Chitradurga: ಜಿಲ್ಲಾಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನ್ ಸಮಸ್ಯೆಯಿಂದ ರೋಗಿಗಳ ಪರದಾಟ: ಸ್ಥಳೀಯರು ಆಕ್ರೋಶ
ಅದೊಂದು ಜಿಲ್ಲಾ ಕೇಂದ್ರದಲ್ಲಿ ಇರುವ ಸರ್ಕಾರಿ ಜಿಲ್ಲಾಸ್ಪತ್ರೆ. ಆದ್ರೆ ಅಲ್ಲಿನ ವ್ಯವಸ್ಥೆ ಮಾತ್ರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಿಂತ ಕಡೆಯಾಗಿದೆ .ಹೀಗಾಗಿ ವಿವಿದೆಡೆಗಳಿಂದ ಬರುವ ರೋಗಿಗಳು ಅಗತ್ಯ ಚಿಕಿತ್ಸೆ ಸಿಗಲಾರದೇ ಪರದಾಡುವಂತಾಗಿದೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಮೇ.29): ಅದೊಂದು ಜಿಲ್ಲಾ ಕೇಂದ್ರದಲ್ಲಿ ಇರುವ ಸರ್ಕಾರಿ ಜಿಲ್ಲಾಸ್ಪತ್ರೆ. ಆದ್ರೆ ಅಲ್ಲಿನ ವ್ಯವಸ್ಥೆ ಮಾತ್ರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಿಂತ ಕಡೆಯಾಗಿದೆ .ಹೀಗಾಗಿ ವಿವಿದೆಡೆಗಳಿಂದ ಬರುವ ರೋಗಿಗಳು ಅಗತ್ಯ ಚಿಕಿತ್ಸೆ ಸಿಗಲಾರದೇ ಪರದಾಡುವಂತಾಗಿದೆ. ಅಷ್ಟಕ್ಕೂ ಅಲ್ಲಾಗಿರುವ ಸಮಸ್ಯೆ ಏನಂತೀರ..? ಬಾಗಿಲು ಹಾಕಿರುವ ಸಿಟಿ ಸ್ಕ್ಯಾನ್ ಕೇಂದ್ರ. ಸ್ಕ್ಯಾನಿಂಗ್ ಗಾಗಿ ರೋಗಿಗಳ ಪರದಾಟ. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ. ಹೌದು,ಆರು ತಾಲ್ಲೂಕುಗಳಿಗೂ ಬೃಹತ್ ಆಸ್ಪತ್ರೆಯಾಗಿರೋ ಜಿಲ್ಲಾಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಜನ ರೋಗಿಗಳು ಚಿಕಿತ್ಸೆಗಾಗಿ ಧಾವಿಸ್ತಾರೆ. ಆದ್ರೆ ಇಲ್ಲಿನ ಸಿಟಿ ಸ್ಕ್ಯಾನ್ ಯಂತ್ರ ಮಾತ್ರ ಒಂದು ಚನ್ನಾಗಿದ್ರೆ, ಮತ್ತೊಂದು ದಿನ ಕೆಟ್ಟು ಹೋಗಿರ್ತದೆ.
ಒಮ್ಮೆ ಕೆಟ್ಟರೆ ತಿಂಗಳುಗಟ್ಟಲೇ ರಿಪೇರಿಯೇ ಆಗಲ್ಲ. ಹೀಗಾಗಿ ಎಕ್ಸರೇ ಮೊರೆ ಹೋಗ್ತಿದ್ದು ರೋಗದ ಸೊಂಕಿನ ಪ್ರಮಾಣ ಪತ್ತೆ ಹಚ್ಚಲು ಸಾಧ್ಯವಾಗ್ತಿಲ್ಲ. ಹೀಗಾಗಿ ಹೃದಯ ಸಂಬಂಧಿ ಕಾಯಿಲೆ ಹಾಗೂ ಅಸ್ತಮದ ರೋಗಿಗಳು ಸೇರಿದಂತೆ ಉಸಿರಾಟದ ತೊಂದರೆ ಹಾಗೂ ಕೋವಿಡ್ ನಂತಹ ಮಾರಕ ಕಾಯಿಲೆಯಿಂದ ಬಳಲುವ ರೋಗಿಗಳು ಸಿಟಿ ಸ್ಕ್ಯಾನ್ ಮಾಡಿಸಲು ಪರದಾಡುವಂತಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಸಿಟಿ ಸ್ಕ್ಯಾನಿಂಗ್ ಕೇಂದ್ರ ಮುಚ್ಚಲಾಗಿದೆ ಎಂದು ಬೋರ್ಡ್ ಹಾಕಿದ್ದು, ರೋಗಿಗಳು ಪರದಾಡ್ತಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿರುವ ಸಿಟಿಸ್ಕ್ಯಾನ್ ನೆಪಮಾತ್ರವಾಗಿದ್ದು, ಎಲ್ಲದಕ್ಕು ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ವೈದ್ಯರು ರೆಫರ್ ಮಾಡ್ತಿದ್ದಾರೆ.
ಮನೆಗೆ ಹೋದ್ರೆ ಪೊಲೀಸ್ ಕರೀತಾರೆ, ಪ್ರಶ್ನೆ ಮಾಡಿದ್ರೆ ಹೊಡೀತಾರೆ: ಸಿಪಿವೈ ವಿರುದ್ದ ಅಸಮಾಧಾನ ಹೊರಹಾಕಿದ ಪುತ್ರಿ ನಿಶಾ!
ಈ ಬಗ್ಗೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಗಮನಕ್ಕೆ ತಂದ್ರೆ, ಕಳೆದ ನಾಲ್ಕೈದು ದಿನಗಳ ಹಿಂದೆ ನಗರದಲ್ಲಿ ಬಂದ ಮಳೆಯಿಂದಾಗಿ ಸಿಡಿಲು ಬಡಿದು ಸಿಟಿ ಸ್ಕ್ಯಾನಿಂಗ್ ಸೆಂಟರ್ ಸಮಸ್ಯೆಯಾಗಿದೆ. ಮುಂಬೈ ನಿಂದ ಕೆಲ ಉಪಕರಣಗಳು ಬರಬೇಕಿದೆ ಒಂದೆರಡು ದಿನಗಳಲ್ಲಿ ಬಂದ ಕೂಡಲೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಒಟ್ಟಾರೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಸಿಟಿಸ್ಕ್ಯಾನಿಂಗ್ ಸೆಂಟರ್ ಕಳೆದೊಂದು ವಾರದಿಂದ ನಿರುಪಯುಕ್ತವಾಗಿದೆ. ಹೀಗಾಗಿ ಗಂಭೀರಸ್ಥಿತಿಯಲ್ಲಿರುವ ರೋಗಿಗಳು ಕಂಗಾಲಾಗಿದ್ದಾರೆ. ಆದ್ದರಿಂದ ಕೂಡಲೇ ಸಿಟಿಸ್ಕ್ಯಾನ್ ಯಂತ್ರವನ್ನು ರಿಪೇರಿ ಮಾಡಿಸಿ ರೋಗಿಗಳ ಜೀವ ಉಳಿಸಲು ಮುಂದಾಗಬೇಕಿದೆ.