Asianet Suvarna News Asianet Suvarna News

ಸೋಂಕಿತರ ಅಂತ್ಯಕ್ರಿಯೆ: ಸ್ಮಶಾನಕ್ಕಾಗಿ ಬದಲಿ ಜಾಗ

ಸ್ಥಳೀಯ ಗ್ರಾಮಸ್ಥರ ತೀವ್ರ ವಿರೋಧಕ್ಕೆ ಮಣಿದಿರುವ ಬೆಂಗಳೂರು ನಗರ ಜಿಲ್ಲಾಡಳಿತವೂ ಕರೋನಾ ಸೋಂಕಿತರ ಅಂತ್ಯಕ್ರಿಯೆಗಾಗಿ ಸ್ಮಶಾನ ನಿರ್ಮಾಣಕ್ಕೆ ಬದಲಿ ಜಾಗ ಹುಡುಕಿದೆ.

cremation place of covid19 victims in Bangalore to be Changed
Author
Bangalore, First Published Jul 28, 2020, 7:57 AM IST

ಬೆಂಗಳೂರು(ಜು.28): ಸ್ಥಳೀಯ ಗ್ರಾಮಸ್ಥರ ತೀವ್ರ ವಿರೋಧಕ್ಕೆ ಮಣಿದಿರುವ ಬೆಂಗಳೂರು ನಗರ ಜಿಲ್ಲಾಡಳಿತವೂ ಕರೋನಾ ಸೋಂಕಿತರ ಅಂತ್ಯಕ್ರಿಯೆಗಾಗಿ ಸ್ಮಶಾನ ನಿರ್ಮಾಣಕ್ಕೆ ಬದಲಿ ಜಾಗ ಹುಡುಕಿದೆ.

ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಬೆಂಗಳೂರು ನಗರ ಜಿಲ್ಲಾಡಳಿತ ನಗರದ ನಾಲ್ಕು ದಿಕ್ಕಿನ ಎಂಟು ಕಡೆ ಒಟ್ಟು 35 ಎಕರೆ ಪ್ರದೇಶವನ್ನು ಗುರುತಿಸಿತ್ತು. ಆದರೆ, ಸೋಂಕಿನ ಆತಂಕದಿಂದ ಜಿಲ್ಲಾಡಳಿತ ಗುರುತಿಸಿದ ಜಾಗದ ಸುತ್ತಮುತ್ತಲಿನ ಕೆಲವು ಗ್ರಾಮದ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬದಲಿ ಪ್ರದೇಶವನ್ನು ಗುರುತಿಸಿದೆ.

ಸ್ಮಶಾನ ಭೂಮಿ ಕಡಿತ:

ಈ ಮೊದಲು ಕೊರೋನಾ ಸೋಂಕಿತರ ಅಂತ್ಯಕ್ರಿಯೆಗೆ ಮೊದಲು 35.18 ಎಕರೆ ಪ್ರದೇಶವನ್ನು ಗುರುತಿಸಲಾಗಿತ್ತು. ಆದರೆ, ಗ್ರಾಮಸ್ಥರು ವಿರೋಧ ಹಾಗೂ ಕಾನೂನು ವ್ಯಾಜ್ಯ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ 23.1 ಎಕರೆ ಪ್ರದೇಶವನ್ನು ಮಾತ್ರ ಗುರುತಿಸಿದೆ. ಇನ್ನುಳಿದ 12.17 ಎಕರೆ ಪ್ರದೇಶವನ್ನು ಗುರುತಿಸುವುದಕ್ಕೆ ತಾಲೂಕು ದಂಡಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಾಲೂಕು ದಂಡಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನೂ ಹಸ್ತಾಂತರವಾಗದ ಸ್ಮಶಾನಗಳು:

ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ಎಲ್ಲ ಸ್ಮಶಾನಗಳು ಬಹುತೇಕ ಭರ್ತಿಯಾಗಿವೆ. ಹೀಗಾಗಿ, ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುವುದಕ್ಕೆ ಸ್ಥಳಾವಕಾಶವಿಲ್ಲ. ತ್ವರಿತವಾಗಿ ಕೊರೋನಾ ಸೋಂಕಿತರ ಅಂತ್ಯಕ್ರಿಯೆಗೆ ಸ್ಮಶಾನ ಬೇಕಾಗಿದೆ. ಆದರೆ, ಗುರುತಿಸಿದ ಸ್ಮಶಾನ ಭೂಮಿಯ ಸರ್ವೇಕ ಕಾರ್ಯ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹಸ್ತಾಂತರ ಕಾರ್ಯ ತಡವಾಗುತ್ತಿದೆ. ತಾಂತ್ರಿಕ ಪ್ರಕ್ರಿಯೆ ಮಾತ್ರ ಬಾಕಿ ಇದ್ದು, ಒಂದೆರಡು ದಿನದಲ್ಲಿ ಜಿಲ್ಲಾಡಳಿತ ಗುರುತಿಸಿದ ಸ್ಮಶಾನ ಭೂಮಿ ಬಿಬಿಎಂಪಿಗೆ ಹಸ್ತಾಂತರಗೊಳ್ಳಲಿದೆ ಎಂದು ಜಿಲ್ಲಾಡಳಿತ ಕಚೇರಿಯ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಮೊದಲು ಗುರುತಿಸಿದ್ದ ಸ್ಥಳ

ಬೆಂಗಳೂರು ಉತ್ತರ ತಾಲೂಕಿನ ಗಿಡ್ಡೆನಹಳ್ಳಿಯಲ್ಲಿ 4 ಎಕರೆ, ದಕ್ಷಿಣ ತಾಲೂಕಿನಲ್ಲಿ ಸೋಮನಹಳ್ಳಿಯಲ್ಲಿ 1.18 ಎಕರೆ, ಗುಳಿಕಮಲೆಯಲ್ಲಿ ಎರಡು ಕಡೆ ತಲಾ 4 ಎಕರೆ, ತಿಪ್ಪಗೊಂಡನಹಳ್ಳಿಯಲ್ಲಿ 5 ಎಕರೆ, ಆನೇಕಲ್‌ ತಾಲೂಕಿನಲ್ಲಿ 3 ಎಕರೆ ಹಾಗೂ ಯಲಹಂಕ ತಾಲೂಕಿನ ಎಂ.ಹೊಸಹಳ್ಳಿಯಲ್ಲಿ 2 ಎಕರೆ, ಹುತ್ತಹಳ್ಳಿಯಲ್ಲಿ 2 ಎಕರೆ, ಮಾರೇನಹಳ್ಳಿಯಲ್ಲಿ 5 ಎಕರೆ ಹಾಗೂ ಮಾವಳ್ಳಿಪುರದಲ್ಲಿ 5 ಸೇರಿದಂತೆ ಒಟ್ಟು ಒಟ್ಟು 35.18 ಎಕರೆ ಗುರುತಿಸಲಾಗಿತ್ತು.

ಹೊಸದಾಗಿ ಗುರುತಿಸಿರುವ ಜಾಗ

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ವ್ಯಾಪ್ತಿಯಲ್ಲಿ ಗಿಡ್ಡೆನಹಳ್ಳಿಯಲ್ಲಿ 4 ಎಕರೆ, ಆಗ್ರಹಾರ ಪಾಳ್ಯದಲ್ಲಿ 3 ಎಕರೆ, ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಗುಳಿಕಮಲೆಯಲ್ಲಿ 4 ಎಕರೆ, ಆನೇಕಲ್‌ ತಾಲೂಕಿನ ಜಿಗಣಿ ಹೋಬಳಿಯ ಗಿಡ್ಡೆನಹಳ್ಳಿಯಲ್ಲಿ 4 ಎಕರೆ, ಸರ್ಜಾಪುರ ಹೋಬಳಿಯ ಇಟ್ಟಂಗೂರಲ್ಲಿ 3.39 ಎಕರೆ ಹಾಗೂ ಯಲಹಂಕ ತಾಲೂಕಿನ ಜಾಲ ಹೋಬಳಿಯ ಕುದುರೆಗೆರೆಯಲ್ಲಿ 1.10 ಎಕರೆ, ಮಹದೇವಕೋಡಿಗೇಹಳ್ಳಿಯಲ್ಲಿ 1.20 ಎಕರೆ, ಮಾರೇನಹಳ್ಳಿಯಲ್ಲಿ 0.12 ಗುಂಟೆ, ಬೋಯಿಲಹಳ್ಳಿಯಲ್ಲಿ 1 ಎಕರೆ, ಹುಣುಚೂರಲ್ಲಿ 1 ಎಕರೆ ಗುರುತಿಸಲಾಗಿದೆ.

ಸಕಾಲಕ್ಕೆ ಆ್ಯಂಬುಲೆನ್ಸ್‌ ಬಾರದೆ ಸೋಂಕಿತ ಸಾವು

ನಗರದ ನಾಲ್ಕು ದಿಕ್ಕಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸ್ಮಶಾನ ಗುರುತಿಸಲಾಗಿದೆ. ಕೆಲವು ಗ್ರಾಮದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬದಲಿ ಜಾಗ ಗುರುತಿಸಲಾಗಿದೆ. ಜಿಲ್ಲಾಡಳಿತದಿಂದ ಶೀಘ್ರವಾಗಿ ಬಿಬಿಎಂಪಿಗೆ ಹಸ್ತಾಂತರಗೊಂಡಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

-ವಿಶ್ವನಾಥ ಮಲೇಬೆನ್ನೂರು

Follow Us:
Download App:
  • android
  • ios