ಸಾವಳಗಿ(ಏ.02): ಕೃಷ್ಣಾ ನದಿಯಲ್ಲಿ ಮೊಸಳೆಯೊಂದು ಎಮ್ಮೆಯನ್ನು ಎಳೆದೊಯ್ಯುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಬಳಿ ಬುಧವಾರ ನಡೆದಿದೆ. 

ಶೂರ್ಪಾಲಿ ಗ್ರಾಮದ ರೈತ ಸಂಗಪ್ಪ ಹುನ್ನೂರ ಅವರಿಗೆ ಸೇರಿದ ಎಮ್ಮೆ ನೀರು ಕುಡಿಯಲು ಹೋದಾಗ ಅದರ ಮೇಲೆ ಏಕಾಏಕಿ ದಾಳಿ ಮಾಡಿ ಮೊಸಳೆ ನದಿ ಮಧ್ಯಕ್ಕೆ ಎಳೆದೊಯ್ಯಿತು. ವಿಷಯ ತಿಳಿದ ಗ್ರಾಮಸ್ಥರು ನಾವಿಕನೊಂದಿಗೆ ಬೋಟ್‌ ಮೂಲಕ ಎಮ್ಮೆಯ ರಕ್ಷಣೆಗೆ ಮುಂದಾದರು. ಅಷ್ಟರಲ್ಲಿ ಮೊಸಳೆ ಎಮ್ಮೆಯನ್ನು ತಿರುವು-ಮುರುವು ಮಾಡಲಾರಂಭಿಸಿತು. ಎಮ್ಮೆಯನ್ನೂ ದಡಕ್ಕೆ ತಂದರು ಅಷ್ಟರಲ್ಲಿ ಎಮ್ಮೆ ಸಾವನ್ನಪ್ಪಿತ್ತು.

ಎರಡು ದಿನಗಳಿಂದ ಮೊಸಳೆ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನದಿಯ ದಡದಲ್ಲಿನ ಜಮೀನಿನಲ್ಲಿ ಕೆಲಸ ಮಾಡಲು ಸಹ ರೈತರು ಹಾಗೂ ರೈತ ಕಾರ್ಮಿಕರು ಭಯ ಪಡುತ್ತಿದ್ದಾರೆ. ಜಾನುವಾರುಗಳನ್ನು ನದಿಯಲ್ಲಿ ತೊಳೆಯಲು ಹೋಗಲು ಸಹ ಭಯಪಡುತ್ತಿದ್ದಾರೆ. ಹಗಲು, ರಾತ್ರಿ ಎನ್ನದೆ ಯಾವಾಗ ಮೊಸಳೆ ಬರುತ್ತದೋ ಎಂಬ ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ಹಾಗಾಗಿ ಕೂಡಲೇ ಮೊಸಳೆಯನ್ನು ಪತ್ತೆ ಮಾಡಿ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದರು.

ಈ ವರ್ಷ ಹೇಗಿರಲಿದೆ ಮಳೆ : ಭವಿಷ್ಯವಾಣಿ ಏನು ಹೇಳಿದೆ..?

ಇತ್ತೀಚೆಗೆ ಬಿದರಿ ಗ್ರಾಮದಲ್ಲಿ ಕೃಷ್ಣಾ ನದಿ ದಡದಲ್ಲಿ ಬೃಹತ್‌ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿತ್ತು. ಗ್ರಾಮದ ಜನರು ಭಯಗೊಂಡು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಮೊಸಳೆಯನ್ನು ಸೆರೆ ಹಿಡಿದು ಆಲಮಟ್ಟಿ ಹಿನ್ನೀರನಲ್ಲಿ ಬಿಟ್ಟಿದ್ದನ್ನು ಸ್ಮರಿಸಬಹುದು.

ನದಿ ದಡದಲ್ಲಿರುವ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ಮೊಸಳೆ ದಾಳಿಗೆ ಬಲಿಯಾದ ಎಮ್ಮೆಗೆ ಸರ್ಕಾರದಿಂದ ಮಾಲೀಕರಿಗೆ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೃಷ್ಣಾ ನದಿ ತೀರದಲ್ಲಿ ಮೊಸಳೆಗಳು ಕಂಡು ಬಂದರೆ ತಕ್ಷಣ ಮೊ.ನಂ. 9686701786 ಕರೆ ಮಾಡಿ ಎಂದು ಸಾವಳಗಿ ಉಪವಲಯ ಅರಣ್ಯಾಧಿಕಾರಿ ಎಚ್‌.ಕೆ.ಮಳ್ಳಿ ತಿಳಿಸಿದ್ದಾರೆ.