಿಯಿಂದ ಹಿಂದೂಪುರದವರೆಗಿನ ಮರಗಳ ಹರಾಜು ಪ್ರಕ್ರಿಯೆ ಕೆಲ ದಿನಗಳ ಹಿಂದೆಯಷ್ಟೇ ನಡೆದಿದೆ. ಎರಡೂ ಬದಿ ಮರಗಳು ತೆರವಾದ ನಂತರ ಹೆದ್ದಾರಿ ಪೂರ್ಣ ಪ್ರಮಾಣದಲ್ಲಿ ವಿಸ್ತರಣೆಯಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios