ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಡಕಾಯಿತಿ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆದರೆ ಆ ಆರೋಪಗಳಿಗೆ ಪುರಾವೆಗಳಿದ್ದರೆ ಸಾಬೀತುಪಡಿಸಲಿ ಎಂದು ಸಿ.ಟಿ.ರವಿ ಸವಾಲು ಹಾಕಿದ್ದಾರೆ.

ಚಿಕ್ಕಮಗಳೂರು (ಮೇ.10): ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಡಕಾಯಿತಿ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆದರೆ ಆ ಆರೋಪಗಳಿಗೆ ಪುರಾವೆಗಳಿದ್ದರೆ ಸಾಬೀತುಪಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಮತ ಡಕಾಯಿತಿ ಮಾಡಿದರು ಅವರ ಮೇಲೆ ಕಠಿಣ ಶಿಕ್ಷೆ ಆಗಲಿ. ಅದನ್ನು ಬಿಟ್ಟು ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯರಿದ್ದಾರೆ. ಅವರ ಬಳಿ ಯಾವುದೇ ದಾಖಲೆಗಳಿದ್ದರೆ ಅದನ್ನು ಸಾಬೀತುಪಡಿಸಲಿ. ಅದನ್ನು ಬಿಟ್ಟು ಸುಮ್ಮನೆ ಮಾತನಾಡಿದರೆ ಸರಿಯಲ್ಲ ಎಂದರು‌. ಒಂದು ವೇಳೆ ಮತ ಡಕಾಯತಿ ನಡೆದಿದ್ದರೆ ನಾನು ಸಹಿಸುವುದಿಲ್ಲ.‌ ಅವರು ಯಾವುದೇ ಪಕ್ಷದವರಾಗಿರಲಿ. ಮತ ಡಕಾಯತಿ ನಡೆದಿದೆ ಎಂದಾದರೆ ಚುನಾವಣಾ ಆಯೋಗದ ಮುಂದೆ ಇಲ್ಲವೆ ನ್ಯಾಯಾಲಯದ ಎದುರು ಸಾಬೀತುಪಡಿಸಿ. ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದರು.

2023ರ ಚುನಾವಣೆ ಫಲಿತಾಂಶ ಹಾಗೂ 2026ರಲ್ಲಿ ನಡೆದ ಮರುಮತ ಎಣಿಕೆ ಫಲಿತಾಂಶಗಳು ವೈರುಧ್ಯವಾಗಿವೆ. ಇದರಲ್ಲಿ ಒಂದು ಸತ್ಯವಾಗಿರಲು ಸಾಧ್ಯ. ಈ ಸತ್ಯಾಸತ್ಯತೆ ಬಗ್ಗೆ ಹೇಳುವ ಅಧಿಕಾರ ನನಗಿಲ್ಲ.‌ ಸಿಎಂ ಬಳಿ ದಾಖಲೆಗಳಿದ್ದರೆ ನ್ಯಾಯಾಲಯದ ಎದುರು ಇಡಲಿ. ಅದನ್ನು ಬಿಟ್ಟು ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ನ್ಯಾಯಾಲಯಕ್ಕೆ ದಾಖಲೆ ಕೊಡಿ ಎಂದು ಆಗ್ರಹಿಸಿದರು.

ಅಂಚೆ ಮತ ಟ್ಯಾಂಪರಿಂಗ್‌

ಚುನಾವಣಾ ಆಯೋಗ ಮತ್ತು ಆಯೋಗದ ಅಧಿಕಾರಿಗಳು ಶೃಂಗೇರಿ ವಿಧಾನಸಭಾ ಕ್ಷೇತ್ರ ಅಂಚೆ ಮತ ಮರು ಎಣಿಕೆಯಲ್ಲಿ ಟ್ಯಾಂಪರಿಂಗ್‌ ಮಾಡಿ ತಮ್ಮ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌.ಉಗ್ರಪ್ಪ ಆರೋಪಿಸಿದ್ದಾರೆ. ಕುತಂತ್ರ ಮತ್ತು ಷಡ್ಯಂತ್ರ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಳ್ಳುವ ಕೆಲಸ ಮಾಡಲಾಗಿದೆ ಎಂದರು. ಕಳೆದ 2023ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇತ್ತು. ಚುನಾವಣೆ ಸಂದರ್ಭದಲ್ಲಿ ಯಾವುದೇ ಲೋಪ ಉಂಟಾದರೆ, ಆಯೋಗಕ್ಕೆ ದೂರು ನೀಡಬೇಕಾಗಿತ್ತು.

ಆದರೆ, ಯಾವುದೇ ದೂರು ನೀಡಿಲ್ಲ. ಜತೆಗೆ, ಅಂಚೆ ಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಎಲ್ಲ ಚುನಾವಣಾ ಅಭ್ಯರ್ಥಿಗಳು ಮತ ಎಣಿಕೆ ಸರಿಯಾಗಿದೆ ಎಂದು ಒಪ್ಪಿ ಸಹಿ ಮಾಡಿದ್ದಾರೆ. ಆಗ ಯಾಕೆ ಡಬ್ಬಲ್‌ ಎಂಟ್ರಿ ಕಾಣಿಸಲಿಲ್ಲ? ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ. ಮತ ಎಣಿಕೆ ನಂತರ ಮತ ಪತ್ರ ಹಾಗೂ ಇವಿಎಂಗಳನ್ನು ಸೀಲ್‌ ಮಾಡಿ ಚುನಾವಣಾ ಆಯೋಗ ತನ್ನ ಭದ್ರತೆಯಲ್ಲಿ ಸಂರಕ್ಷಣೆ ಮಾಡಿಕೊಳ್ಳುತ್ತದೆ. ಹಾಗಾದರೆ, 2023ರಲ್ಲಿ ಸಿಂಧು ಆಗಿದ್ದ ಮತಗಳು ಮರು ಎಣಿಕೆಯಲ್ಲಿ ಹೇಗೆ ಅಸಿಂಧು ಆಗಿವೆ. ಇದರಲ್ಲ ಸ್ಪಷ್ಟವಾಗಿ ಅಂಚೆ ಮತ ಪತ್ರ ಟ್ಯಾಂಪರಿಂಗ್‌ ಆಗಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.