ತುಮಕೂರು (ಅ.20): ಶಿರಾ ಉಪ ಚುನಾವಣೆ ಕಾವು ಏರುತ್ತಿರುವ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾರ್ಯಕರ್ತರ ಮುಂದೆ ಹೇಳಿದ ಗುಟ್ಟಿನ ವಿಚಾರವೊಂದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 

ಕಾಂಗ್ರೆಸ್‌ ನಾಯಕರಾದ ಡಾ.ಜಿ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ ಹೆಸರು ಉಲ್ಲೇಖಿಸಿ ಹೇಳಿರುವ ಈ ಗುಟ್ಟಿನ ಕುರಿತು ಪತ್ರಕರ್ತರು ಎಷ್ಟೇ ಕೆದಕಿದರೂ ‘ಗುಟ್ಟನ್ನು ರಟ್ಟು ಮಾಡುವ ರೀತಿ ಕೇಳಬೇಡಿ’ ಎಂದು ಹೇಳಿ ಸಿ.ಟಿ.ರವಿ ಜಾರಿಕೊಂಡಿದ್ದಾರೆ.

'ಕಾಂಗ್ರೆಸ್‌-ಎಸ್‌ಡಿಪಿಐ ವಾಟ್ಸಪ್ ಚಾಟ್‌ನಿಂದ ಸಂಚು ಬಯಲು' .

ಶಿರಾ ತಾಲೂಕು ದೊಡ್ಡಆಲದಮರದ ಬಳಿ  ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿ.ಟಿ.ರವಿ, ಶಿರಾದಲ್ಲಿ ಕಾಂಗ್ರೆಸ್‌ ಅನ್ನು ಗುಡಿಸಿ ಹಾಕಲು ಕಾಂಗ್ರೆಸ್‌ ನಾಯಕರೇ ನಮಗೆ ಸಹಾಯ ಮಾಡುತ್ತಿದ್ದಾರೆ. ಈ ಗುಟ್ಟನ್ನು ಯಾರಿಗೂ ಹೇಳ್ಬೇಡಿ ಎಂದು ಕಾರ್ಯಕರ್ತರಿಗೆ ಹೇಳಿದ ಅವರು, ನಂತರ ಡಾ.ಪರಮೇಶ್ವರ, ಕೆ.ಎನ್‌.ರಾಜಣ್ಣ ಅವರ ಹಿಂದಿನ ಚುನಾವಣಾ ಸೋಲನ್ನು ಭಾಷಣದಲ್ಲಿ ಪ್ರಸ್ತಾಪಿಸಿದ್ದರು.

ಸಭೆ ಬಳಿಕ ಪತ್ರಕರ್ತರು ಈ ಗುಟ್ಟಿನ ಕುರಿತು ಪ್ರಶ್ನಿಸಿದಾಗ, ‘ನಾನು ಗುಟ್ಟಾಗಿ ಹೇಳಿದ್ದನ್ನು ನೀವು ರಟ್ಟಾಗಿ ಕೇಳಬಾರದು. ನಮಗೆ ರಾಜಣ್ಣ, ಪರಮೇಶ್ವರ ಇಬ್ಬರೂ ಸ್ನೇಹಿತರು. 2013ರಲ್ಲಿ ಪರಮೇಶ್ವರ ಅವರನ್ನು ಯಾರು ಸೋಲಿಸಿದ್ರು, 2018ರಲ್ಲಿ ರಾಜಣ್ಣ ಅವರ ಸೋಲಿಗೆ ಯಾರಾರ‍ಯರು ಕಾರಣ ಎಂಬುದನ್ನು ಅವರ ಅಭಿಮಾನಿಗಳು ಬಹಳ ಬಾರಿ ಹೇಳಿಕೊಂಡಿದ್ದಾರೆ. ಅದು ಗುಟ್ಟು, ಯಾರಿಗೂ ಹೇಳಬೇಡಿ ಎಂದು ಹೇಳಿದ್ದಾರೆ. ಅದರಂತೆ ನಾನು ಯಾರಿಗೂ ಹೇಳಲ್ಲ. ಗುಟ್ಟಾಗಿ ಕೇಳಿದರೆ ಹೇಳುತ್ತೇನೆ ಎಂದು ಚಟಾಕಿ ಹಾರಿಸಿದರು.