ರೈತರಿಗೆ ಬೆಳೆ ನಷ್ಟ ಬಾಕಿ ಹಣ ಬಿಡುಗಡೆ: ಸಚಿವ ಬೊಮ್ಮಾಯಿ
* ಕೊರೋನಾ ಮೂರನೇ ಅಲೆಯಿಂದ ರಕ್ಷಣೆಗೆ ಮಕ್ಕಳ ಆರೋಗ್ಯ ತಪಾಸಣೆ ಶುರು
* ಹಾವೇರಿಯಲ್ಲಿ ಗೃಹ ಸಚಿವ ಬೊಮ್ಮಾಯಿ ಚಾಲನೆ
* ಕೋವಿಡ್ ವ್ಯಾಕ್ಸಿನ್ ಹಾಕಲು ಕ್ರಮ
ಹಾವೇರಿ(ಜೂ.25): ಕೋವಿಡ್ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಗಾಗಿ ರಾಜ್ಯದಲ್ಲೇ ಪ್ರಥಮವಾಗಿ ಜಿಲ್ಲೆಯಲ್ಲಿ 16 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೂರನೇ ಅಲೆಯ ಪರಿಣಾಮ ಕ್ಷೀಣಿಸುವವರೆಗೂ ಅವರಿಗೆ ಅಗತ್ಯ ವೈದ್ಯಕೀಯ ಉಪಚಾರದ ನಿರ್ವಹಣೆ ಮೂಲಕ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ನಾಗೇಂದ್ರನಮಟ್ಟಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞರು ಪಾಲ್ಗೊಂಡು ತಪಾಸಣೆ ನಡೆಸಲಿದ್ದಾರೆ ಎಂದರು. ಜೂ.30ರೊಳಗಾಗಿ ಜಿಲ್ಲೆಯ 2.75 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲಾಗುವುದು. ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಮಕ್ಕಳ ಪಾಲಕರಿಗೂ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ವ್ಯಾಕ್ಸಿನ್ ಹಾಕಲು ಕ್ರಮವಹಿಸಲಾಗಿದೆ ಎಂದರು.
ಇದೇ ವೇಳೆ ಮಕ್ಕಳಿಗೆ ಲಸಿಕೆ ಬರುವವರೆಗೂ ಅವರ ಆರೋಗ್ಯದ ಕಾಳಜಿ ಪ್ರಮುಖವಾಗಿದೆ. ಹೀಗಾಗಿ ತಪಾಸಣೆಯ ಸಂದರ್ಭದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್, ಪ್ರೋಟಿನ್ ಸೇರಿದಂತೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೂರಕ ಸಾಮಗ್ರಿಗಳನ್ನು ನೀಡಲಾಗುವುದು ಎಂದರು.
ಡೆಲ್ಟಾಪ್ಲಸ್ ವೈರಸ್ ಬಗ್ಗೆ ರಾಜ್ಯದಲ್ಲಿ ತೀವ್ರ ನಿಗಾ: ಸಚಿವ ಬೊಮ್ಮಾಯಿ
10 ಸಾವಿರ ರೈತರಿಗೆ ಬೆಳೆ ನಷ್ಟ ಬಾಕಿ ಹಣ ಬಿಡುಗಡೆ
ಜಿಲ್ಲೆಯ ಸವಣೂರ ತಾಲೂಕಿನ 10 ಸಾವಿರ ರೈತರಿಗೆ 2019-20ನೇ ಸಾಲಿನ ಬೆಳೆ ನಷ್ಟ ಪರಿಹಾರದ ಬಾಕಿ ಉಳಿದಿದ್ದ 5 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2019-20ನೇ ಸಾಲಿನ ಬೆಳೆನಷ್ಟ ಪರಿಹಾರ ಹಣ ಬಾಕಿ ಉಳಿದಿದ್ದು ಈ ಕುರಿತಂತೆ ಜಿಲ್ಲಾಡಳಿತದೊಂದಿಗೆ ನಡೆಸಿದ ವಿಡಿಯೋ ಸಭೆಯಲ್ಲಿ ವರದಿ ಕಳುಹಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಬಾಕಿ ಉಳಿದುಕೊಂಡಿದ್ದ 5 ಕೋಟಿ ಬೆಳೆ ನಷ್ಟಪರಿಹಾರ ಬಿಡುಗಡೆಗೆ ಮನವಿ ಮಾಡಿಕೊಳ್ಳಲಾಗಿತ್ತು. ಇಂದು ಸರ್ಕಾರ ಹಣ ಬಿಡುಗಡೆ ಮಾಡಿದೆ. 10 ಸಾವಿರ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದರು.