Asianet Suvarna News Asianet Suvarna News

ಚಾಮರಾಜನಗರ: ಸನ್ಮಾನ ಕಲ್ಪಿಸದ ಜಿಲ್ಲಾಡಳಿತ, ಗ್ರಾಪಂ ಆವರಣದಲ್ಲಿಯೇ ಶವಸಂಸ್ಕಾರ..!

Chamarajanagar Flood: ನದಿಯ ಪ್ರವಾಹದಿಂದ ಸ್ಮಶಾನಕ್ಕೆ ತೆರಳಲು ಸಾಧ್ಯವಾಗದೇ ಗ್ರಾಮಸ್ಥರು ಪೊಲೀಸ್‌ ಹಾಗೂ ತಹಸೀಲ್ದಾರರ ವಿರೋಧದ ನಡುವೆಯೂ ಗ್ರಾ.ಪಂ. ಜಾಗದಲ್ಲಿ ಶವ ಸಂಸ್ಕಾರ ಮಾಡಿದ್ದಾರೆ. 

Cremation at Grama Panchayat Premises in Chamarajanagar grg
Author
First Published Sep 2, 2022, 1:16 PM IST

ಯಳಂದೂರು(ಸೆ.02): ಶವ ಸಂಸ್ಕಾರ ಮಾಡಲು ಜಾಗವಿಲ್ಲದೆ ಗ್ರಾ.ಪಂ. ಜಾಗದಲ್ಲಿಯೇ ಪೊಲೀಸ್‌ ವೈಫಲ್ಯದ ನಡುವೆಯೇ ಗ್ರಾಮಸ್ಥರು ಶವ ಸಂಸ್ಕಾರ ಮಾಡಿದ ಘಟನೆ ನಡೆದಿದೆ. ಮಾಂಬಳ್ಳಿ ಗ್ರಾಮದ ಜಯಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು. ಶವ ಸಂಸ್ಕಾರಕ್ಕೆ ಗ್ರಾಮದ ಹೊರ ವಲಯದಲ್ಲಿ ಇದ್ದ ತಾತ್ಕಾಲಿಕ ಸ್ಮಶಾನಕ್ಕೆ ಸುವರ್ಣಾವತಿ ನದಿಯನ್ನು ದಾಟಿ ಹೋಗಬೇಕಿತ್ತು. ಆದರೆ, ಈ ನದಿಗೆ ಸೇತುವೆ ಇಲ್ಲದ ಕಾರಣ ನದಿಯನ್ನೇ ಹಾಯ್ದುಕೊಂಡು ಹೋಗುವ ಪರಿಸ್ಥಿತಿ ಹಿಂದಿನಿಂದಲೂ ನಿರ್ಮಾಣವಾಗಿದೆ. ಈಗ ನದಿಯ ಪ್ರವಾಹದಿಂದ ಸ್ಮಶಾನಕ್ಕೆ ತೆರಳಲು ಸಾಧ್ಯವಾಗದೇ ಗ್ರಾಮಸ್ಥರು ಪೊಲೀಸ್‌ ಹಾಗೂ ತಹಸೀಲ್ದಾರರ ವಿರೋಧದ ನಡುವೆಯೂ ಗ್ರಾ.ಪಂ. ಜಾಗದಲ್ಲಿ ಶವ ಸಂಸ್ಕಾರ ಮಾಡಿದ್ದಾರೆ.

ಸ್ಧಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಎಸಿ ಮತ್ತು ತಹಸೀಲ್ದಾರ್‌ ಭೇಟಿ ನೀಡಿ ಇಲ್ಲಿ ಶವ ಸಂಸ್ಕಾರ ಮಾಡುವಂತಿಲ್ಲ ಎಂದಿದ್ದಾರೆ. ಇದಕ್ಕೆ ಜಗ್ಗದ ಗ್ರಾಮಸ್ಥರು ಸ್ಮಶಾನವಿಲ್ಲ, ಇರುವ ತಾತ್ಕಾಲಿಕ ಸ್ಮಶಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಸ್ಮಶಾನಕ್ಕೆ ಜಾಗಕೊಡಿ, ಇಲ್ಲವಾದರೆ ಗ್ರಾ.ಪಂ. ಜಾಗದಲ್ಲಿಯೇ ಶವ ಸಂಸ್ಕಾರ ಮಾಡುತ್ತೇವೆ ಎಂದು ಪಟ್ಟುಹಿಡಿದರು. ಗ್ರಾಮಸ್ಥರ ಮನವೊಲಿಸಲು ತಹಸೀಲ್ದಾರ್‌ ಹಾಗೂ ಪೊಲೀಸ್‌ ಅಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರು ಗ್ರಾಮಸ್ಥರು ಪಟ್ಟು ಸಡಲಿಸಲಿಲ್ಲ. ಮಾಂಬಳ್ಳಿಯಲ್ಲಿ ದಲಿತ ಸಮುದಾಯಕ್ಕೆ ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲದೆ ಊರ ಹೊರಗೆ ತಾತ್ಕಾಲಿಕ ಸ್ಮಶಾನ ಮಾಡಿಕೊಂಡಿದ್ದರು. ಇಲ್ಲಿಗೆ ಹೋಗಲು ಸಮರ್ಪಕ ರಸ್ತೆ ಇಲ್ಲದೆ, ಶವ ಹೊತ್ತು ಸುವರ್ಣಾವತಿ ನದಿ ದಾಟಬೇಕಿದೆ. ಸುವರ್ಣಾವತಿ ನದಿ ತುಂಬಿ ಹರಿಯುತ್ತಿದ್ದು, ಸ್ಮಶಾನಕ್ಕೆ ಹೋಗಲು ಸಾಧ್ಯವಾಗದೆ ಗುರುವಾರ ಗ್ರಾಮಸ್ಥರು ಪಂಚಾಯತಿ ಜಾಗದಲ್ಲಿಯೇ ಶವ ಸಂಸ್ಕಾರ ಮಾಡಿದ್ದಾರೆ.

ಇದನ್ನೂ ಓದಿ: ದೃಢ ನಿರ್ಧಾರದಿಂದ ಮಾತ್ರ ರಾಜಕೀಯದಲ್ಲಿರಲು ಸಾಧ್ಯ: ಸಂಸದ ಶ್ರೀನಿವಾಸ್ ಪ್ರಸಾದ್‌

ಮಾಂಬಳ್ಳಿಯವರೇ ಇಬ್ಬರು ಶಾಸಕರಾಗಿದ್ದರೂ ಸ್ಮಶಾನವಿಲ್ಲ!

ಮಾಂಬಳ್ಳಿ ಯಳಂದೂರು ತಾಲೂಕಿನ ಪ್ರತಿಷ್ಠಿತ ಗ್ರಾಮ, ಇಬ್ಬರು ಶಾಸಕರಿದ್ದಾರೆ. ಇದೇ ಗ್ರಾಮದವರು ಜಿಲ್ಲಾಧಿಕಾರಿಯೂ ಆಗಿದ್ದರೂ ಇದುವರಗೆ ಸ್ಮಶಾನ ವ್ಯವಸ್ಧೆ ಸಾಧ್ಯವಾಗಿಲ್ಲ. ಗ್ರಾಮ ಪಂಚಾಯತಿ ಜಾಗದಲ್ಲಿ ಶವ ಸಂಸ್ಕಾರ ಮಾಡುತ್ತಿರುವ ವಿಷಯ ತಿಳಿದ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್‌, ಎಸಿ ಗೀತಾ ಹುಡೇದ ಹಾಗೂ ತಹಸೀಲ್ದಾರ್‌ ಆನಂದಪ್ಪ ನಾಯಕ್‌ ಸ್ಥಳಕ್ಕೆ ಆಗಮಿಸಿ ಜನರ ಮನವೂಲಿಸುವಲ್ಲಿ ವಿಫಲರಾಗಿರುವ ಮೂಲಕ ಜಿಲ್ಲಾಡಳಿತ ಮತ್ತು ಪೊಲೀಸ್‌ ಆಡಳಿತ ವ್ಯವಸ್ದೆ ನಾಚುವಂತೆ ಮಾಡಿದ್ದಾರೆ.

ಎಸ್ಪಿಗೆ ಸಚಿವರಿಂದ ಫುಲ್‌ ಕ್ಲಾಸ್‌

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ರನ್ನು ಒಂದೇ ದಿನ ಎರಡು ಕಡೆ ಸಚಿವ ವಿ.ಸೋಮಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಮೊದಲಿಗೆ ಕೊಳ್ಳೇಗಾಲದ ಆಗಮಿಸಿದ ಸಚಿವ ಸೋಮಣ್ಣ, ಎಸ್ಪಿ ಶಿವಕುಮಾರ್‌ ಸ್ಥಳಕ್ಕೆ ಬಾರದಿರುವ ಬಗ್ಗೆ ಮೊಬೈಲ್‌ನಲ್ಲೇ ಬೆಂಗಳೂರಿನಿಂದ ನಾನೇ ಬಂದಿದ್ದೀನಿ. ನೀವ್ಯಾಕೆ ಇನ್ನೂ ಬಂದಿಲ್ಲ. ಚಾಮರಾಜನಗರದಿಂದ ಕೊಳ್ಳೇಗಾಲ ಬರೋದಕ್ಕೆ ಎಷ್ಟುಸಮಯ ಬೇಕು ನಿಮಗೆ ಎಂದು ಗರಂ ಆದರು.

ಇದನ್ನೂ ಓದಿ: ಮಳೆ ಹಾನಿ ಪ್ರದೇಶಗಳಿಗೆ ಸಚಿವ ಬಿ.ಸಿ.ಪಾಟೀಲ್ ಭೇಟಿ

ನಂತರ ಚಾಮರಾಜನಗರಕ್ಕೆ ಬರುವಷ್ಟರಲ್ಲಿ ಮಾಧ್ಯಮಗಳಲ್ಲಿ ಮಾಂಬಳ್ಳಿಯಲ್ಲಿ ಗ್ರಾ.ಪಂ. ಆವರಣದಲ್ಲೇ ಶವಸಂಸ್ಕಾರ ಮಾಡಿರುವ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಎಸ್ಪಿಯ ಮೇಲೆ ಮತ್ತೆ ಕೆಂಡಾಮಂಡಲವಾದ ಸೋಮಣ್ಣ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಳಿ ತಪ್ಪುತ್ತಿದೆ ಏನ್‌ ಮಾಡ್ತಿದೀರಿ? ಗ್ರಾಮಸ್ಥರನ್ನು ಯಾಕೆ ಮನವೊಲಿಸಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಸಮಜಾಯಿಷಿ ನೀಡಿದ ಎಸ್ಪಿ ಶಿವಕುಮಾರ್‌, ಸ್ಮಶಾನದ ವ್ಯವಸ್ಥೆ ಮಾಡುವುದು ಕಂದಾಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಎಂದಾಗ, ಮತ್ತಷ್ಟುಕೆರಳಿದ ಸೋಮಣ್ಣ, ಸ್ಥಳದಲ್ಲಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ನೀವು ಮಾಡಿದರೆ, ಪರ್ಯಾಯ ಕ್ರಮಗಳ ಬಗ್ಗೆ ಅವರು ಕೆಲಸ ಮಾಡುತ್ತಾರೆ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಮಾತ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ ಎಂದು ಗರಂ ಆದರು.

Follow Us:
Download App:
  • android
  • ios