ಗಣೇಶ ಮೂರ್ತಿ ಬೇಡ ಎನ್ನಲು ಜಮೀರ್ ಯಾರು?: ಸಿ.ಟಿ.ರವಿ
ಗಣೇಶ ಮೂರ್ತಿ ಇಡಬೇಕು ಎಂದರೆ ಪ್ರತಿಷ್ಠಾಪಿಸಿಯೇ ತೀರುತ್ತೇವೆ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ಬೆಂಗಳೂರು(ಆ.11): ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಹ್ಮದ್ ಖಾನ್ ಅವರ ಅಪ್ಪನ ಆಸ್ತಿಯೇ? ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದಾದರೆ ಇಟ್ಟೇ ಇಡುತ್ತೇವೆ. ಬೇಡ ಎನ್ನಲು ಜಮೀರ್ ಯಾರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗಣೇಶ ಮೂರ್ತಿ ಕೂರಿಸಲು ಇವರ ಅಪ್ಪಣೆ ಏಕೆ ಬೇಕು? ನಾವು ಅರಬ್‌ನಲ್ಲಿ ಗಣೇಶ ಮೂರ್ತಿ ಇಡುತ್ತಿದ್ದೇವಾ? ಅರಬ್‌ನಲ್ಲಿ ಗಣೇಶ ಮೂರ್ತಿ ಕೂರಿಸಬೇಕಾದರೆ ಜಮೀರ್ ಮತ್ತವರ ಪೂರ್ವಜರ ಅಪ್ಪಣೆ ಬೇಕಾಗಬಹುದು. ಆದರೆ, ನಮ್ಮ ದೇಶದಲ್ಲಿ ಗಣೇಶ ಮೂರ್ತಿ ಕೂರಿಸಲು ಜಮೀರ್ ಅಪ್ಪಣೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಗಣಪತಿ ಇಡಬೇಕೋ, ಬೇಡವೋ ಎಂದು ಜಮೀರ್ ಕೇಳಿ ತೀರ್ಮಾನ ಮಾಡಬೇಕಾ? ಜಮೀರ್ ಕೇಳಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾದ ಅಗತ್ಯ ಇಲ್ಲ. ನಮಗೆ ತಾಕತ್ತು ಇದ್ದಿದ್ದು, ನಾವು ಇಡುತ್ತೇವೆ. ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ. ಬಂದು ತಡೆಯಲಿ ನೋಡೋಣ ಎಂದು ಸವಾಲು ಹಾಕಿದ ಅವರು, ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಜಯಚಾಮರಾಜ ಒಡೆಯರ್ ಹೆಸರು ಇಡಲಿ. ಈ ನಿಟ್ಟಿನಲ್ಲಿ ನಮಗೆ ಬೇಕಾಗಿರುವುದು ಬಿಬಿಎಂಪಿ, ಪೊಲೀಸ್ ಇಲಾಖೆ ಅನುಮತಿಯೇ ಹೊರತು ಜಮೀರ್ ಅನುಮತಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಈದ್ಗಾದಲ್ಲಿ ಜಮೀರ್ ಧ್ವಜಾರೋಹಣ ಬೇಡ, ಒಂದು ವೇಳೆ ಮಾಡಿದರೆ ಅಶಾಂತಿ ಸೃಷ್ಟಿ: ಹಿಂದೂ ಸಂಘಟನೆ
ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಏಕೆ ಅನುಮತಿ ಬೇಕು? ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದೇವೆ. ಎಂಟು ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ಅಂದು, ರಾಷ್ಟ್ರಧ್ವಜ ಹಿಡಿದುಕೊಂಡು ಹೋದವರ ಮೇಲೆ ಗೋಲಿಬಾರ್ ಮಾಡಿದ್ದರು. ಕಾಂಗ್ರೆಸ್‌ನ ಈ ಪಾಪ ಏಳು ಸಮುದ್ರದಲ್ಲಿ ಮುಳುಗಿದರೂ ಹೋಗಲ್ಲ ಎಂದರು.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರು ಪ್ರತಿದಿನ ಸುದ್ದಿಯಲ್ಲಿರಬೇಕು ಎಂಬುದು ಅವರ ಕನಸು. ಹೀಗಾಗಿ ಈ ವಿಚಾರ ಕೆದಕುತ್ತಿದ್ದಾರೆ. ಹಿಂದೆ ವೀರೇಂದ್ರ ಪಾಟೀಲ್ ದಾಖಲೆ ಸ್ಥಾನ ಗೆದ್ದು ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಆರೋಗ್ಯ ಸರಿ ಇಲ್ಲದಿದ್ದ ಕಾರಣ ನೀಡಿ, ಏರ್‌ಪೋರ್ಚ್‌ನಲ್ಲಿ ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಚೀಟಿ ನೀಡುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಮಾಡಿದ್ದರು. ಇದು ಕಾಂಗ್ರೆಸ್ ಸಂಸ್ಕೃತಿ ಎಂದು ಕಿಡಿಕಾರಿದರು.
ಅಳೆದು ತೂಗಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿದ್ದು, ಯಾವುದೇ ಬದಲಾವಣೆ ಇಲ್ಲ. ನಮ್ಮ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಲು ಕಾಂಗ್ರೆಸ್ ಯಾವ ಊರೂ ದಾಸಪ್ಪ? ಅವರ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ತೀರ್ಮಾನ ಮಾಡಲಿ ಎಂದು ತಿರುಗೇಟು ನೀಡಿದರು.