Asianet Suvarna News Asianet Suvarna News

ಹಾವೇರಿ: ಅಧಿಕ ಮಳೆಯಿಂದ ಬೆಳಗೆ ಹಾನಿ, ಬಣಗುಡುತ್ತಿರುವ ಎಪಿಎಂಸಿ

ನೆರೆಯಿಂದ ಹಾನಿಯಾದ ಬೆಳೆ, ಬಣಗುಡುತ್ತಿರುವ ಎಪಿಎಂಸಿ| ಈ ಅವಧಿಯಲ್ಲಿ ದಿನಕ್ಕೆ 10 ಸಾವಿರ ಹತ್ತಿ ಅಂಡಿಗೆ ಬರುತ್ತಿತ್ತು, ಈಗ 1 ಸಾವಿರ ಅಂಡಿಗೆಯೂ ಬರುತ್ತಿಲ್ಲ| ಅತಿವೃಷ್ಟಿಹಾನಿ ಒಂದಡೆಯಾದರೆ ಬೆಳೆಗಳಿಗೆ ಉತ್ತಮ ದರ ಸಿಗದೇ ಬೀಜ, ಗೊಬ್ಬರಕ್ಕೆ ಮಾಡಿದ ಖರ್ಚು ಕೈಸೇರದ ಪರಿಸ್ಥಿತಿ ನಿರ್ಮಾಣ|

Crop Loss for Heavy Rain in Haveri District
Author
Bengaluru, First Published Nov 22, 2019, 10:02 AM IST

ವೀರೇಶ್‌ ಮಡ್ಲೂರ

ಹಾವೇರಿ(ನ.22): ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಕಳೆದ ವರ್ಷ ಗೋವಿನಜೋಳ ಹಾಗೂ ಹತ್ತಿ ಬೆಳೆಗಳಿಂದ ಕಂಗೊಳಿಸುತ್ತಿತ್ತು. ಆದರೆ, ಈ ಬಾರಿ ಅತಿವೃಷ್ಟಿ ಹಾಗೂ ಮಳೆ ಹಾವಳಿಯಿಂದಾಗಿ ಬೆಳೆಗಳು ಹಾನಿಯಾಗಿ ಮಾರುಕಟ್ಟೆಗೆ ಬೆಳೆಗಳು ಆವಕವಾಗದೇ ಮಾರುಕಟ್ಟೆ ಪ್ರದೇಶ ಬಣಗುಡುತ್ತಿದೆ.

ಸತತ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯ ರೈತರು ಬರಗಾಲಕ್ಕೀಡಾಗಿ ನಷ್ಟ ಅನುಭವಿಸಿದ್ದರು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಉಂಟಾದ ಮಳೆ ಹಾಗೂ ಅತಿವೃಷ್ಟಿಗೆ ತುತ್ತಾಗಿ ಬೆಳೆಗಳು ಹಾನಿಯಾಗಿದ್ದು, ಸಾಲಸೋಲ ಮಾಡಿ ಗೊಬ್ಬರ, ಬೀಜ ಖರೀದಿಸಿ ಬಿತ್ತಿದ್ದ ಬೆಳೆಗಳು ಕೈ ಸೇರದೇ ಮತ್ತೇ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಆವಕದಲ್ಲಿ ಇಳಿಕೆ:

ಕಳೆದ ಬಾರಿ ನಗರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಟ್ಟು 10 ಲಕ್ಷ ಕ್ವಿಂಟಲ್‌ ಗೋವಿನಜೋಳ ಹಾಗೂ 1 ಲಕ್ಷ ಕ್ವಿಂಟಲ್‌ ಹತ್ತಿ ಆವಕವಾಗಿತ್ತು. ದರವೂ ಸಹ ಉತ್ತಮವಾಗಿ ದೊರಕಿತ್ತು. ನವೆಂಬರ್‌ ಮೊದಲವಾರ ಸೇರಿದಂತೆ ಈ ಬಾರಿ ಒಟ್ಟು 1.59 ಲಕ್ಷ ಕ್ವಿಂಟಲ್‌ ಗೋವಿನಜೋಳ ಹಾಗೂ 9651 ಕ್ವಿಂಟಲ್‌ ಹತ್ತಿ ಮಾತ್ರ ಮಾರುಕಟ್ಟೆಗೆ ಬಂದಿದೆ. ನೆರೆ ಹಾವಳಿಯಿಂದ ರೈತರ ಬೆಳೆಗಳು ಹಾನಿಗಿಡಾಗಿದ್ದೇ ಮಾರುಕಟ್ಟೆಗೆ ಬೆಳೆಗಳು ಆವಕವಾಗದಿರುವುದಕ್ಕೆ ಕಾರಣ ಎನ್ನಲಾಗುತ್ತಿದ್ದು, ಗೋವಿನ ಜೋಳ ಹಾಗೂ ಹತ್ತಿ ಬೆಳೆ ಪ್ರಮಾಣ ಕುಂಠಿತಗೊಂಡಿದ್ದರಿಂದ ಮಾರುಕಟ್ಟೆಪ್ರದೇಶ ಬಣಗುಡುತ್ತಿದೆ.

ದರದಲ್ಲಿ ಇಳಿಕೆ:

ಪ್ರಸ್ತುತ ಉತ್ತಮ ಗುಣಮಟ್ಟದ ಗೋವಿನಜೋಳ ಕ್ವಿಂಟಲ್‌ಗೆ 1600-1750 ಗಳಿದ್ದು, ಹಸಿ ಗೋವಿನಜೋಳ 1200 ದರ ಇದೆ. ಪ್ರತಿ ವರ್ಷ ಗೋವಿನಜೋಳ ಕೊಯ್ಲು ಸಂದರ್ಭದಲ್ಲಿ ಆವಕ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ಆವಕದಲ್ಲಿ ಕಡಿಮೆ ಪ್ರಮಾಣ ಕಂಡು ಬರುತ್ತಿದೆ. ದರವೂ ಸಹ ಹೇಳಿಕೊಳ್ಳುವಷ್ಟು ಇಲ್ಲ. ನೆರೆ ಹಾವಳಿಯಿಂದ ಅಲ್ಲಲ್ಲಿ ಉಳಿದಿದ್ದ ಅಲ್ಪಪ್ರಮಾಣ ಗೋವಿನಜೋಳ ಬೆಳೆಗೆ ಸಹ ಉತ್ತಮ ಬೆಲೆ ದೊರಕದೇ ರೈತರು ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಆದರೆ, ಈ ಬಾರಿ ಹತ್ತಿ ದರ ಉತ್ತಮವಾಗಿದ್ದು 3700-5300 ದರದಲ್ಲಿ ಮಾರಾಟವಾಗುತ್ತಿದೆ.

ಕಳೆದ ಬಾರಿ ಉತ್ತಮ ಗುಣಮಟ್ಟದ ಗೋವಿನಜೋಳ 2300 ರಿಂದ . 2600 ದರ ಇತ್ತು. ಈ ಬಾರಿ ಬೆಲೆಯಲ್ಲಿ ಕುಸಿತ ಕಂಡು ಬರುತ್ತಿದೆ. ಆದರೆ, ಹತ್ತಿ ಬೆಳೆಗೆ ಉತ್ತಮ ದರ ದೊರಕುತ್ತಿದೆ. ನಗರದ ಮಾರುಕಟ್ಟೆಗೆ ಸುತ್ತಮುತ್ತಲಿನ ಗ್ರಾಮದ ರೈತರು ಗೋವಿನಜೋಳ ಹಾಗೂ ಹತ್ತಿ ತರುತ್ತಿದ್ದರು. ಈ ಬಾರಿ ಆವಕದಲ್ಲಿ ಪ್ರಮಾಣದಲ್ಲಿ ಕುಂಠಿತಗೊಂಡಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಬರದಿಂದ ನಷ್ಟಅನುಭವಿಸಿದ್ದೇವೆ, ಈ ಬಾರಿ ಅತಿವೃಷ್ಟಿಯಿಂದ ನಷ್ಟಅನುಭವಿಸುವಂತಾಗಿದೆ. ಅತಿವೃಷ್ಟಿಗೆ ತುತ್ತಾದ ಗೋವಿನಜೋಳ ಇಳುವರಿ ಕಡಿಮೆಯಾಗಿದ್ದು, ಈ ಬಾರಿ ಎಕರೆಗೆ ಬರಿ 8-10 ಕ್ವಿಂಟಲ್‌ ಇಳುವರಿ ಬಂದಿದೆ. ಕಡಿಮೆ ಎಂದರೂ ಎಕರೆಗೆ 15-20 ಕ್ವಿಂಟಲ್‌ ಇಳುವರಿ ಬರುವ ನಿರೀಕ್ಷೆ ಇತ್ತು ಎಂದು ಮಣ್ಣೂರು ರೈತ ಯಲ್ಲಪ್ಪ ಕಮತರ ಅವರು ಹೇಳಿದ್ದಾರೆ. 

ಜಿಲ್ಲೆಯಲ್ಲಿ ಉಂಟಾದ ನೆರೆ ಹಾವಳಿಯಿಂದ ಹತ್ತಿ ಬೆಳೆ ಕೈ ಸೇರದಂತಾಗಿದೆ. ಜಮೀನುಗಳಿಗೆ ನೀರು ಹೊಕ್ಕು ಅಪಾರ ಹಾನಿಗೆ ತುತ್ತಾಗುವಂತಾಗಿದ್ದು, ಒಂದು ಎಕರೆಗೆ 8-10 ಕ್ವಿಂಟಲ್‌ ಹತ್ತಿ ಇಳುವರಿ ಬರುತ್ತಿತ್ತು ಆದರೆ, ಅತಿವೃಷ್ಟಿಯಿಂದಾಗಿ ಎಕರೆಗೆ 2-3 ಕ್ವಿಂಟಲ್‌ ಹತ್ತಿ ಬಂದಿದೆ ಎಂದು ಶಿರಮಾಪುರ ರೈತ ಗುಡ್ಡಪ್ಪ ಚನ್ನಪ್ಪನವರ ಅವರು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೆರೆ ಹಾವಳಿ ಹಾಗೂ ಅತಿವೃಷ್ಟಿಗೆ ಸಿಲುಕಿದ ಗೋವಿನಜೋಳ ಹಾಗೂ ಹತ್ತಿ ಬೆಳೆ ಗುಣಮಟ್ಟಕಡಿಮೆಯಾಗಿದೆ. ಇದರಿಂದ ಉತ್ತಮ ದರವೂ ದೊರಕುತ್ತಿಲ್ಲ. ಅತಿವೃಷ್ಟಿಹಾನಿ ಒಂದಡೆಯಾದರೆ ಬೆಳೆಗಳಿಗೆ ಉತ್ತಮ ದರ ಸಿಗದೇ ಬೀಜ, ಗೊಬ್ಬರಕ್ಕೆ ಮಾಡಿದ ಖರ್ಚು ಕೈಸೇರದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಮಣ್ಣೂರ ರೈತ ಶೇಖಪ್ಪ ಪೂಜಾರ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರ ನಾಯಕ ಅವರು, ಈ ಹಿಂದಿನ ವರ್ಷಕ್ಕೂ ಈಸಲಕ್ಕೂ ಕೃಷಿ ಉತ್ಪನ್ನಗಳ ಆವಕ ಬಹಳ ಕಡಿಮೆಯಿದೆ. ಹತ್ತಿ, ಮೆಕ್ಕೆಜೋಳದ ಆವಕ ಶೇ. 80ರಷ್ಟು ಕಡಿಮೆಯಾಗಿದೆ. ಅಧಿಕ ಮಳೆಯಿಂದ ಇಳುವರಿ ಪ್ರಮಾಣವೂ ಕುಸಿದಿದೆ. ಈ ಅವಧಿಯಲ್ಲಿ ಎಪಿಎಂಸಿ ಆವರಣದಲ್ಲಿ ಕಾಲಿಡಲು ಜಾಗವಿರುತ್ತಿರಲಿಲ್ಲ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios