ಪ್ರಸ್ತುತ ಮರೆಯಾಗುತ್ತಿರುವ ಪತ್ರ ಸಂಸ್ಕೃತಿ : ಪ್ರೊ.ಸಿ.ಪಿ. ಕೃಷ್ಣಕುಮಾರ್
ಪ್ರಸ್ತುತ ಪತ್ರ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್ [ಸಿಪಿಕೆ] ವಿಷಾದಿಸಿದರು.
ಮೈಸೂರು : ಪ್ರಸ್ತುತ ಪತ್ರ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್ [ಸಿಪಿಕೆ] ವಿಷಾದಿಸಿದರು.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕವಯತ್ರಿ ಡಾ.ಲತಾ ರಾಜಶೇಖರ್, ವೈದ್ಯ ಡಾ.ಎಚ್.ಬಿ. ರಾಜಶೇಖರ್ ದಂಪತಿಯ ಪತ್ರ ಸಂಕಲನ ಭಾವ ಸಂಗಮ ಸುವರ್ಣ ಸಂಭ್ರಮ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು,ಇಂತಹ ಕಾಲಘಟ್ಟದಲ್ಲಿ ಪ್ರೇಮಪತ್ರಗಳ ಸಂಕಲನ ಹೊರತಂದಿರುವುದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದು ವಿವಾಹಪೂರ್ವ ಪ್ರೇಮಪತ್ರಗಳಲ್ಲ, ವಿವಾಹೋತ್ತರ ಪ್ರೇಮ ಪತ್ರಗಳು. ಇಲ್ಲಿ ಪ್ರೇಮವಷ್ಟೇ ಇಲ್ಲ, ನಿವೇದನೆ, ಒಲುವಿನ ಓಲೆಗಳ ಕಟ್ಟು. ಮಧುರ ದಾಂಪತ್ಯಗೀತೆ ಎಂದು ಅವರು ಬಣ್ಣಿಸಿದರು.
ಈ ಪತ್ರಗಳಲ್ಲಿ ದಂಪತಿ ನಡುವಿನ ಅನೋನ್ಯತೆ, ಅನನ್ಯತೆ ಅಸೂಯೆ ಹುಟ್ಟಿಸುತ್ತದೆ ಎಂದರೆ ತಪ್ಪಾಗಲಾರದು. ಇಲ್ಲಿ ಪ್ರೇಮ ಮುಖ್ಯವಲ್ಲ, ಇಲ್ಲಿನ ಪತ್ರಗಳಲ್ಲಿ ಭಾವುಕತೆ, ಪ್ರೀತಿ, ವೈಚಾರಿಕ ಸ್ವರ್ಶ. ಒಂದು ರೀತಿಯಲ್ಲಿ ಇಂದ್ರಚಾಪ, ಆಧ್ಯಾತ್ಮಿಕ ದೀಪ ಎಂದರು.
ಡಾ.ರಾಜಶೇಖರ್ ಅವರು ಕನ್ನಡ ಹಾಗೂ ಇಂಗ್ಲಿಷ್ ಎರಡಲ್ಲೂ ಪತ್ರಗಳನ್ನು ಬರೆದಿದ್ದಾರೆ. ಲತಾ ಅವರು ಕನ್ನಡದಲ್ಲಿ ಮಾತ್ರ ಬರೆದಿದ್ದಾರೆ. ಆದರೆ ಅಲ್ಲಲ್ಲಿ ಇಂಗ್ಲಿಷ್ ಪದಗಳಿವೆ. ಇದೊಂದು ಅನುರೂಪದ, ಆದರ್ಶ ದಾಂಪತ್ಯ ಎಂಬುದರಲ್ಲಿ ಅನುಮಾನವೇ ಇಲ್ಲ. ಸಮಾನ ಮನೋಧರ್ಮ ಎದ್ದು ಕಾಣುತ್ತದೆ. ಸ್ಥಿರಪ್ರೇಮದ ಸಂಕೇತವಾಗಿವೆ. ಎಲ್ಲವೂ ಚಕ್ರ ರೂಪದಲ್ಲಿ ಇವೆಯೇ ಹೊರತು ವಕ್ರರೂಪದಲ್ಲಿ ಇಲ್ಲ ಎಂದು ಅವರು ವ್ಯಾಖ್ಯಾನಿಸಿದರು.
ಐವತ್ತು ವರ್ಷ ಈ ಪತ್ರಗಳನ್ನು ಕಾಪಿಟ್ಟುಕೊಂಡಿರುವುದು ದೊಡ್ಡದು. ಪ್ರೇಮ ಒಂದು ಬಗೆಯ ಹುಚ್ಚು. ಆದರೆ ಇಲ್ಲಿ ಹೃದಯ ಸಂಗಮವಿದೆ. ಸಂವಾದವಿದೆ. ಪ್ರೇಮ ಇದೆ, ಮೋಹವೂ ಇದೆ. ಪ್ರೇಮಿಗಳಿಗೆ ಬೋಧಪ್ರದವಾಗಿಯೂ ಇವೆ. ಓದುಗರಿಗೆ ತಾರುಣ್ಯ ಚಿಮ್ಮಿಸುವ ಶಕ್ತಿ ಇದೆ ಎಂದು ಅವರು ಹೇಳಿದರು.
ಮೈಸೂರು ರಂಗನಾಥ್ ಸಂಪಾದಕತ್ವದ ಸವಿಗನ್ನಡ ಪತ್ರಿಕೆ ಹೊರತಂದಿರುವ ರಾಜ ಸುವರ್ಣ- 50 ವಿಶೇಷ ಸಂಚಿಕೆಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕೃತಿ ಕುರಿತು ಕವಿ ಜಯಪ್ಪ ಹೊನ್ನಾಳಿ ಮಾತನಾಡಿದರು. ಶ್ರೀ ನಟರಾಜ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ ಮುಖ್ಯ ಅತಿಥಿಯಾಗಿದ್ದರು. ಡಾ.ಎಚ್.ಬಿ. ರಾಜಶೇಖರ್, ಡಾ.ಲತಾ ರಾಜಶೇಖರ್ ಇದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮೈಸೂರು ರಂಗನಾಥ್ ನಿರೂಪಿಸಿದರು. ನಿಸರ್ಗ ಪ್ರಾರ್ಥಿಸಿದರು.
ಐವತ್ತನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಡಾ.ರಾಜಶೇಖರ್ ಹಾಗೂ ಡಾ. ಲತಾ ರಾಜಶೇಖರ್ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳವರು ಸನ್ಮಾನಿಸಿದರು.