ಮತ್ತೊಮ್ಮೆ ಮನೆಯಿಂದಲೇ ಕೆಲಸ ಮಾಡಿ ಎಂದು ಪ್ರಧಾನಿ ಮೋದಿ ಹೇಳಿರುವುದು ನಮ್ಮ ದೇಶವನ್ನು ವಿಪತ್ತಿನಿಂದ ಪಾರಾಗಲು ಪ್ರಧಾನಿ ಮೋದಿಯವರು ಈ ಕರೆ ನೀಡಿದ್ದಾರೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

Add Asianetnews Kannada as a Preferred SourcegooglePreferred

ಕೊಡಗು (ಮೇ.11): ಡಿಸೇಲ್ ಮತ್ತು ಪೆಟ್ರೋಲ್ ಕಡಿಮೆ ಬಳಸಿ, ಚಿನ್ನ ಖರೀದಿ ನಿಲ್ಲಿಸಿ ಮತ್ತೊಮ್ಮೆ ಮನೆಯಿಂದಲೇ ಕೆಲಸ ಮಾಡಿ ಎಂದು ಪ್ರಧಾನಿ ಮೋದಿ ಹೇಳಿರುವುದು ನಮ್ಮ ದೇಶವನ್ನು ವಿಪತ್ತಿನಿಂದ ಪಾರಾಗಲು ಪ್ರಧಾನಿ ಮೋದಿಯವರು ಈ ಕರೆ ನೀಡಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಹಾಗೂ ರಾಜ್ಯ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ಸಮೀಪದ ಖಾಸಗಿ ರೆಸಾರ್ಟ್ ನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಬಿಜೆಪಿ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಅವರು ಮಾತನಾಡಿದರು.

ಇರಾನ್ ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ಪೆಟ್ರೋಲ್ ಡೀಸೆಲ್ ಖರೀದಿಗೆ ದೊಡ್ಡ ಅಡೆತಡೆ ಬಂದಿದೆ. ಆ ಕಾರಣದಿಂದ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಬಾರಿ ಆಗಿದೆ. ಆ ಹಿನ್ನೆಲೆಯಲ್ಲಿ ಪ್ರಧಾನಿಯವರು ಈ ಕರೆಕೊಟ್ಟಿದ್ದಾರೆ. ಇದು ಸದುದ್ದೇಶದ ಕರೆ. ಯಾವುದರ ಖರೀದಿಗೆ ನಾವು ಹೊರದೇಶಗಳನ್ನು ಅವಲಂಬಿಸಿದ್ದೇವೆಯೋ, ಅದಕ್ಕೆ ಮಿತಿ ಹಾಕಿಕೊಳ್ಳಬೇಕಾಗಿದೆ. ಆ ಮೂಲಕ ನಾವು ಸ್ವಾವಲಂಬನೆ ಕಡೆಗೆ ಹೆಜ್ಜೆ ಹಾಕಬೇಕಾಗಿದೆ. ಆ ನಿಟ್ಟಿನಲ್ಲಿ ಒಂದು ವರ್ಷ ಈ ಕರೆಯನ್ನು ನಾವೆಲ್ಲರೂ ಪಾಲಿಸಬೇಕಾಗಿದೆ.

ಅಷ್ಟರಲ್ಲಿ ಸಮಸ್ಯೆಗಳು ಬಗೆಹರಿಯಬಹುದು. ಆಗ ನಾವು ವಿಪತ್ತಿನಿಂದ ಪಾರಾಗುತ್ತೇವೆ ಎನ್ನುವುದು ಪ್ರಧಾನಿಗಳ ಆಶಯ. ಹಾಗಾಗಿ ನಾವು ಎಲ್ಲರೂ ಅನಗತ್ಯ ಬಳಕೆಯನ್ನು ನಿಲ್ಲಿಸಬೇಕಾಗಿದೆ. ನಾವು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಬೇಕು. ಆ ಮೂಲಕ ನಾವು ರಾಷ್ಟ್ರೀಯ ಕಾರ್ಯಕ್ಕೆ ನಮ್ಮದೇ ಯೋಗ್ದಾನ ಕೊಡಲು ಸಾಧ್ಯವಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ಇನ್ನು ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದ್ದು ಅದು ಅಲುಗಾಡುತ್ತಿದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು ಅದು ನಿಜನೂ ಹೌದು ಎಂದು ಹೇಳಿದ್ದಾರೆ.

ಗೌರವ ತರುವ ವಿಚಾರ ಅಲ್ಲ

ರಾಜ್ಯದಲ್ಲಿ ಯಾವುದಾದರೂ ಜ್ವಲಂತ ವಿಷಯಗಳು ಬಂದಾಗಲೆಲ್ಲಾ ಸಿಎಂ ಕುರ್ಚಿ ಕಚ್ಚಾಟ ಮುನ್ನಲೆಗೆ ಬಂದು ಬಿಡುತ್ತದೆ. ಆಗ ಜ್ವಲಂತ ವಿಷಯಗಳು ಚರ್ಚೆಯೇ ಆಗಲ್ಲ, ಭ್ರಷ್ಟಾಚಾರದಲ್ಲಿ ರಾಜ್ಯ ನಂಬರ್ ಮೂರರಲ್ಲಿದೆ, ರೈತರ ಆತ್ಮ*ಹ*ತ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಸರ್ಕಾರಿ ನೌಕರರ ಆತ್ಮ*ಹ*ತ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಇನ್ನು ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇದ್ಯಾವುದೂ ರಾಜ್ಯಕ್ಕೆ ಗೌರವ ತರುವ ವಿಚಾರ ಅಲ್ಲ. ಸಮಸ್ಯೆಗಳ ಬಗೆಹರಿಸಬೇಕಾದ ಸರ್ಕಾರ, ತಾನೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಯಾವುದೇ ಗೊಂದಲವೇ ಇಲ್ಲದಂತ ಸಿಎಂ ಹುದ್ದೆ, ಗೊಂದಲಗಳಿಗೆ ಒಳಗಾಗುವಂತಹದ್ದು ಒಳ್ಳೆಯ ಲಕ್ಷಣ ಅಲ್ಲ ಎಂದಿದ್ದಾರೆ.

ನಿಮ್ಮ ಖುರ್ಚಿಯ ಸಮಸ್ಯೆಯನ್ನು ಸಾರ್ವಜನಿಕ ಸಮಸ್ಯೆಯನ್ನಾಗಿ ಮಾಡಿ, ಸಾರ್ವಜನಿಕ ಸಮಸ್ಯೆಗಳನ್ನು ಬದಿಗೆ ತಳ್ಳುವ ಕೆಲಸ ಮಾಡಬೇಡಿ ಎಂದು ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಸಚಿವ ಡಿ ಸುಧಾಕರ್ ನಿಧನಕ್ಕೆ ಅವರ ಕುಟುಂಬಕ್ಕೆ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಸಾಂತ್ವನ ಹೇಳಿದರು. ಸಚಿವ ಡಿ ಸುಧಾಕರ್ ಅವರ ಸಾವು ಅನಿರೀಕ್ಷಿತ. ಕಳೆದ 25 ದಿನಗಳಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಿ.ಟಿ.ರವಿ ಸಾಂತ್ವನ ಹೇಳಿದ್ದಾರೆ.