ನೋಂದಣಿ ಬಳಿಕವೇ ಕೋವಿಡ್ ಮೃತದೇಹ ಚಿತಾಗಾರಕ್ಕೆ ರವಾನೆಗೆ ಅವಕಾಶ
ಅಂತ್ಯ ಸಂಸ್ಕಾರ ಸುಗಮವಾಗಿ ನಡೆಸಲು ವ್ಯವಸ್ಥೆ| ಚಿತಾಗಾರದಲ್ಲಿ ಎಲ್ಲ ಸಿಬ್ಬಂದಿ ಪಿಪಿಇ ಕಿಟ್ ಧರಿಸಬೇಕು| ಮಾರ್ಷಲ್‌ಗಳು ನಿತ್ಯ ಪಿಪಿಇ ಕಿಟ್ ಧರಿಸಿರುವ ಸಿಬ್ಬಂದಿ ಛಾಯಾಚಿತ್ರ ತೆಗೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲು ನಿರ್ದೇಶನ|
ಬೆಂಗಳೂರು(ಏ.26): ಕೋವಿಡ್‌ನಿಂದ ಮೃತರಾದವರ ಅಂತ್ಯಸಂಸ್ಕಾರ ಸುಗಮವಾಗಿ ನಡೆಯಲು ಬಿಬಿಎಂಪಿ ಸಹಾಯವಾಣಿ ಮೂಲಕ ನೋಂದಣಿ ಮಾಡಿಸಿದ ಬಳಿಕ ಚಿತಾಗಾರಕ್ಕೆ ಮೃತದೇಹ ಸಾಗಿಸುವ ವ್ಯವಸ್ಥೆ ಮಾಡಲಾಗಿದೆ.
ಪಾಲಿಕೆಯು ಕೋವಿಡ್ ಸೋಂಕಿತರ ಮೃತದೇಹ ಶವಸಂಸ್ಕಾರಕ್ಕೆ ಏಳು ವಿದ್ಯುತ್ ಚಿತಾಗಾರಗಳು ಹಾಗೂ ಎರಡು ತೆರೆದ ಚಿತಾಗಾರಗಳು ಸೇರಿದಂತೆ ಒಟ್ಟು 9 ಚಿತಾಗಾರಗಳನ್ನು ಸಂಪೂರ್ಣವಾಗಿ ಕಾಯ್ದಿರಿಸಿದೆ. ಇನ್ನು ಮುಂದೆ ಕೋವಿಡ್ ಸೋಂಕಿತರ ಮೃತದೇಹ ಅಂತ್ಯಸಂಸ್ಕಾರ ಮಾಡಲು ಪಾಲಿಕೆಯ ಸಹಾಯವಾಣಿ ಮೂಲಕ ನೋಂದಣಿ ಮಾಡಬೇಕು. ನೋಂದಣಿ ಬಳಿಕವೇ ಚಿತಾಗಾರಗಳಿಗೆ ಮೃತದೇಹಗಳನ್ನು ಸಾಗಿಸಬೇಕು. ಈ ಮಧ್ಯೆ ರಾಜ್ಯ ಸರ್ಕಾರದ ಪರಿಷ್ಕೃತ ಆದೇಶದ ಅನ್ವಯ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಐದು ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕೊರೋನಾ ಇದೆಯಾ? ಇವರನ್ನು ಸಂಪರ್ಕಿಸಿ
ಶವ ಸಾಗಣೆಗೆ ವಾಹನಗಳ ಸೇವೆ ಪಡೆಯಲು ಸಹಾಯವಾಣಿ (08022493202 ಮತ್ತು 08022493203), ಮೊಬೈಲ್ ಹಾಗೂ ವಾಟ್ಸಾಪ್ (87921 62736) ಮೂಲಕ ಸಂಪರ್ಕಿಸಬಹುದಾಗಿದೆ.
ಚಿತಾಗಾರಗಳಿಗೆ ನಿಯೋಜನೆ ಮಾಡಿರುವ ಮಾರ್ಷಲ್‌ಗಳು ಕೋವಿಡ್ ಸಹಾಯವಾಣಿ ಮುಖಾಂತರ ನೋಂದಣಿಯಾದ ಆರ್‌ಎಫ್‌ಐಡಿ ಅಳವಡಿಸಿರುವ ಶವ ಸಾಗಣೆ ವಾಹನಗಳಿಗೆ ಮಾತ್ರ ಚಿತಾಗಾರ ಪ್ರವೇಶಕ್ಕೆ ಅನುಮತಿ ನೀಡಲಿದ್ದಾರೆ. ಚಿತಾಗಾರದಲ್ಲಿ ಎಲ್ಲ ಸಿಬ್ಬಂದಿ ಪಿಪಿಇ ಕಿಟ್ ಧರಿಸಬೇಕು, ಈ ಸಂಬಂಧ ಮಾರ್ಷಲ್‌ಗಳು ನಿತ್ಯ ಪಿಪಿಇ ಕಿಟ್ ಧರಿಸಿರುವ ಸಿಬ್ಬಂದಿ ಛಾಯಾಚಿತ್ರ ತೆಗೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲು ನಿರ್ದೇಶಿಸಲಾಗಿದೆ.
ಅಂತ್ಯಸಂಸ್ಕಾರದ ಚಿತಾಗಾರಗಳು
ಕೋವಿಡ್ ಸೋಂಕಿತರ ಮೃತದೇಹ ಅಂತ್ಯ ಸಂಸ್ಕಾರಕ್ಕೆ ಮೇಡಿ ಅಗ್ರಹಾರ, ಕೂಡ್ಲು, ಪಣತ್ತೂರು, ಕೆಂಗೇರಿ, ಸುಮ್ಮನಹಳ್ಳಿ, ಪೀಣ್ಯ, ಬನಶಂಕರಿ ವಿದ್ಯುತ್ ಚಿತಾಗಾರ ಕಾಯ್ದಿರಿಸಲಾಗಿದೆ. ಅಂತೆಯೆ ಟಿ.ಆರ್.ಮಿಲ್ ಮತ್ತು ತಾವರೆಕೆರೆಯ ತೆರೆಯ ಸ್ಮಶಾನಗಳನ್ನು ಕಾಯ್ದಿರಿಸಲಾಗಿದೆ.